ಬಂಟ್ವಾಳ: ಇದು ಸರಕಾರಿ ಶಾಲೆ ಅನ್ನೋದಕ್ಕಿಂತ ತರಕಾರಿ ಶಾಲೆ ಎನ್ನುವುದು ಒಳ್ಳೆಯದೋ ಏನೋ.. ಯಾಕೆಂದರೆ ಈ ಊರ ಗ್ರಾಮಸ್ಥರು, ಇಲ್ಲಿನ ಶಿಕ್ಷಕರು ಈ ಸರಕಾರಿ ಶಾಲೆಯನ್ನು ಮನೆಗಿಂತಲೂ ಹೆಚ್ಚು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದು, ಇಲ್ಲಿನ ಮುಖ್ಯ ಶಿಕ್ಷಕನ ಪ್ರೋತ್ಸಾಹ, ಸಹ ಶಿಕ್ಷಕಿಯರ ಶ್ರಮ, ಊರಿನವರ ಸಹಕಾರ, ಮಕ್ಕಳ ಉತ್ಸಾಹದಿಂದ ಬೆಳೆದು ನಿಂತ ಹಚ್ಚ ಹಸುರಾದ ಸುಂದರ ಕೈ ತೋಟ ಶಿಕ್ಷಣಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.
ರಸ್ತೆಗಿಂತ ಒಂದಿಷ್ಟು ಎತ್ತರದಲ್ಲಿರುವ ವೀರಕಂಬ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಮೆಟ್ಟಿಲು ಏರಿ ಅಂಗಲಕ್ಕೆ ಕಾಲಿಡುತ್ತಿದಂತೆ ಮನಸ್ಸಿಗೆ ಉಲ್ಲಾಸ. ಕಸಕಡ್ಡಿ ಕಾಣದ ಸ್ವಚ್ಛ ಅಂಗಲ. ಶಾಲಾ ಮುಂಭಾಗ ಬೆಳೆದಿರುವ ಅಲಂಕೃತ ಹೂವು ಹಾಗೂ ಔಷಧೀಯ ಗುಣವಿರುವ ಗಿಡ ಬಳ್ಳಿಗಳು. ಶಾಲೆಯ ಹಿಂಭಾಗಕ್ಕೆ ಹೆಜ್ಜೆ ಇಟ್ಟರೆ ಕಾಣಸಿಗುವ ಕೈ ತೋಟ ಎಂತವರನ್ನೂ ಖುಷಿ ಪಡಿಸದೆ ಇರದು!
ಮಜಿ ದ.ಕ. ಸ.ಹಿ.ಪ್ರಾ.ಶಾಲೆಯ ಹಿಂಭಾಗದಲ್ಲಿರುವ ಒಂದಿಷ್ಟು ಖಾಲಿ ಜಾಗದಲ್ಲಿ ಊರಿನವರ ಸಹಕಾರದೊಂದಿಗೆ ಶಿಕ್ಷಕರು, ಪುಟಾನಿ ಮಕ್ಕಳು ಸೇರಿಕೊಂಡು ತೊಂಡೆಕಾಯಿ, ಬಸಳೆ, ಬೆಂಡೆ, ಅಲಸಂಡೆ, ಸೌತೆ, ಕುಂಬಲಕಾಯಿ, ಚೀನಿಕಾಯಿ, ಹಸಿ ಮೆಣಸು ಬೆಳೆದಿದ್ದಾರೆ. ಅದರಲ್ಲೂ ತೊಂಡೆಕಾಯಿ ಬಳ್ಳಿಗಳು ನೂಲಿನಿಂದ ನಿರ್ಮಿಸಿರುವ ಚಪ್ಪರ ತುಂಬಾ ಹರಡಿದೆ. ವಾರಕ್ಕೆ ಒಂದೆರಡು ಬಾರಿ ತೊಂಡೆಕಾಯಿ ಕೀಳಲಾಗುತ್ತದೆ. ಕಿತ್ತ ತೊಂಡೆಕಾಯಿಯಲ್ಲಿ ಶಾಲೆಯ ಬಿಸಿಯೂಟಕ್ಕೆ ಬೇಕಾದಷ್ಟು ಇಟ್ಟು ಹೆಚ್ಚಿದನ್ನು ಮಾರುಕಟ್ಟೆಗೆ ಕೊಡಲಾಗುತ್ತದೆ. ಅದಕ್ಕೆ ಬದಲಾಗಿ ವಾರಕ್ಕೊಮ್ಮೆ ಮಕ್ಕಳಿಗಾಗಿ ತಯಾರಿಸುವ ಪಲವಿಗೆ ಬೇಕಾದ ಕ್ಯಾರೆಟ್, ಬಟಾಟೆ, ಬೀನ್ಸ್ ಮುಂತಾದ ತರಕಾರಿಯನ್ನು ತರಲಾಗುತ್ತದೆ. ಇನ್ನೊಂದು ಚಪ್ಪರದಲ್ಲಿ ಬೆಳೆದಿರುವ ಬಸಳೆಯನ್ನು ಕೂಡಾ ವಾರಕ್ಕೊಮ್ಮೆ ಕತ್ತರಿಸಿ ಸಂಬಾರು ಮಾಡಲಾಗುತ್ತದೆ. ಹೀಗೆ ವಾರವಿಡೀ ಸಾವಯವದೂಟ ಇಲ್ಲಿನ ಮಕ್ಕಳಿಗೆ.. ಇಲ್ಲಿ ನೆಟ್ಟಿರುವ ಉಳಿದ ತರಕಾರಿ ಬಳ್ಳಿಗಳೆಲ್ಲವೂ ಇನ್ನಷ್ಟೇ ಬೆಳೆದು ಫಲ ನೀಡಬೇಕಿವೆ.
ಶಾಲೆಯ ಸುತ್ತ ಸುಮಾರು 15ಕ್ಕೂ ಹೆಚ್ಚು ತೆಂಗಿನ ಮರ, ಎರಡು ನುಗ್ಗೆ ಮರ, ಒಂದು ಹಲಸು ಮರ ಇದೆ. ತೋಟದ ಒಂದು ಬದಿಯಲ್ಲಿ ಬಾಳೆ ಬೆಳೆಯಲಾಗಿದೆ. ಇಲ್ಲಿ ಬೆಳೆದ ತೆಂಗಿನಕಾಯಿ, ಋತುವಿನಲ್ಲಿ ಆಗುವ ನುಗ್ಗೆ ಕಾಯಿ, ದೀವಿ ಹಲಸನ್ನು ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತದೆ. ಬಾಳೆಯನ್ನು ಹಣ್ಣಾಗಿಸಿ ಮಕ್ಕಳಿಗೆ ಹಂಚಲಾಗುತ್ತದೆ. ನುಗ್ಗೆ ಸೊಪ್ಪು, ಬಾಳೆ ಕುಂಬಿಗೆ ಹಾಗೂ ಬಾಳೆ ತಿರುಳಿನಿಂದ ಮಾಡುವ ವಿಶೇಷ ಪಲ್ಯ ಬಿಸಿಯೂಟಕ್ಕೆ ಮಕ್ಕಳಿಗೆ ಬಡಿಸಿ ಅವರ ಖುಷಿಯಲ್ಲಿ ನಾವು ಭಾಗಿಗಳಾಗುವುದು ಆನಂದ ತರುತ್ತದೆ ಎಂದು ಅಭಿಪ್ರಾಯಪಡುತ್ತಾರೆ ಶಾಲಾ ಶಿಕ್ಷಕಿಯರು.
