ಸುಳ್ಯ: ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಮೀನು ಶಿಕಾರಿಗೆ ತೆರಳಿದ ಕೊಡಗು ಎಂ.ಚೆಂಬು ಗ್ರಾಮದ ಮುದರಡ್ಕ ಜಯರಾಮ ನಾಯ್ಕ (34) ಗುಂಡೇಟು ತಗುಲಿ ಮೃತಪಟ್ಟ ಪ್ರಕರಣವನ್ನು ಮೂರೇ ದಿನದಲ್ಲಿ ಭೇದಿಸಿದ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಎಂ.ಚೆಂಬು ಗ್ರಾಮದ ಚಳ್ಳಂಗಾಯದ ಸಿ.ಕೆ.ರಾಮಚಂದ್ರ ನಾಯ್ಕ(41) ಮತ್ತು ವಿಶ್ವನಾಥ.ಕೆ(38) ಬಂಧಿತ ಆರೋಪಿಗಳು. ಮಂಗಳವಾರ ರಾತ್ರಿ ಮೃತ ಜಯರಾಮ ನಾಯ್ಕ, ಈತನ ಸಹೋದರ ಹರೀಶ್ ನಾಯ್ಕ, ಹರೀಶ್ ಪಟ್ರಕೋಡಿ, ದೀಕ್ಷಿತ್ ಮತ್ತು ವೇಣುಗೋಪಾಲ ಎಂಬವರ ಜೊತೆ ತೊಡಿಕಾನದ ಚೈಪೆ ಎಂಬಲ್ಲಿ ತೋಡಿನಲ್ಲಿ ಮೀನು ಹಿಡಿಯಲು ಹೋದಾಗ ಘಟನೆ ನಡೆದಿತ್ತು. ಕಾಡಿನಲ್ಲಿ ಬೇಟೆಗೆಂದು ಬಂದ ರಾಮಚಂದ್ರ ನಾಯ್ಕ ಮತ್ತು ವಿಶ್ವನಾಥ ಕಾಡು ಹಂದಿಯನ್ನು ಅಟ್ಟಿಸಿಕೊಂಡು ಬಂದು ಕಾಡು ಹಂದಿಗೆಂದು ಗುಂಡಿಕ್ಕಿದ್ದು ತೋಡಿನಲ್ಲಿ ರಾತ್ರಿಯ ವೇಳೆ ಚಿಕ್ಕ ಟಾರ್ಚ್ ಲೈಟ್ ಬಳಸಿ ಮೀನು ಹಿಡಿಯುತ್ತಿದ್ದ ಜಯರಾಮನ ಮೇಲೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನು ಹಿಡಿಯುತ್ತಿದ್ದ ವೇಳೆ ಮತ್ತೊಂದು ತಂಡ ಹೊಡೆದ ಗುಂಡು ತಗುಲಿ ಜಯರಾಮ ನಾಯ್ಕ ಮೃತಪಟ್ಟಿದ್ದಾರೆ ಎಂದು ಜಯರಾಮ ನಾಯ್ಕನ ಜೊತೆಯಲ್ಲಿದ್ದ ನಾಲ್ವರು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧರಿಸಿ ಮತ್ತು ಗುಂಡು ತಗುಲಿ ಪ್ರದೇಶದಲ್ಲಿ ಬಿದಿರು ಛಿದ್ರವಾಗಿರುವುದು ಮತ್ತಿತರ ಕುರುಹುಗಳನ್ನು ಗಮನಿಸಿದ ಪೊಲೀಸರು ಗುಂಡು ತಗುಲಿ ಜಯರಾಮ ನಾಯ್ಕ ಮೃತಪಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೋಗುವ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ರಾಮಚಂದ್ರ ನಾಯ್ಕ ಮತ್ತು ವಿಶ್ವನಾಥ ನಾಯ್ಕ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕೋವಿ, ಮದ್ದುಗುಂಡು, ಟಾರ್ಚ್ ಲೈಟ್, ಹಾಗು ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಮೂರು ದಿನದಲ್ಲಿ ಪ್ರಕರಣವನ್ನು ಭೇಧಿಸಿದ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ ಶರಣಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್, ಪ್ರೊಬೇಷನರಿ ಸಹಾಯಕ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರ್ಗ್ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಬಿ.ಎಸ್.ಸತೀಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು. ಸುಳ್ಯ ಠಾಣಾ ಎಸ್ಐಗಳಾದ ಚಂದ್ರಶೇಖರ ಹೆಚ್.ವಿ., ಸಂಜಯ್ ಕಲ್ಲೂರ, ಸಿಬ್ಬಂದಿಗಳಾದ ಕೃಷ್ಣಯ್ಯ, ಮಾಧವ, ರಾಧಾಕೃಷ್ಣ, ದೇವರಾಜ್, ಬಾಲಕೃಷ್ಣ, ವಿಜಯಕುಮಾರ್, ಪುನೀತ್ ಕುಮಾರ್, ಯೋಗಿತ, ಯಜ್ಞನಾರಾಯಣ, ಹನುಮಂತ, ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ಸಚಿನ್, ಗಿರಿಧರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.