ಕಾಸರಗೋಡು: ತ್ರಿಕ್ಕರಿಪುರದ ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿ ಕಳವಿಗೆತ್ನಿಸಿದ ಪ್ರಕರಣದ ಆರೋಪಿಯಾಗಿರುವ ಸಿಪಿಎಂ ಮುಖಂಡನೋರ್ವನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಿ.ರಾಘವನ್ (53) ಎಂದು ಗುರುತಿಸಲಾಗಿದೆ.
ಈತ ವಳಿಯಪರಂಬ ಎಂಬಲ್ಲಿನ ರಹಸ್ಯ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ೦ತೆ ನೀಲೇಶ್ವರ ಸರ್ಕಲ್ ಇನ್ಸ್ ಪೆಕ್ಟ ರ್ ಕೆ.ಇ. ಪ್ರೇಮ ರಾಜನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಗಲ್ಫ್ ಉದ್ಯೋಗಿಯಾಗಿರುವ ಎಂ.ಕೆ ಯೂನಸ್ ರವರ ಮನೆಯಿಂದ ಈತ ಕಳವಿಗೆತ್ನಿಸಿದ್ದನು. ಮನೆಯಲ್ಲಿನ ಸಿಸಿಟಿವಿ ದೃಶ್ಯಗಳಿಂದ ಈತನ ಕೃತ್ಯ ಬೆಳಕಿಗೆ ಬಂದಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯ ಬೆಳಕಿಗೆ ಬಂದ ಬಳಿಕ ಈತನನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. ವಿಚಾರಣೆ ವೇಳೆ ಈತ ಈ ಹಿಂದೆಯೂ ಹಲವು ಕಳವು ಪ್ರಕರಣಗಳಲ್ಲಿ ಶಾಮಿಲಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
2015 ರ ಮೇ 13 ರಂದು ತ್ರಿಕ್ಕರಿಪುರದ ಮೆಟ್ಟಮ್ಮಲ್ ನ ಅಬ್ದುಲ್ಲ ಎಂಬವರ ಮನೆಯ ಹಂಚು ತೆಗೆದು 14 ಪವನ್ ಚಿನ್ನಾಭರಣ ಕಳವು ಪ್ರಕರಣ ಸೇರಿದಂತೆ ಆರು ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ವಿಚಾರಣೆ ನಡೆಸಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟು ಹೊರಬರಬೇಕಿದೆ.