ಮಕ್ಕಳು ಕುಡಿದು ಹೆಚ್ಚಾದ `ಕ್ಷೀರಭಾಗ್ಯ’ದ ಹಾಲನ್ನು ಮಜ್ಜಿಗೆ ಮಾಡಿ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಲಾಗುತ್ತದೆ. ಮಜ್ಜಿಗೆಗೆ ಹಾಗೂ ಬಿಸಿಯೂಟದ ಸಂಬಾರಿಗೆ ಬೇಕಾದ ಕಾಯಿ ಮೆಣಸನ್ನು ಕೂಡಾ ಇದೇ ಕೈ ತೋಟದಲ್ಲಿ ಬೆಳೆಯಲಾಗಿದೆ. ತೊಂಡೆಕಾಯಿ ಚಪ್ಪರದಡಿ ಸೇರಿ ಅದರ ಸುತ್ತಲೂ ಸುಮಾರು 50ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಡಲಾಗಿದೆ. ಈ ಅಡಿಕೆ ತಳಿ ನಾಲ್ಕು ವರ್ಷದಲ್ಲಿ ಫಲ ಬಿಡುತ್ತದೆ. ಈ ಸಣ್ಣ ಸುಂದರ ತೋಟದ ವಿಶೇಷತೆ ಏನೆಂದರೆ ಸಂಪೂರ್ಣ ಸಾವಯವನ್ನೇ ಅವಲಂಭಿಸಿರುವುದು. ಜಿಲ್ಲಾ ಪಂಚಾಯತ್ ಅನುದಾನದಿಂದ ಶಾಲೆಗೊಂದು ಬೋರ್ವೆಲ್ ಕೊರೆಸಲಾಗಿದ್ದು, ಅದರ ನೀರು ಈ ಎಲ್ಲ ಕೃಷಿಗೆ ಆಧಾರವಾಗಿದೆ. ತೆಂಗಿನ ಮರಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.
ಇನ್ನು ಶಾಲೆಯ ಮುಂಭಾಗದಲ್ಲಿ ಅಲಂಕೃತ ಹೂವಿನ ಗಿಡಗಳು, ಔಷಧಿ ಗಿಡಗಳನ್ನು ಬೆಳೆಯಲಾಗಿದೆ. ಬುದ್ಧಿ ಶಕ್ತಿಗೆ ರಾಮಬಾಣ ಎಂದೇ ಹೇಳುವ ತೆಮೆರೆಯಂತಹ ಬಳ್ಳಿಗಳನ್ನು ಕೂಡಾ ಬೆಳೆಯಲಾಗಿದ್ದು, ಮಕ್ಕಳಿಗೆ ಬಿಸಿಯೂಟಕ್ಕೆ ಇದರ ಚಟ್ನಿಯನ್ನು ಕೂಡಾ ಮಾಡಿ ಕೊಡಲಾಗುತ್ತದೆ ಎಂದು ಹೇಳುತ್ತಾರೆ ಶಾಲಾ ಶಿಕ್ಷಕಿಯರು.
ಶಾಲೆಯ ಜಾಗದಲ್ಲಿ ಮಾಡಿರುವ ಕೈ ತೋಟದಲ್ಲಿ ಬೆಳೆದ ತರಕಾರಿಗಳಿಂದ ಮಕ್ಕಳಿಗೆ ವಾರದ ಆರು ದಿನವೂ ಬೇರೆ ಬೇರೆ ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸಿದ್ಧಪಡಿಸಿ ಕೊಡಲಾಗುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯ ಅಂಗವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವೂ ಈ ತೋಟ ಹೊಂದಿದೆ. ತೋಟದ ಕೆಲಸದಲ್ಲಿ ಮಕ್ಕಳು ಕೂಡಾ ಭಾಗಿಯಾಗುತ್ತಾರೆ. ಅಲ್ಲದೆ ಶಾಲೆಯ ಮುಂಭಾಗ ಔಷಧೀಯ ಗಿಡಗಳನ್ನು ಬೆಳೆಯಲಾಗಿದೆ. ತಮ್ಮ ಮನೆಯಲ್ಲೂ ಕೈ ತೋಟ, ಔಷಧೀಯ ಗಿಡ ಮೂಲಿಕೆಯ ಬಳ್ಳಿಗಳನ್ನು ಬೆಳೆಯಲು ಈ ಮೂಲಕ ಪ್ರೇರಣೆ ನೀಡಲಾಗುತ್ತದೆ” ಎಂದು ಹೇಳುತ್ತಾರೆ ಶಾಲಾ ಶಿಕ್ಷಕಿಯರು.