ಕಾರ್ಕಳ: “ಕಲಿಕೆಯಿಂದ ಗಳಿಕೆ ಎಂಬ ಮಾತು ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಲಿವಿಕೆ ಎನ್ನುವುದು ಸಂಪತ್ತು ಗಳಿಸುವ ಸಾಧನವಾಗಿದೆ” ಎಂದು ಮಂಗಳೂರಿನ ಸಾಫ್ಟ್ ವೇರ್ ಸಂಸ್ಥೆ ಎ1 ಲಾಜಿಕ್ಸ್ ನ ಮುಖ್ಯಸ್ಥ ಪ್ರವೀಣ್ ಉಡುಪ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ‘ಸಾಫ್ಟೆವೇರ್ ಡೆವಲಪ್ ಮೆಂಟ್ ಆಂಡ್ ಇನ್ನೋವೇಶನ್ ಸೆಂಟರ್’ (ಎಸ್.ಡಿ.ಐ.ಸಿ)ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. “ನಿಟ್ಟೆ ತಾಂತ್ರಿಕ ವಿದ್ಯಾಲಯದ ಹಳೇ ವಿದ್ಯಾರ್ಥಿಯಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಬಹಳ ಸಂತಸ ತಂದಿದೆ. ವಿದ್ಯಾಸಂಸ್ಥೆಯು ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನೂ ಒದಗಿಸುವಲ್ಲಿ ಹೆಜ್ಜೆಹಾಕುತ್ತಿರುವುದು ಸಂತಸದ ವಿಚಾರವಾಗಿದೆ. ಇಂತಹ ಯೋಜನೆಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಉತ್ತಮ ಭವಿಷ್ಯ ರೂಪಿಸಲು ಮಾರ್ಗಸೂಚಿಸಿದಂತಾಗುತ್ತದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಮಂಗಳೂರಿನ ಹುಟ್ರಿಫ್ಲಯ್ ಇನ್ಫೋಟೇನ್ ಮುಖ್ಯಸ್ಥೆ ರೇಣುಕಾ ಮಾತನಾಡಿ, “ಇಂತಹ ಕಾರ್ಯಕ್ರಮಗಳು ವಿದ್ಯಾಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳಿಗೆ ಒಂದು ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಕಾಲೇಜು ವಿದ್ಯಾಭ್ಯಾಸ ಹಾಗೂ ಪ್ರಾಯೋಜಿಕ ಜ್ಞಾನದ ನಡುವೆ ಇರುವ ಅಂತರವನ್ನು ಕಡಿತಗೊಳಿಸುವಲ್ಲಿ ಸಹಕಾರಿಯಾಗಲಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್. ಚಿಪ್ಳೂಣ್ಕರ್ ಮಾತನಾಡಿ “ಈ ಎಸ್.ಡಿ.ಐ.ಸಿ ವಿಭಾಗವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಸಂಪಾದನೆಯಾಗಬೇಕು ಎನ್ನುವ ದೃಷ್ಠಿಯನ್ನಿಟ್ಟು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ನಡೆಸುತ್ತಿದ್ದು ಇಂತಹ ಯೋಜನೆಗಳು ಕಾಲೇಜಿನಲ್ಲಿ ನಿರಂತರವಾಗಿ ನಡೆಯಬೇಕು” ಎಂದು ಅವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜು ಹಾಗೂ ಎ1 ಲಾಜಿಕ್ಸ್, ಹುಟ್ರಿಫ್ಲಯ್ ಇನ್ಫೋಟೇನ್ಮೆಂಟ್ ನಡುವಿನ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಸ್.ಡಿ.ಐ.ಸಿ ಸೆಂಟರ್ ನ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣಿ ಆರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದರು. ಎಸ್.ಡಿ.ಐ.ಸಿ ನ ಸಂಯೋಜಕ ಪ್ರೊ.ದೇವಿದಾಸ್ ವಂದಿಸಿದರು.