ಕಾಸರಗೋಡು: ಅಪ್ರಾಪ್ತ ಬಾಲಕರು ವಾಹನ ಚಾಲನೆ ವಿರುದ್ದ ಸಾರಿಗೆ ಪ್ರಾಧಿಕಾರ ಹದ್ದಿನ ಕಣ್ಣೀರಿಸಿದೆ. ಶುಕ್ರವಾರ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಇಪ್ಪತ್ತರಷ್ಟು ಬೈಕ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಬಿ. ಸಿ ರೋಡ್ ಕೇಂದ್ರೀಕರಿಸಿ ತಪಾಸಣೆ ನಡೆಸಿತ್ತು. ಲೈಸನ್ಸ್ ಇಲ್ಲದೆ ಮೂರು ಮಂದಿಯನ್ನು ಬೈಕ್ ಗಳಲ್ಲಿ ಕುಳ್ಳಿರಿಸಿ ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸುವ ರೀತಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಬೈಕ್ ಚಲಾಯಿಸುತ್ತಿದ್ದವರಲ್ಲಿ ಬಹುತೇಕ ಮಂದಿ ಹದಿನೈದು ವರ್ಷಗಳಿಂದ ಕೆಳಗಿನವರಾಗಿದ್ದಾರೆ. ಸಾಮಾನ್ಯವಾಗಿ ತಪಾಸಣೆ ವೇಳೆ ನಿಲ್ಲಿಸಲು ಸೂಚನೆ ನೀಡಿದರೂ ವೇಗ ಹೆಚ್ಚಿಸಿ ಪರಾರಿಯಾಗುತ್ತಿದ್ದರು. ಬೆನ್ನಟ್ಟಿದರೆ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಬೆನ್ನಟ್ಟಿ ಹಿಡಿಯಲು ಮುಂದಾಗುತ್ತಿರಲಿಲ್ಲ. ಆದರೆ ಶುಕ್ರವಾರ ತಂತ್ರಗಾರಿಕೆ ಮೂಲಕ ಕಾರ್ಯಾಚರಣೆ ನಡೆಸಿ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಯಿತು.
ಸಾರಿಗೆ ಅಧಿಕಾರಿಗಳಾದ ಎಂ.ಜಿ ಗಿರೀಶ್, ಆರ್.ಎಸ್ ಜಿಶೋರ್, ವಿ. ರಮೇಶನ್, ಸೂರಜ್ ಮೊದಲಾದವರು ಕಾರ್ಯಾಚರಣೆಗೆ ನೇತೃತ್ವ ನೀಡಿದ್ದರು. ಮುಂದಿನ ದಿನಗಳಲ್ಲೂ ತಪಾಸಣೆ ತೀವ್ರಗೊಳಿಸಲಾಗುವುದು ಎಂದು ಸಾರಿಗೆ ಅಧಿಕಾರಿ ಪಿ.ಚ್ ಸಾದಿಕ್ ಅಲಿ ತಿಳಿಸಿದ್ದಾರೆ.