ಸುಳ್ಯ: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ತೊಡಿಕಾನದಲ್ಲಿ ಮೀನು ಶಿಕಾರಿಗೆ ತೆರಳಿದ ವ್ಯಕ್ತಿಯೋರ್ವ ಗುಂಡೇಟು ತಗುಲಿ ಮೃತಪಟ್ಟ ಘಟನೆ ನಡೆದಿದೆ.
ಅರಂತೋಡು ಗ್ರಾಮದ ತೊಡಿಕಾನದ ಚಳ್ಳಂಗಾಯ ಎಂಬಲ್ಲಿ ವಾಸವಿದ್ದ ಕೊಡಗು ಎಂ.ಚೆಂಬು ಗ್ರಾಮದ ಮುದರಡ್ಕ ಜಯರಾಮ ನಾಯ್ಕ (34) ಮೃತ ವ್ಯಕ್ತಿ. ಮಂಗಳವಾರ ರಾತ್ರಿ ಮೃತ ಜಯರಾಮ ನಾಯ್ಕ, ಈತನ ಸಹೋದರ ಹರೀಶ್ ನಾಯ್ಕ, ಹರೀಶ್ ಪಟ್ರಕೋಡಿ, ದೀಕ್ಷಿತ್ ಮತ್ತು ವೇಣುಗೋಪಾಲ ಎಂಬರ ಜೊತೆ ತೊಡಿಕಾನದ ಚೈಪೆ ಎಂಬಲ್ಲಿ ತೋಡಿನಲ್ಲಿ ಮೀನು ಹಿಡಿಯಲು ಹೋದಾಗ ಘಟನೆ ನಡೆದಿದೆ. ರಾತ್ರಿ ಮೀನು ಹಿಡಿಯುತ್ತಿದ್ದಂತೆ ಕಾಡಿನಲ್ಲಿ ಬೇಟೆಗೆಂದು ಬಂದ ಮತ್ತೊಂದು ತಂಡ ಹೊಡೆದ ಗುಂಡು ತಗುಲಿ ಜಯರಾಮ ನಾಯ್ಕ ಮೃತಪಟ್ಟಿದ್ದಾರೆ ಎಂದು ಇವರ ಜೊತೆಯಲ್ಲಿದ್ದ ನಾಲ್ವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇವರು ರಾತ್ರಿ ಸುಮಾರು ಒಂಭತ್ತು ಗಂಟೆಗೆ ಮೀನು ಹಿಡಿಯಲೆಂದು ತೆರಳಿದ್ದು ರಾತ್ರಿ ಸುಮಾರು 11.30ರ ವೇಳೆಗೆ ಘಟನೆ ನಡೆದಿದೆ.
ಗುಂಡು ಜಯರಾಮ್ ನಾಯ್ಕರ ಎಡಬದಿಯ ಎದೆಯನ್ನು ಹೊಕ್ಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ನಾಲ್ವರು ಸೇರಿ ಜಯರಾಮರ ಮೃತ ದೇಹವನ್ನು ತಂದು ತೋಟದಲ್ಲಿ ಹಾಕಿದ ಬಳಿಕ ತೋಟದ ಮಾಲಿಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಯರಾಮ ನಾಯ್ಕ ಹೊರಗೆ ಹೋಗಿದ್ದಾಗ ಅಪರಿಚಿತರು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಆರಂಭದಲ್ಲಿ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೇಳಿಕೆಯಿಂದ ಸಂಶಯಗೊಂಡು ಇವರನ್ನು ಸುಳ್ಯ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಮೀನು ಬೇಟೆಗೆ ತೆರಳಿದಾಗ ಎದುರಿನಿಂದ ಬಂದ ಇನ್ನೊಂದು ಬೇಟೆಯ ತಂಡ ಗುಂಡು ಹಾರಿಸಿ ಪರಾರಿ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ತೊಡಿಕಾನದ ಚಳ್ಳಂಗಾಯದ ತೋಟದಲ್ಲಿ ಜಯರಾಮ ನಾಯ್ಕ ರೈಟರ್ ಆಗಿ ತೋಟ ನೋಡಿ ಕೊಂಡು ತೋಟದ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದ. ತೋಟದ ಕಾಡು ತೆಗೆಯಲೆಂದು ತಮ್ಮ ಹರೀಶ್ ನಾಯ್ಕ, ಹರೀಶ್ ಪಟ್ರಕೋಡಿ, ದಿಕ್ಷೀತ್ ಮತ್ತು ವೇಣುಗೋಪಾಲ ಇಲ್ಲಿಗೆ ಬಂದಿದ್ದು ರಾತ್ರಿ ತೋಟದ ಮನೆಯಲ್ಲಿ ತಂಗಿದ್ದರು. ಘಟನಾ ಸ್ಥಳ ಪರಿಶೀಲನೆ ನಡೆಸಿದ ಪೋಲೀಸರು ತೊಡಿಕಾನದಿಂದ ಸುಮಾರು ಎರಡು ಕಿ.