ಕಾರ್ಕಳ: ತಾಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಕಣಕಿಳಿಸಿ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ ಎಂದು ಘಂಡಾಘೋಷವಾಗಿ ಸಾರಿ ಶುಕ್ರವಾರದಂದೇ ಅಭ್ಯಥಿಗಳೆಲ್ಲರೂ ಕಣಕ್ಕಿಳಿಸಿದೆ.
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ಒಂದಿಷ್ಟು ಗೊಂದಲ ವಾತಾವರಣ ಉಂಟಾಗಿದೆ. ಬಿಜೆಪಿ ಕೋಟೆಯಾಗಿರುವಂತಹ ಎರ್ಲಪ್ಪಾಡಿ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಪರಿಣಾಮವಾಗಿ ಶುಕ್ರವಾರ ಕಳೆದರೂ ಎರ್ಲಪ್ಪಾಡಿ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಬೆಳ್ಮಣ್ ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ರೇಷ್ಮಾ ಉದಯ ಶೆಟ್ಟಿ, ನಿಟ್ಟೆ ಹರಿಶ್ಚಂದ್ರ ಇವರು ಇದುವರೆಗೆ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದು ಅದರೊಳಗೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಬೈಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಬಿಜೆಪಿ ಮುಖಂಡರಿಗೆ ನುಂಗಲಾರ ತುಪ್ಪವಾಗಿ ಪರಿಣಮಿಸಿತು. ಇದಕ್ಕೆ ಭಜರಂಗದಳ ಕಾರಣವಾಗಿದೆ. ಇದೇ ಸಂಘಟನೆಯ ಮೂಲಕ ಯುವ ಮೋರ್ಚಾ ಜಿಲ್ಲಾ ಸಮಿತಿಗೆ ಆಯ್ಕೆಯಾಗಿರುವ ಯುವ ಮುಖಂಡ ಬೈಲೂರು ಸುಮೀತ್ ಶೆಟ್ಟಿ ಬೈಲೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಅಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಕ್ರಂ ಹೆಗ್ಡೆಯವರನ್ನು ಇದೇ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವ ಬಗ್ಗೆ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿ ಮುಖಂಡರ ನಿರ್ಧಾರವ ವಿರುದ್ಧ ಭಜರಂಗದಳ ಕಾರ್ಯಕರ್ತರು ಬಹಿರಂಗ ಹೇಳಿಕೆಗಳನ್ನು ಫೇಸ್ ಬುಕ್ ನಲ್ಲಿ ನೀಡುತ್ತಿದ್ದುದು ದಿನೆದಿನೇ ಹೆಚ್ಚಳವಾಗತೊಡಗಿತ್ತು. ಕೆಲವೊಂದು ಬರಹಗಳು ಬಿಜೆಪಿ ಮುಖಂಡರನ್ನೇ ತಲೆ ತಗ್ಗಿಸುವಂತೆ ಮಾಡುತ್ತಿತ್ತು. ಬಿಜೆಪಿ ಹಾಗೂ ಸಂಘ ಪರಿವಾರ ಮುಖಂಡರು ನಡೆಸಿದ ಮಾತುಕತೆಯಲ್ಲಿ ಸಮಸ್ಸೆ ಯಾವುದೇ ರೀತಿಯಲ್ಲಿ ಬಗೆಹರಿಯಲಿಲ್ಲ. ಬೈಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸುಮಿತ್ ಶೆಟ್ಟಿ ಹೊರತು ಪಡಿಸಿ ಇತರ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದರೆ ನಮ್ಮ ಬೆಂಬಲ ಇಲ್ಲ ಎನ್ನುವ ಭಜರಂಗಿಗಳ ದೃಢ ನಿಲುವಿಗೆ ಬಿಜೆಪಿ-ಸಂಘಪರಿವಾರ ಮುಖಂಡರು ಶಿರಬಾಗಿ ಗುರುವಾರ ತಡ ರಾತ್ರಿ ಹಠಾತ್ ಅಭ್ಯರ್ಥಿಯನ್ನೇ ಬದಲಾಯಿಸುವ ನಿರ್ಧಾರಕ್ಕೆ ಬರಬೇಕಾಯತು. ತನ್ಮೂಲಕ ಕಾರ್ಕಳ ತಾಲೂಕು ವ್ಯಾಪ್ತಿಗೂ ಬೀಸಿದ ಬಂಡಾಯದ ಬಿಸಿಯನ್ನು ತಣಿಸಿದ್ದಾರೆ.
ಬೈಲೂರು ಕ್ಷೇತ್ರದಲ್ಲಿ ನಡೆದಿರುವ ಬಿಜೆಪಿಯ ರಾಜಕೀಯ ಪ್ರಹಸನ ನಡುವೆ ಸುಮಿತ್ ಬೈಲೂರುರವರ ಹೆಸರನ್ನು ಅಂತಿಮಗೊಳಿಸಿ ಶುಕ್ರವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯುವ ಸಮುದಾಯವೇ ಕಂಡುಬಂದಿದೆ. ಕೇಸರಿ ಶಾಲು ಹೆಗಲಿಗೆ ಹಾಕಿ ಕೊಂಡಿರುವ ಅವರಲ್ಲಿ ಸುಮಿತ್ ಶೆಟ್ಟಿಯನ್ನು ಗೆಲ್ಲಿಸಿ ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡಲೇ ಬೇಕೆಂಬ ಪಣವು ಆ ಕ್ಷೇತ್ರ ಬಜರಂಗ ದಳದ ಪ್ರತಿಯೊಬ್ಬ ಕಾರ್ಯಕರ್ತರದಾಗಿದೆ.
ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ವರ್ಧೆಗಳಿಂದ ಇಬ್ಬರು ಅಭ್ಯರ್ಥಿಗಳು ಹಳೆ ಮುಖದವರಾಗಿದ್ದಾರೆ. ಹಿರ್ಗಾನ ಕ್ಷೇತ್ರದಿಂದ ಮಾಲಿನಿ ಜೆ.ಶೆಟ್ಟಿ ಹಾಗೂ ಹೆಬ್ರಿಯಿಂದ ಚಂದ್ರಶೇಖರ್. ಕಾಂಗ್ರೆಸ್ ಪಕ್ಷದಲ್ಲಿ ಸ್ವರ್ಧಿಸುತ್ತಿರುವ ಅಭ್ಯರ್ಥಿಗಳೆಲ್ಲರೂ ಹೊಸ ಮುಖದವರೆಂಬುವುದು ಗಮನಾರ್ಹವಾಗಿದೆ.