ಕಾರ್ಕಳ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಇರುವಂತಹ ಕಾಂತಾವರ ಬಾರಾಡಿ ಪ್ರದೇಶವು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿ ಉಳಿದಿದ್ದು ಇದರಿಂದ ಸಿಡಿದೆದ್ದ ನಾಗರಿಕರು ಏಕಘೋಷದಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಮಂಗಳೂರು-ಸೋಲಾಪುರ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯು ಕಾರ್ಕಳ ಚಿಲಿಂಬಿಯು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಗುರುತಿಸುತ್ತದೆ. ಇಲ್ಲಿಂದ ಎಡಭಾಗಕ್ಕೆ ತಿರುಗಿದರೆ ಸಿಗುವ ರಸ್ತೆಯೇ ಚಿಲಿಂಬಿ-ನಿಟ್ಟೆ ಪರಪ್ಪಾಡಿ ಕೂಡು ರಸ್ತೆ. ಇದು ಉಡುಪಿ ಜಿಲ್ಲಾ ಪಂಚಾಯತ್ ನ ಅಧೀನದಲ್ಲಿ ಇದೆ. ಚಿಲಿಂಬಿಯಿಂದ ಬಾರಾಡಿ ತನಕದ ನಾಲ್ಕು ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದು ಮಿಯ್ಯಾರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತಿದೆ. ನಂತರದಿಂದ ನಿಟ್ಟೆ ಪರಪ್ಪಾಡಿಯ ಮೂರು ಕಿ.ಮೀ ನಿಟ್ಟೆ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತಿದೆ. ಇದರ ಸ್ಥಿತಿ-ಗತಿ ಅಷ್ಟಕಷ್ಟೇ.
ಮಿಯ್ಯಾರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಚಿಲಿಂಬಿ-ಬಾರಾಡಿ ನಡುವೆ ಹಾದು ಹೋಗಿರುವ ರಸ್ತೆಯು ತೀರಾ ಅದಗೆಟ್ಟಿದೆ. ಭೂತಕನ್ನಡಿ ಮೂಲಕ ನೋಡಿದರೂ ಒಂದಿಂಚು ಉತ್ತಮ ರಸ್ತೆ ಕಾಣಸಿಗದು. ಎಲ್ಲೂ ನೋಡಿದರೂ ಅಲ್ಲಲ್ಲಿ ಹೊಂಡಗುಂಡಿಯದೇ ಕಾರುಬಾರು. ರಸ್ತೆಯ ಇಕ್ಕೆಲ್ಲೆಗಲ್ಲಿ ಚರಂಡಿ ವ್ಯವಸ್ಥಿಯೂ ಇಲ್ಲ. ಹೀಗಾಗಿ ಮಳೆನೀರು ಪೂರ್ತಿ ರಸ್ತೆ ಮೇಲೆಯೇ ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಈ ರಸ್ತೆಯಾಗಿ ಸಂಚಾರಿಸುವುದು ತ್ರಾಸದಾಯಕ. ಅಂತಹ ಸಂದರ್ಭದಲ್ಲಿ ಅಪ್ಪಿತಪ್ಪಿ ವಾಹನಗಳು ಇದೇ ಮಾರ್ಗವಾಗಿ ಓಡಾಟ ನಡೆಸಿದ್ದರೇ ಪಾದಚಾರಿಗೆ ಕೆಸರಭಿಷೇಕವಾಗುವುದಂತು ಕಂಡಿತ.
ತೀರಾ ಹಿಂದುಳಿದ ಪ್ರದೇಶವಾಗಿದ್ದು ಬಸ್ ಸಂಚಾರ ವಿಲ್ಲದೇ ಸುಮಾರು 4 ಕಿ.ಮೀ ಸಂಚಾರ ನಡೆಸಿ ಅಲ್ಲಿನ ನಾಗರಿಕರು ಒಂದೋ ಚಿಲಿಂಬಿಗೆ ಬರಬೇಕು. ಇಲ್ಲದೇ ಹೋದಲ್ಲಿ ನಿಟ್ಟೆ ಪರಪ್ಪಾಡಿ ಹೋಗಬೇಕು. ಈ ಎಲ್ಲಾ ಗಂಭೀರ ಸಮಸ್ಸೆ ನಡುವೆ ಬಾರಾಡಿ ಪ್ರದೇಶವು ಸ್ಥಳೀಯ ಕಾಂತಾವರ ಗ್ರಾಮ ಪಂಚಾಯತ್ ನಿಂದ ತೀರಾ ನಿರ್ಲಕ್ಷ್ಯಕ್ಕೊಳಗಾಗಿದೆ. ಬಾರಾಡಿ ಪ್ರದೇಶದ ನಾಗರಿಕರು ಸಂಜೆಯೊಳಗಾಗಿ ಮನೆ ಸೇರಲೇ ಬೇಕಾಗುತ್ತದೆ. ವಿದ್ಯುತ್ ಕಂಬಗಳಿದ್ದರೂ ಒಂದೇ ಒಂದು ಬೀದಿ ದೀಪ ಅಳವಡಿಸದೇ ಇರುವುದರಿಂದ ರಸ್ತೆಯಲ್ಲಿ ನಡೆದಾಡುವುದು ಕಷ್ಟಸಾಧ್ಯ. ಕಾಡುಪ್ರಾಣಿಗಳ ಹಾವಳಿ ಎಲ್ಲೇ ಮೀರಿದೆ.
ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ಅಲ್ಲಿನ ನಾಗರಿಕರು ಪಕ್ಷಭೇಧ ಮರೆತು ವಿವಿಧ ಹಂತದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಅವರೆಲ್ಲರ ಭರವಸೆಯೂ ಹುಸಿಯಾಗಿಯೇ ಉಳಿದಿರುವುದರಿಂದ ಸಮಸ್ಸೆ ಯಥಾಸ್ಥಿತಿಯಲ್ಲಿ ಮುಂದುವರಿಯಲು ಕಾರಣವಾಗಿದೆ.