ಬಂಟ್ವಾಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತ ನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮವು ಫೆ. 11 ರಿಂದ 13 ರವರೆಗೆ ಬಿ.ಸಿ.ರೋಡು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ.
ಫೆ.11 ರಂದು ಬೆಳಿಗ್ಗೆ ಉದಯವಾಣಿ ದೈನಿಕದ ಮಂಗಳೂರು ಬ್ಯೂರೋ ಮುಖ್ಯಸ್ಥ ಮನೋಹರ್ ಪ್ರಸಾದ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ರವರಿಗೆ ಅಭಿನಂದನೆ ನಡೆಯಲಿದೆ.
ಪ್ರದರ್ಶನದ ಅಂಗವಾಗಿ ಫೆ.13 ರಂದು ಫೊಟೋಗ್ರಫಿ ಕುರಿತು ಆಸಕ್ತ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಲಿದ್ದು, ಹಿರಿಯ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಮೂರೂ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜ 5 ರವರೆಗೆ ಛಾಯಾಚಿತ್ರ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಜತ ವರ್ಷಾಚರಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ ತಿಳಿಸಿದ್ದಾರೆ.