ಬಂಟ್ವಾಳ: ಇಲ್ಲಿನ ಮೊಡಂಕಾಪಿನಲ್ಲಿರುವ ಕಾರ್ಮೆಲ್ ಕಾನ್ವೆಂಟ್ ನ ಕಾಲೇಜು ಆವರಣ ಪ್ರವೇಶಿಸಿ ವಿದ್ಯಾರ್ಥಿಯ ಮೇಲೆ ಹೋಂಗಾರ್ಡ್ ಸಿಬ್ಬಂದಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಲು ನಿರಾಕರಿಸಿದ ಪ್ರಾಂಶುಪಾಲರ ವಿರುದ್ದ ವಿದ್ಯಾರ್ಥಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಕಾಲೇಜಿನ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಮಹಮ್ಮದ್ ಅನೀಶ್ ಕಾಲೇಜಿನಿಂದ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಎನ್ನಲಾದ ಮಂಗಳೂರಿನ ಹೋಂಗಾರ್ಡ್ ಕಿಶೋರ್, ಅನೀಶ್ನನ್ನು ಅಡ್ಡಗಟ್ಟಿ ಕೈಯಿಂದ ಹಲ್ಲೆ ನಡೆಸಿದ ಬಗ್ಗೆ ಸೋಮವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲ ವಿದ್ಯಾರ್ಥಿಯ ಕ್ಷೇಮದ ಬಗ್ಗೆ ಕಾಳಜಿ ವಹಿಸದೆ ಆರೋಪಿ ಪರ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಆರೋಪಿಯ ವಿರುದ್ದ ಕಾಲೇಜಿನ ವತಿಯಿಂದ ಠಾಣೆಗೆ ದೂರು ನೀಡಬೇಕು ಎಂದು ಆಗ್ರಹಿಸಿ ಇಂದು ಬೆಳಿಗ್ಗೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ವೇಳೆ ಕಾಲೇಜಿನ ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕರು ವಿದ್ಯಾರ್ಥಿಗಳ ಮನವಿ ಸ್ವೀಕರಿಸಲು ಒಪ್ಪದೇ ಇದ್ದ ಹಿನ್ನಲೆಯಲ್ಲಿ ಕಾಲೇಜು ಆವರಣದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣಗೊಂಡಿತ್ತು. ಈ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾಲೇಜಿನ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಆದರೂ ಪ್ರಾಂಶುಪಾಲರು ಮನವಿ ಸ್ವೀಕರಿಸಲು ಒಪ್ಪದೇ ಇದ್ದು ಕೊನೆಯಲ್ಲಿ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಸ್ಥಳಕ್ಕೆ ಆಗಮಿಸಿ ಕಾಲೇಜಿನ ಒಳಗಿನ ಸಮಸ್ಯೆಯನ್ನು ಸುಖಾಂತ್ಯಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸುಂತೆ ಪ್ರಾಂಶುಪಾಲರಿಗೆ ಸೂಚಿಸಿದ್ದು ಅದರಂತೆ ಮನವಿ ಸ್ವೀಕರಿಸುವುದರ ಮೂಲಕ ಆತಂಕ ತಿಳಿಯಾಯಿತು.
ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿ:
ವಿದ್ಯಾರ್ಥಿಗಳ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪತ್ರಕರ್ತರ ಕರ್ತವ್ಯಕ್ಕೆ ಕಾಲೇಜಿನ ಪ್ರಾಂಶುಪಾಲ ಹಾಗೂ ಉಪನ್ಯಾಸಕರು ಅಡ್ಡಿಪಡಿಸಿದ ಘಟನೆಯೂ ಇದೇ ವೇಳೆ ನಡೆಯಿತು. ದೃಶ್ಯಮಾಧ್ಯಮ ಹಾಗೂ ಪತ್ರಿಕಾ ಛಾಯಗ್ರಾಹಕರು ಪ್ರತಿಭಟನೆಯ ದೃಶ್ಯಾವಳಿಗಳನ್ನು ದಾಖಲಿಸುತ್ತಿದ್ದ ವೇಳೆ ಅಲ್ಲಿನ ಉಪನ್ಯಾಸಕರು ಪೊಟೋ ತೆಗೆಯದಂತೆ ನಿರ್ಬಂಧ ವಿಧಿಸಿದರು. ಇದೇ ವೇಳೆ ಪತ್ರಕರ್ತರ ಗುರುತಿನ ಚೀಟಿಯನ್ನು ಪರಿಶೀಲಿಸಿದರು ಒರ್ವ ಪತ್ರಕರ್ತನ ಗುರುತಿನ ಚೀಟಿಯನ್ನು ಪಡೆದುಕೊಂಡು ವಾಪಸು ನೀಡದೆ ಸತಾಯಿಸಿದರು. ಇದೇ ವೇಳೆ ಒಗ್ಗಟ್ಟಾದ ಪತ್ರಕರ್ತರು ಪೊಲೀಸರ ಗಮನಕ್ಕೆ ವಿಷಯ ತಿಳಿಸುತ್ತಿದ್ದಂತೆಯೇ, ವಿದ್ಯಾರ್ಥಿಗಳು ಪತ್ರಕರ್ತರ ಬೆಂಬಲಕ್ಕೆ ನಿಂತು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತುಕೊಂಡ ಪ್ರಾಂಶುಪಾಲರು ಉಪನ್ಯಾಸಕಿಯ ಮೂಲಕ ಗುರುತಿನ ಚೀಟಿ ಮರಳಿಸಿದರು.