ಮೀ ದೂರದ ಹೊಳೆಬದಿಯ ಕಾಡಿನಲ್ಲಿ ಗುಂಡು ತಗುಲಿದ ಸ್ಥಳದಲ್ಲಿ ರಕ್ತದ ಕಲೆಗಳನ್ನು, ಗುಂಡು ತಗುಲಿ ಪ್ರದೇಶದಲ್ಲಿ ಬಿದಿರಿನ ಮೊಳೆಗಳು ಛಿದ್ರವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಜಯರಾಮ ನಾಯ್ಕನ ಜೊತೆಯಲ್ಲಿದ್ದ ಯುವಕರನ್ನು ತನಿಖೆಗೊಳಪಡಿಸಿದ್ದು ಮಾಹಿತಿ ಸಂಗ್ರಹಿಸಲಾಗುತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ.ಶರಣಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಪುತ್ತೂರು ಎ.ಎಸ್.ಪಿ ರಿಷ್ಯಂತ್, ಪ್ರೊಬೇಷನರಿ ಎಎಸ್ಪಿ ಲಕ್ಷ್ಮಣ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಬಿ.ಎಸ್. ಎಸ್.ಐ ಚಂದ್ರಶೇಖರ್ ಹೆಚ್.ವಿ., ಅಪರಾಧ ವಿಭಾಗದ ಎಸ್ಐ ಸಂಜಯ ಕಲ್ಲೂರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸುಳ್ಯ ಠಾಣಾ ವ್ಯಾಪ್ತಿಯ ತೊಡಿಕಾನದಲ್ಲಿ ರಾತ್ರಿ ಮೀನು ಶಿಕಾರಿಗೆ ಹೋದ ವ್ಯಕ್ತಿಯ ಮೇಲೆ ಗುಂಡು ತಗುಲಿ ಮೃತ ಪಟ್ಟ ಘಟನೆ ನಡೆದಿದ್ದು ತನಿಖೆ ಪ್ರಗತಿಯಲಿದೆ ಎಂದು ಎಸ್.ಪಿ ಡಾ. ಎಸ್.ಡಿ.ಶರಣಪ್ಪ ಪತ್ರಕರ್ತರಿಗೆ ತಿಳಿಸಿದ್ದಾರೆ. ಈ ಘಟನೆಯ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿಯೂ ನಡೆಸಲಾಗುತ್ತಿದೆ. ತನಿಖೆಯನ್ನು ತ್ವರಿತವಾಗಿ ಮಾಡಿ ಆರೋಪಿಗಳನ್ನು ಬಂಧಿಸಲಾಗುವುದು. ಈ ಭಾಗದಲ್ಲಿ ನಾಡಕೋವಿಗಳ ಬಳಕೆ ಹೆಚ್ಚಾಗುತ್ತಿರುವುದರ ಬಗ್ಗೆ ಮಾಹಿತಿಯಿದೆ. ಅನಧಿಕೃತ ಕೋವಿಗಳನ್ನು ಇಟ್ಟುಕೊಳ್ಳುವುದು ಮತ್ತು ಕಾಡು ಪ್ರಾಣಿಗಳನ್ನು ಬೇಟೆ ಮಾಡುವುದು ಕಾನೂನು ಬಾಹಿರ ಚಟುವಟಿಕೆ. ನಾಡಕೋವಿಗಳ ಬಳಕೆ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಮಾಹಿತಿ ಕೊಟ್ಟಲ್ಲಿ ಈ ರೀತಿಯ ಘಟನೆಗಳನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.