ಬಂಟ್ವಾಳ : ಖ್ಯಾತ ಶಿಕ್ಷಣ ತಜ್ಞ, ಸಾಹಿತಿ ಬಾಳಿಲ ಕೃಷ್ಣ ಶಾಸ್ತ್ರಿ ರವಿವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಶಿಷ್ಯವರ್ಗವನ್ನು, ಬಂಧು, ಮಿತ್ರರನ್ನು ಅಗಲಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿಯಾಗಿದ್ದ ಇವರು ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಬಿಜೈಯಲ್ಲಿ ವಾಸವಾಗಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನ ಹೊಂದಿದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕೃಷ್ಣ ಶಾಸ್ತ್ರಿ ಬಾಳಿಲ ಅವರು ಸುಳ್ಯದ ವಿದ್ಯಾ ಬೋಧಿನಿ ಪ್ರೌಢಶಾಲೆಯ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ, ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.ಈ ಸಂದರ್ಭ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಭಾಷಣದ ವೀಡಿಯೋ ಚಿತ್ರೀಕರಣವನ್ನು ಸಮ್ಮೇಳದಲ್ಲಿ ಪ್ರಸಾರ ಮಾಡಲಾಗಿತ್ತು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದ ಬಾಳಿಲ ಕೃಷ್ಣ ಶಾಸ್ತ್ರಿ ನೇರ, ನಿರ್ಭೀತ ಲೇಖನಗಳ ಮೂಲಕ ಸಮಾಜದಲ್ಲಿ ಜನಜಾಗೃತಿ ಮೂಡಿಸಿದ್ದರು. ಸರ್ಕಾರಿ ಶಾಲೆಗಳ ಉಳಿವಿಗಾಗಿ ಅವರು ಅನೇಕ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಡೆಸಿದ್ದಾರೆ.
ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸುದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೃಷ್ಣ ಶಾಸ್ತ್ರಿಗಳು ಒಂದು ತಲೆಮಾರು ರೂಪಿಸಿದ ಅಪೂರ್ವ ಮತ್ತು ಆದರ್ಶ ಶಿಕ್ಷಕ. ಅವರ ಪಾಠ ಕೇಳುವುದೇ ಚೆಂದ. ಇಂಗ್ಲೀಷ್ ಮತ್ತು ಕನ್ನಡದಲ್ಲಿ ಭಾಷಾ ಪ್ರೌಢಿಮೆಯಿಂದ ವಿದ್ಯಾರ್ಥಿಗಳ ಪಾಲಿಗೆ ಅತ್ಯುತ್ತಮ ಶಿಕ್ಷಕರಾಗಿದ್ದರು. ಅವರಿಂದಾಗಿಯೇ ಬಾಳಿಲ ಶಾಲೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಬಂದಿತ್ತು. ಬಾಳಿಲದಲ್ಲಿ ತನ್ನ ಆಸಕ್ತಿಯನ್ನು ವೃತ್ತಿಗಷ್ಟೇ ಸೀಮಿತಗೊಳಿಸದೆ ಪ್ರವೃತ್ತಿಯಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಕಲೆ, ಸಾಹಿತ್ಯ, ನಾಟಕ ಹೀಗೆ ಬಹುಕ್ಷೇತ್ರದ ಸಾಧಕರಾದರು. ಒಂದು ಕಾಲದಲ್ಲಿ ಕೃಷ್ಣ ಶಾಸ್ತ್ರಿಗಳ ಕಾರ್ಯಕ್ರಮ ನಿರೂಪಣೆ ಎಂದರೆ ಅಲ್ಲಿ ಬೇರೆಯೇ ಒಂದು ಸೊಗಸಿರುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ತನ್ನ ನೇರ ನಿಷ್ಟುರ ಮಾತುಗಳಿಂದ ಹೆಸರುವಾಸಿಯಾದ ಅವರು ಅಂತರ್ಯದಲ್ಲಿ ತುಂಬು ಪ್ರೀತಿಯ ಅಪಾರ ವಿನಯಸಂಪನ್ನತೆಯ ವ್ಯಕ್ತಿಯಾಗಿದ್ದರು. ಇವರ ನಿಧನಕ್ಕೆ ಅವರ ಅಪಾರ ಶಿಷ್ಯವರ್ಗ ಕಂಬನಿ ಮಿಡಿದಿವೆ.