ಮಂಗಳೂರು/ಉಡುಪಿ: ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸರಕಾರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ (ಫೆ. 1) ಅಧಿಕೃತವಾಗಿ ಜಾರಿಗೆ ಬಂದಿದ್ದು, ಹೆಲ್ಮೇಟ್ ಧರಿಸದಿದ್ದವರಿಗೆ ದಂಡ ವಿಧಿಸಲಾಗುತ್ತಿದೆ.
ನಗರದ ವಿವಿಧೆಡೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಹೆಲ್ಮೇಟ್ ಧರಿಸದಿದ್ದವರಿಗೆ ತಡೆದು ದಂಡ ವಿಧಿಸಿದರು. ಹೆಲ್ಮೇಟ್ ಧರಿಸಿದ ದ್ವಿಚಕ್ರ ವಾಹನ ಸವಾರ ಹಾಗೂ ಸಹ ಸವಾರಿಗೆ ಪೊಲೀಸರು ಶುಭ ಹಾರೈಸಿದರು.
ಸಹ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ ಬಗ್ಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಕರ ಪತ್ರಗಳನ್ನು ವಿತರಿಸಿ, ಮೈಕ್ ಮೂಲಕ ಉದ್ಘೋಷಿಸಿ ಹಾಗೂ ರ್ಯಾಲಿ ನಡೆಸುವ ಮುಖೇನ ಪ್ರಚುರ ಪಡಿಸಲಾಗಿದೆ. ಇದೀಗ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವ ಅವಧಿ ಮುಕ್ತಾಯವಾಗಿದೆ. ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಸೋಮವಾರದಿಂದ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ದಿಸೆಯಲ್ಲಿ ಬೈಕ್ ಸವಾರರ ತಪಾಸಣೆಯನ್ನು ನಡೆಸುತ್ತಿದ್ದಾರೆ.
ಹೆಲ್ಮೆಟ್ ಧಾರಣೆ ಮಾಡದಿದ್ದರೆ ದಂಡ ಪಾವತಿಸಲು ಸವಾರರು ಸಿದ್ಧರಾಗಬೇಕಿದೆ. ಹಿಂಬದಿ ಸವಾರರಾಗಿ ಹೆಲ್ಮೆಟ್ ಧರಿಸದೆ ಯಾರೇ ಕುಳಿತು ಪ್ರಯಾಣಿಸಿದರೂ ದಂಡ ಪಾವತಿಯ ಹೊರೆಯನ್ನು ವಾಹನ ಮಾಲಕರು ಹೊರಬೇಕಾಗುತ್ತದೆ. ಮೊದಲ ಬಾರಿಗೆ ಸಿಕ್ಕಿ ಬಿದ್ದಾಗ 100 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಯೂ ಹೆಲ್ಮೆಟ್ ಧರಿಸದಿರುವುದು ಪುನರಾವರ್ತನೆಯಾದರೆ ಆಗ ನಿರ್ಲಕ್ಷ ತನದ ಪ್ರಕರಣ ದಾಖಲಿಸಿ 300 ರೂ. ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ ಶುಲ್ಕದ ಮೊತ್ತವನ್ನು ಹಣ ಇದ್ದರೆ ಸ್ಥಳದಲ್ಲಿಯೇ ಪಾವತಿಸಬಹುದು. ಕೈಯಲ್ಲಿ ಹಣ ಇಲ್ಲದಿದ್ದರೆ ದಂಡದ ಮೊತ್ತವನ್ನು 15 ದಿನಗಳೊಳಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ತೆರಳಿ ಪಾವತಿಸಬೇಕು. 15 ದಿನಗಳೊಳಗೆ ದಂಡ ಪಾವತಿಯಾಗದಿದ್ದರೆ ಪೊಲೀಸರು ಪ್ರಕರಣದ ಬಗ್ಗೆ ಆರೋಪ ಪಟ್ಟಿಯನ್ನು (ಚಾರ್ಜ್ಶೀಟ್) ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಚಾರ್ಚ್ಶೀಟ್ ಸಲ್ಲಿಕೆಯಾದರೆ ಬಳಿಕ ಪ್ರಕರಣವು ನ್ಯಾಯಾಲಯದ ಮೆಟ್ಟಲೇರುತ್ತದೆ.