ಮೂಡುಬಿದಿರೆ: ಹತ್ತು ದಿನಗಳ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬರ ಶವವು ನಿಡ್ಡೋಡಿ ಶುಂಠಿಲ ಪದವಿನಲ್ಲಿ ಪತ್ತೆಯಾಗಿದೆ. ಸ್ಥಳೀಯ ಟೈಲರ್ ಮಹಿಳೆಯನ್ನು ಕೊಲೆ ಮಾಡಿದ್ದು, ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಿಡ್ಡೋಡಿಯ ಯಮಲ ನಿವಾಸಿ ರೇವತಿ( 46) ಅವರು ಜ.12ರಂದು ನಿಡ್ಡೋಡಿಗೆ ಹೋಗಿ ಬರುವುದಾಗಿ ತನ್ನ ಅತ್ತೆಯ ಬಳಿ ತಿಳಿಸಿ ಹೋಗಿದ್ದು ನಂತರ ನಾಪತ್ತೆಯಾಗಿದ್ದರು. ಗ್ರಾಮಸ್ಥರು ಶುಂಠಿಲಪದವಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಶೇಖರ್ ಶೆಟ್ಟಿ(48) ಅವರ ಬಗ್ಗೆ ಸಂದೇಹ ವ್ಯಕ್ತಪಡಿಸಿ, ಆತ ರೇವತಿಯವರ ಚಿನ್ನವನ್ನು ಬ್ಯಾಂಕಿನಲ್ಲಿದ್ದ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೇಖರ್ ಶೆಟ್ಟಿಯನ್ನು ಠಾಣೆಗೆ ಕರೆಸಿ ಮೊದಲ ಬಾರಿ ವಿಚಾರಣೆ ನಡೆಸಿದಾಗ ತಾನು ರೇವತಿಯವರ ಚಿನ್ನಾಭರಣವನ್ನು ಅಡವಿಟ್ಟಿದ್ದು ನಿಜ, ಆದರೆ ಅದರ 30,000 ಹಣವನ್ನು ಆಕೆ ಪಾವತಿಸಬೇಕಾಗಿದ್ದ ಗುಂಪಿನ ಸಾಲಕ್ಕಾಗಿ ಮರುಪಾವತಿಸಲಾಗಿದೆ. ಆಕೆಯ ನಾಪತ್ತೆಗೆ ತಾನು ಕಾರಣವಲ್ಲವೆಂದು ತಿಳಿಸಿದಾಗ ಆತನನ್ನು ಬಿಡಲಾಗಿತ್ತು. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಮಾಡುವುದೆಂದು ಗ್ರಾಮಸ್ಥರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಮೂಡುಬಿದಿರೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ವಿಚಾರಣೆ ನಡೆಸಿದಾಗ, ಶೇಖರ್ ಶೆಟ್ಟಿ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ರೇವತಿಯವರು ಅಡವಿಟ್ಟ ಬಂಗಾರವನ್ನು ಪದೇ ಪದೇ ಕೇಳುತ್ತಿದ್ದಾಗ ಬೇರೆ ದಾರಿ ಕಾಣದೆ ಚಿನ್ನವನ್ನು ಬಿಡಿಸಲು ಹಣ ಕೊಡುತ್ತೇನೆಂದು ಕಾಡು ಪ್ರದೇಶಕ್ಕೆ ಬರ ಹೇಳಿ ಆಕೆಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಚಿನ್ನವನ್ನು ಮರಳಿಸದಿದ್ದರೆ, ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಆರೋಪದ ಹೂರಿಸಿರುವುದಾಗಿ ಬೆದರಿಸಿದ ಕಾರಣ ಆಕೆಯನ್ನು ತಾನು ಕೊಲೆ ಮಾಡಿರುವುದಾಗಿಯೂ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ಶೇಖರ್ ಶೆಟ್ಟಿ ಅವರ ಮನೆಯವರು ಬಂದು ಈ ಪರಿಸ್ಥಿತಿ ನೋಡಲಿ, ಇಲ್ಲವಾದರೆ ನಾವು ಆತನನ್ನು ಕರೆದುಕೊಂಡು ಹೋಗಲು ಬಿಡುವುದಿಲ್ಲ. ಅವರ ಮನೆಯವರು ಬರುವರೆಗೆ ರೇವತಿ ಶವ ಇಲ್ಲೇ ಇರಲಿ ಎಂದು ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸ್ ಜೀಪನ್ನು ಎದುರು ಅಡ್ಡ, ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಕೆಲವು ಗ್ರಾಮಸ್ಥರು ಸಮಜಾಯಿಸಿದಾಗ ಪರಿಸ್ಥಿತಿ ಶಾಂತ ಸ್ಥಿತಿಗೆ ಬಂತು.