ಕಾರ್ಕಳ: ಅತ್ತೂರು ಚರ್ಚ್ ನ ವಾರ್ಷಿಕೋತ್ಸವದ ಶುಭಸಂದರ್ಭದಲ್ಲಿ ಚೇತನ ಹಳ್ಳಿಯ ದಲಿತ ಸಮುದಾಯದ ದಾದು ಎಂಬವರು ಕಳೆದ 40 ವರ್ಷಗಳಿಂದ ಮೊಂಬತ್ತಿ ಸೇವೆ(ಭಕ್ತಾದಿಗಳು ಹರಕೆಯ ರೂಪದಲ್ಲಿ ಮೊಂಬತ್ತಿ ಹೊತ್ತಿಸುವ ಕೇಂದ್ರ) ಸಲ್ಲಿಸುತ್ತಾ ಬಂದಿದ್ದಾರೆ.
ತಂದೆಯ ಜೀವಿತಾವಧಿಯ ನಂತರ ದಾದು ಅದೇ ಸೇವೆಯಲ್ಲಿ ಮುಂದುವರಿಸಿಕೊಂಡು ಬಂದಿದಾರೆ. ದಾದು ಪ್ರಸಕ್ತ 70 ಹರೆಯದ ವೃದ್ಧರಾಗಿದ್ದು, ನಿಶಕ್ತ ದೇಹದೊಂದಿಗೆ ತನ್ನ ತಂಡದ ಸುಮಾರು 30 ಮಂದಿ ಸದಸ್ಯರು ನಡೆಯುವ ವಾರ್ಷಿಕೋತ್ಸವ ಶುಭಸಂದರ್ಭದಂದು ಚಾಚು ತಪ್ಪದೇ ಸೇವೆಯಲ್ಲಿ ತೊಡಗಿದ್ದಾರೆ.
ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಪುಣ್ಯಕೇತ್ರಕ್ಕೆ ಜನವರಿ 26 ಗಣರಾಜೋತ್ಸವ ದಿನಾಚರಣೆಯಂದು ಜನಸಾಗರವೇ ಹರಿದು ಬಂದಿದೆ. ನಸುಕಿನ ಜಾವದಲ್ಲಿ ಭಕ್ತಾದಿಗಳು ತಮ್ಮ ತಮ್ಮ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದರು. ಮಂಗಳೂರು -ಮೂಡಬಿದ್ರಿ-ಕಾರ್ಕಳ, ಮಂಗಳೂರು-ಪಡುಬಿದ್ರಿ-ಕಾರ್ಕಳ ಮಾರ್ಗವಾಗಿ ಬರುವ ಶಾಸಗಿ ಬಸ್ಸುಗಳ, ಉಡುಪಿ-ಕಾರ್ಕಳ ಬರುವ ಸರಕಾರಿ, ಶಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿದ್ದು ಅವರಲ್ಲಿ ಬಹುತೇಕರು ಅತ್ತೂರು ಸಂತಲಾರೆನ್ಸ್ ಪುಣ್ಯಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಾಗಿದ್ದರು.
ಕಾಬೆಟ್ಟು-ಅತ್ತೂರು ಕಡೆಗೆ ಬರುವಂತಹ ವಾಹನಗಳಿಗೆ ಪುಣ್ಯಕ್ಷೇತ್ರದ ಕೊಂಚ ಅನತಿ ದೂರದ ಮೈದಾನದಲ್ಲಿ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಐಪಿ ವಾಹನಗಳಿಗೆ ಬಲಗಡೆಯ ಗುಡ್ಡೆಯ ಮೂಲಕ ಪುಣ್ಯಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಂದ ಹಿಂತಿರುಗುವ ವಿಐಪಿ ವಾಹನಗಳಿಗೆ ಪರ್ಪಲೆಗುಡ್ಡೆಯ ಮೂಲಕವಾಗಿ ಕುಂಟಲ್ಪಾಡಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ನೀಡಲಾಗಿತ್ತು. ವಾರಣಶಿಯ ಧರ್ಮಾಧ್ಯಕ್ಷರಿಂದ ಸಂಜೆ 4.30ಕ್ಕೆ ಇಂಗ್ಲೀಷ್ ನಲ್ಲಿ ದಿವ್ಯ ಬಲಿಪೂಜೆ, ಸಂಜೆ 6ರ ವೇಳೆಗೆ ಬಳ್ಳಾರಿಯ ಧರ್ಮಾಧ್ಯಕ್ಷರಿಂದ ಕನ್ನಡದಲ್ಲಿ ದಿವ್ಯಬಲಿ ಪೂಜೆ ನೆರವೇರಿತು.
ದಕ್ಷಿಣ ಭಾರತ ವ್ಯಾಪ್ತಿಯಲ್ಲಿ ಇರುವಂತಹ ಏಕೈಕ ಪುಷ್ಕರಣಿ ಕರೆ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದಾಗಿದೆ. ಭಾರೀ ಪವಾಡದ ಈ ಕ್ಷೇತ್ರದಲ್ಲಿರುವ ಪುಷ್ಕರಿಣೆಯ ಜಲ(ತೀರ್ಥ) ಸಂಪ್ರೋಕ್ಷಣೆಗಾಗಿ ಭಕ್ತಾದಿಗಳು ಜಾತಿ,ಧರ್ಮ,ಭಾಷೆ,ಪಂಗಡ,ಲಿಂಗಭೇದ, ವಯೋ ಅಂತರ ಇವೆಲ್ಲವನ್ನು ಎಲ್ಲೇಮೀರಿ ಸರದಿ ಸಾಲಿನಲ್ಲಿದ್ದರು.
ಪುಷ್ಕರಿಣೆ ಕೆರೆಗೆ ಹೋಗಲು ಹಾಗೂ ಬರಲು ಪ್ರತ್ಯೇಕ ದಾರಿ ವ್ಯವಸ್ಥೆಯೊಂದಿಗೆ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಸೇವಕರು ಹಾಗೂ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡರು. ಪುಷ್ಕರಣಿ ಕೆರೆಯ ಜನ(ತೀರ್ಥ)ವನ್ನು ಭಕ್ತಾದಿಗಳು ಸಂಪ್ರೋಕ್ಷಿಸಿದರಲ್ಲದೇ ತಾವುಗಳು ತಂದಿದ್ದ ಬಾಟಲ್ ಗಳ ಮೂಲಕ ತೀರ್ಥವನ್ನು ಕೊಂಡು ಹೋಗುತ್ತಿದ್ದ ದೃಶ್ಯಾವಳಿ ಸರ್ವೇ ಸಾಮಾನ್ಯವಾಗಿತ್ತು. ಇಷ್ಟಾರ್ಥ ಹರಕೆಯ ರೂಪದಲ್ಲಿ ನಾಣ್ಯಗಳನ್ನು ಪುಷ್ಕರಿಣಿ ಕೆರೆಯೊಳಗೆ ಭಕ್ತಾದಿಗಳು ಹಾಕಿರುವುದರಿಂದ ಜಲದೊಳಗೆ ನಾಣ್ಯಗಳೇ ಕಂಡುಬರುತ್ತಿತ್ತು.