ಮಂಗಳೂರು: ಆರು ತಿಂಗಳಿನಿಂದ ಜತೆಗಿದ್ದ ವಿವಾಹಿತೆ ಪ್ರಿಯತಮೆಯನ್ನು ಪ್ರಿಯಕರ ಹತ್ಯೆಗೈದಿರುವ ಘಟನೆ ಬೀರಿ ಸಮೀಪದ ಮಾಡೂರು ಕಾಚಾರು ಬಳಿ ನಿನ್ನೆ ಸಂಜೆ ಬೆಳಕಿಗೆ ಬಂದಿದ್ದು, ಕೊಲೆಗೈದಾತನನ್ನು ಪೊಲೀಸರು ಶವ ಪತ್ತೆಯಾದ ಕ್ಷಣದಲ್ಲೇ ಪತ್ತೆಹಚ್ಚಿ ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಶೋಭಾ (22) ಹತ್ಯೆಯಾದವಳು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಳೆಗೇರಿ ಮೂಲದ ಮುತ್ತಪ್ಪ ದಾಟಿನಾಳ ಹಾಗೂ ಶೋಭಾ ಕಳೆದ ನಾಲ್ಕು ತಿಂಗಳ ಹಿಂದೆ ಬೀರಿ ಆಸಿಯಾ ಕಂಪೌಂಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮುತ್ತಪ್ಪ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರೆ, ಶೋಭಾ ಮನೆಯಲ್ಲೇ ಇರುತ್ತಿದ್ದಳು. ಆರು ತಿಂಗಳ ಹಿಂದೆ ಕೂಳೂರು ಸಮೀಪ ಶೋಭಾಳ ಪರಿಚಯವಾಗಿದ್ದ ಮುತ್ತಪ್ಪ ಆಕೆಯನ್ನು ತನ್ನ ಜತೆಗೇ ಇರಿಸಿಕೊಂಡಿದ್ದ. ಶೋಭಾ ವಿಪರೀತ ಕುಡಿತದ ಚಟ ಹೊಂದಿದ್ದ ಕಾರಣ ಇಬ್ಬರ ನಡುವೆ ಆಗಾಗ್ಗ ಜಗಳಗಳು ನಡೆಯುತ್ತಿತ್ತು. ವಿವಾಹಿತಳಾಗಿರುವ ಶೋಭಾಳಿಗೆ ಪತಿ ಹಾಗೂ ಒಂದು ಮಗು ಇದೆ. ಅವರನ್ನು ವರ್ಷದ ಹಿಂದೆಯೇ ತೊರೆದ ಶೋಭಾ ಕೂಳೂರು ಬಳಿ ರಸ್ತೆ ಬದಿಯಲ್ಲೇ ವಾಸಿಸುತ್ತಿದ್ದಳು. ಕುಡಿತಕ್ಕಾಗಿ ಅನೈತಿಕ ಚಟುವಟಿಕೆಯಲ್ಲಿ ನಿರತಳಾಗುತ್ತಿದ್ದವಳು, ಮುತ್ತಪ್ಪ ಸಿಕ್ಕ ನಂತರವೂ ಅದನ್ನೇ ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ದಿನ ರಾತ್ರಿ ಗಲಾಟೆಗಳು ನಡೆಯುತಿತ್ತು. ಸೋಮವಾರ ರಾತ್ರಿಯೂ ಇಬ್ಬರ ನಡುವೆ ಗಲಾಟೆ ನಡೆದು ಆಕ್ರೋಶಗೊಂಡ ಮುತ್ತಪ್ಪ ಶೋಭಾಳ ತಲೆಯನ್ನು ಗೋಡೆಗೆ ಬಡಿದಿದ್ದ. ಇದರಿಂದ ತಲೆಗೆ ಗಂಭೀರ ಗಾಯಗೊಂಡವಳು ಅಲ್ಲೇ ಸಾವನ್ನಪ್ಪಿದ್ದಳು.
ಶೋಭಾ ಕುಡಿಯುವ ಚಟ ಹೊಂದಿದ್ದರಿಂದಾಗಿ ಸ್ಥಳೀಯರು ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರುವುದೆಂಬ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಎಸ್.ಐ ಭಾರತಿ ನೇತೃತ್ವದ ತಂಡ ಬಾಡಿಗೆ ಮನೆಗೆ ತೆರಳಿದಾಗ ಮನೆಯೊಳಗಿದ್ದ ನಳ್ಳಿಯಲ್ಲಿ ನೀರನ್ನು ಬಿಡಲಾಗಿತ್ತು. ಬಳಿಕ ಅಲ್ಲಿಂದ ಕೆಳಗಿಳಿಯುತ್ತಿದ್ದಂತೆ ಮೆಟ್ಟಿಲುಗಳಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ. ಅಲ್ಲಿಂದ ರಾತೋರಾತ್ರಿ ಹೊತ್ತೊಯ್ದು 1 ಕಿ.ಮೀ ದೂರದ ಹಾಡಿಯಲ್ಲಿ ಎಸೆದು ಬಳಿಕ ಮನೆಯ ಹೊರಗಡೆ ಮಲಗಿದ್ದಾನೆ. ಮನೆಯೊಳಗೆ ರಕ್ತದ ಕಲೆಗಳು ಕಾಣಿಸದ ರೀತಿಯಲ್ಲಿ ನಳ್ಳಿಯಲ್ಲಿನ ನೀರು ಬಿಟ್ಟಿರುವ ಶಂಕೆ ಇದೆ. ತಾರಸಿಯಿಂದ ಗೇಟಿನವರೆಗೆ ರಕ್ತದ ಕಲೆಗಳು ಮಾತ್ರ ಇದ್ದುದರಿಂದ ಅಲ್ಲಿಂದ ಮೃತದೇಹವನ್ನು ಬೇರೆಯವರ ಸಹಾಯದಿಂದ ಕೊಂಡೊಯ್ದಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.