ಬಂಟ್ವಾಳ: ಸರ್ಕಾರಿ ಬಸ್ಸೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್ ನಲ್ಲಿ ಮಂಗಳವಾರ ನಡೆದಿದೆ.
ಗಡಿಯಾರ ನಿವಾಸಿ ಮಹಮ್ಮದ್ ಅವರ ಪುತ್ರ ಅಶ್ರಫ್(32) ಗಾಯಗೊಂಡ ಆಟೋ ಚಾಲಕ. ಇವರು ಮಧ್ಯಾಹ್ನ ಮಾಣಿ ಜಂಕ್ಷನ್ ಗೆ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬಂದ ಸರ್ಕಾರಿ ವೊಲೋ ಬಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅಶ್ರಫ್ ಅವರ ತಲೆಗೆ ಹಾಗೂ ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಯೆ ಆಂಬ್ಯುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ, ಬಸ್ ಅನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು ಇನ್ನೊಂದು ರಸ್ತೆಯನ್ನು ಇತ್ತೀಚೆಗೆ ನಿರ್ಮಿಸಲಾಗಿತ್ತು. ಇದರಿಂದಾಗಿ ಇಲ್ಲಿ ಪ್ರತಿನಿತ್ಯ ಇಲ್ಲಿ ಅಪಘಾತಗಳು ನಡೆಯುತ್ತಿದೆ. ಇಲ್ಲಿ ವೃತ್ತ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಇನ್ನೂ ಈಡೇರಿಕೆಯಾಗಿಲ್ಲ ಎನ್ನುವುದು ಇಲ್ಲಿನ ಸಾರ್ವಜನಿಕರ ಅಳಲು.