ಬಂಟ್ವಾಳ: ಸಂಚರಿಸುತ್ತಿದ್ದ ಮರ ಸಾಗಾಟದ ಲಾರಿಯೊಂದರ ಮುಂಭಾಗದ ಟೈಯರ್ ಸ್ಪೋಟಗೊಂಡು ರಸ್ತೆಯಲ್ಲಿ ಮಗುಚಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಸುಳ್ಯದಿಂದ ಮಂಗಳೂರು ಕಡೆಗೆ ಮರದ ದಿಣ್ಣೆಗಳನ್ನು ತುಂಬಿಕೊಂಡು ಸಂಚರಿಸುತ್ತಿರುವ ಲಾರಿ ಕೊಡಾಜೆ ಸಮೀಪದ ಪೆರಾಜೆ ಮಠಕ್ಕೆ ತೆರಳುವ ಮುಖ್ಯ ದ್ವಾರದ ಸಮೀಪ ಲಾರಿ ಮುಂಭಾಗದ ಟೈಯರ್ ಸ್ಪೋಟಗೊಂಡು ರಸ್ತೆಯಲ್ಲಿ ಲಾರಿ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ಮರಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಲಾರಿಯ ಒಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರನ್ನು ಸಾರ್ವಜನಿಕರು ಹೊರತೆಗೆದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕೆಲ ತಾಸುಗಳ ಕಾಲ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.