ಸುಳ್ಯ: ಕಲಾವಿದರಿಗೆ ಹೆಗಲಿಗೆ ಹೆಗಲು ಕೊಟ್ಟು ಕಲೆಯನ್ನು ಮೇಲಕ್ಕೆತ್ತುವ ಮತ್ತು ಕಲಾವಿದರನ್ನು ಕೈ ಹಿಡಿದು ಎತ್ತರಕ್ಕೆ ಕೊಂಡೊಯ್ಯುವವರು ಕಲಾಭಿಮಾನಿಗಳು. ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿ ಅವರನ್ನು ಬೆಳೆಸುವ ಜವಾಬ್ದಾರಿ ಕಲಾಸಕ್ತರಿಗಿದೆ ಎಂದು ಹಿರಿಯ ರಂಗ ಕಲಾವಿದೆ ಹಾಗೂ ರಾಜ್ಯ ಸಭಾ ಸದಸ್ಯೆ ಬಿ.ಜಯಶ್ರೀ ಹೇಳಿದರು.
ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ರಂಗಮನೆಯಂತಹ ಸಾಂಸ್ಕೃತಿಕ ಕೇಂದ್ರಗಳು ಬೆಳೆದರೆ ನಾಡಿನ ಸಾಂಸ್ಕೃತಿಕ ಹಿರಿಮೆ ಉತ್ತುಂಗಕ್ಕೇರಲು ಸಾಧ್ಯ. ಅದಕ್ಕೆ ಪ್ರೋತ್ಸಾಹ ಅತೀ ಅಗತ್ಯ ಎಂದು ಅವರು ಹೇಳಿದರು. ಸುಶ್ರಾವ್ಯವಾದ ಹಾಡಿನ ಮೂಲಕ ಜಯಶ್ರೀ ನೆರೆದ ಕಲಾಭಿಮಾನಿಗಳನ್ನು ರಂಜಿಸಿದರು.
ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದ ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ` ಸಂಗೀತ ಮತ್ತು ಕಲೆಯನ್ನು ಸೃಷ್ಠಿಸುವ ಕಲಾವಿದರು ಕಲಾಭಿಮಾನಿಗಳ ಹೃದಯದಲ್ಲಿ ಆಸ್ವಾದನೆಯ ರಸವನ್ನುಂಟು ಮಾಡುವ ಮೂಲಕ ಆನಂದವನ್ನು ನೀಡುತ್ತಾರೆ ಎಂದು ಹೇಳಿದರು.
ರಂಗಭೂಮಿ ಉಡುಪಿಯ ಪರವಾಗಿ ಗೌರವಾಧ್ಯಕ್ಷ ಡಾ.ಹೆಚ್.ಶಾಂತಾರಾಮ್ ಅವರಿಗೆ ರಂಗಮನೆಯ ಗೌರವ ಸನ್ಮಾನವನ್ನು ನೀಡಲಾಯಿತು. ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮುಖ್ಯ ಅತಿಥಿಯಾಗಿದ್ದರು. ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗಮನೆಯ ಅಧ್ಯಕ್ಷ ಜೀವನ್ ರಾಮ್ ಸುಳ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ವೀಣಾ ನಿರೂಪಿಸಿದರು.