ಕಾಸರಗೋಡು: ಶಾಲಾ ಪರಿಸರದಲ್ಲಿ ಎರಡು ಮಣ್ಣಿನ ಮಡಕೆ ಪತ್ತೆಯಾದ ಘಟನೆ ನಗರ ಹೊರವಲಯದ ಅಡ್ಕತ್ತಬೈಲ್ ನಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಎರಡು ತೆಂಗಿನ ಕಾಯಿ ಮತ್ತು ಕೆಲವೊಂದು ವಸ್ತುಗಳು ಕಂಡುಬಂದಿದೆ. ವಾಮಾಚಾರ ನಡೆಸಲಾಗಿದೆ ಎಂಬ ಸುದ್ದಿ ಹರಡಿ ಸ್ಥಳೀಯರನ್ನು ಮತ್ತು ಶಾಲಾ ವಿದ್ಯಾರ್ಥಿ, ಶಿಕ್ಷಕರನ್ನು ತಬ್ಬಿಬ್ಬುಗೊಳಿಸಿತು.
ಅಡ್ಕತ್ತಬೈಲ್ ಸರಕಾರಿ ಎಯುಪಿ ಶಾಲಾ ಪರಿಸರದಲ್ಲಿ ಈ ಘಟನೆ ನಡೆದಿದ್ದು , ರಾಷ್ಟ್ರೀಯ ಹೆದ್ದಾರಿಯಿಂದ ಶಾಲೆಗೆ ತೆರಳುವ ರಸ್ತೆಯಲ್ಲಿ ಬಿಳಿ ಬಟ್ಟೆ ಸುತ್ತಿಟ್ಟ ಸ್ಥಿತಿಯಲ್ಲಿ ಮಡಕೆಗಳು ಕಂಡು ಬಂದಿದ್ದು ಶಾಲಾ ಅಧಿಕಾರಿಗಳು ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿದರು.
ವಾಮಾಚಾರ ಎಂದು ನಂಬಿದ ಸ್ಥಳಿಯರು ಇದನ್ನು ಸ್ಪರ್ಶಿಸಲು ಹಿಂದೆ ಸರಿದರು. ಆದರೆ ಪೊಲೀಸರು ಮಡಕೆಗೆ ಸುತ್ತಿಟ್ಟ ಬಟ್ಟೆಯನ್ನು ಬಿಚ್ಚಿ ನೋಡಿದಾಗ ತೆಂಗಿನ ಕಾಯಿ ಇರಿಸಿರುವುದು ಕಂಡು ಬಂದಿದೆ. ಮಡಕೆಯ ಹೊರಗಡೆ ಏನೋ ಬರೆದ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭೀತಿಗೊಂಡಿದ್ದು, ಪೊಲೀಸರು ಇಲ್ಲಿಂದ ತೆರವುಗೊಳಿಸಿದ ಬಳಿಕ ನಿಟ್ಟುಸಿರುಬಿಟ್ಟರು.