ಕಾರ್ಕಳ: ಹಲವು ದಶಕಗಳಿಂದ ವಿಭಿನ್ನ ರಾಜಕರಣಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ. ಪರಿಣಾಮವಾಗಿ ಸೇತುವೆ, ರಸ್ತೆ ನಿರ್ಮಾಣ ಕಾರ್ಯ ಮರೀಚಿಕೆ ಉಳಿದಿದೆ. ಇದೇ ಕಾರಣದಿಂದ ಅಲ್ಲಿನ ನಾಗರಿಕರು ಜೀವದ ಹಂಗು ತೊರೆದು ತಾವೇ ನಿರ್ಮಿಸಿದ ಮರದ ತಾತ್ಕಾಲಿಕ ಸೇತುವೆ ಮೂಲಕವಾಗಿ ಉಕ್ಕಿ ಹರಿಯುತ್ತಿರುವ ಹೊಳೆಯನ್ನು ದಾಟುವ ಸಾಹಸವು ನಡೆಸಿ ದೈನಂದಿನ ಚಟುವಟಿಕೆ ಸಾಗಿಸುತ್ತಿದ್ದಾರೆ.ಇಂತಹ ಒಂದು ದೃಶ್ಯಾವಳಿ ಕಂಡು ಬರುತ್ತಿರುವುದು ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ.
ಬಜಗೋಳಿ-ಹೊಸ್ಮಾರ್ ಮಧ್ಯೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಪರಪ್ಪಾಡಿಯಿಂದ ಎಡಭಾಗದಲ್ಲಿ ಕಾಣಸಿಗುವ ಇಳಿಜಾರು, ಹೊಂಡ-ಗುಂಡಿ, ಅಂಕು-ಡೊಂಕಿನಿಂದ ಕೂಡಿದ ಮಣ್ಣಿನ ದುರ್ಗಮ ರಸ್ತೆ. ಇದರ ಮೂಲಕವಾಗಿ ಐದು ಕಿ.ಮೀ ಕ್ರಮಿಸಿದರೆ ಶೃಂಗೇರಿ-ಧರ್ಮಸ್ಥಳ ಪ್ರಮುಖ ರಸ್ತೆಯನ್ನು ಸಂಪಕಿಸ ಬಹುದಾಗಿದೆ. ಇದರ ಮಧ್ಯಭಾಗದಲ್ಲಿ ಸಿಗುವುದು ಮಂಜಲ್ತಾರ್ ಹೊಳೆ. ನಲ್ಲೂರು-ಮಾಳ ಹುಕ್ರಟ್ಟೆ ಎರಡು ಪ್ರದೇಶಗಳನ್ನು ಸಂಪರ್ಕಿಸುವುದಕ್ಕೆ ಮಂಜಲ್ತಾರ್ ಹೊಳೆಗೆ ಸೇತುವೆ ನಿರ್ಮಾಣ ಅತ್ಯಗತ್ಯ ಇದೆ. ಅಭಿವೃದ್ಧಿ ಕಾರ್ಯ ನಡೆದರೆ ಎರಡು ಪ್ರದೇಶಗಳನ್ನು ಕಡಿಮೆ ಅಂತರದಲ್ಲಿ ಕ್ರಮಿಸಲು ಸಾಧ್ಯವಿದೆ. ಪರಪ್ಪಾಡಿಯಿಂದ ಮಾಳ ಹುಕ್ರಟ್ಟೆಗೆ ವಾಹನ ಮೂಲಕವಾಗಿ ಹೋಗಬೇಕಾದರೆ ಸುಮಾರು 15 .ಕಿ.ಮೀ ಕ್ರಮಿಸಬೇಕಾಗುತ್ತದೆ. ಲಿಂಗಮುದ್ರೆ ಸೇತುವೆ ನಿರ್ಮಾಣವಾದಲ್ಲಿ ಕೇವಲ 8 ಕಿ.ಮೀ ಅಂತರದಲ್ಲಿ ಕ್ರಮಿಸಲು ಸಾಧ್ಯವಿದೆ. ಪರಪ್ಪಾಡಿ ನಾಗರಿಕರು ನಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಇದ್ದರೂ ದೈನಂದಿನ ಕೆಲಸ ಕಾರ್ಯಗಳಿಗೆ ಮಾಳ ಹುಕ್ರಟ್ಟೆಯನ್ನೇ ಆಶ್ರಯಿಸಿಕೊಂಡಿದ್ದಾರೆ.
ಮಳೆಗಾಲ ಆರಂಭಗೊಳ್ಳುವ ಕೆಲ ದಿನಗಳ ಮುಂಚಿತವಾಗಿ ಸ್ಥಳೀಯ ಗ್ರಾಮಸ್ಥರು ಕರಸೇವೆಯ ಮೂಲಕ ತಾತ್ಕಾಲಿಕ ಮರದ ಸೇತುವೆಯನ್ನು ನಿರ್ಮಿಸುತ್ತಾರೆ. ಯಾವುದೇ ಆಧಾರವಿಲ್ಲದೇ ನಿಯಂತ್ರಣದಲ್ಲಿ ಇದರ ಮೇಲ್ಭಾಗವಾಗಿ ಮಳೆಗಾಲದಲ್ಲಿ ವಯೋಮಿತಿ, ಲಿಂಗತಾರಾತ್ಯಮೆ ಎನ್ನದೇ ಲಿಂಗನಮುದ್ರೆ ಹೊಳೆ ದಾಟಬೇಕಾಗಿದೆ. ಆಯತಪ್ಪಿದರೆ ಮರಣ ಕಟ್ಟಿಟಬುತ್ತಿಯಾಗಿದೆ. ಕೇವಲ ಆರುವರೆ ಅಡಿ ಎತ್ತರದಲ್ಲಿ ಅದನ್ನು ನಿರ್ಮಿಸುತ್ತಿರುವುದರಿಂದ ಅತೀ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಮರದ ಸೇತುವೆ ಜಲಶಾಹಿಯಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಸೇತುವೆ ನೀರು ಪಾಲಾದ ನಿದರ್ಶನ ನಡೆದಿದೆ. ಮರದ ಸೇತುವೆ ರಕ್ಷಣೆಯ ನಿಟ್ಟಿನಲ್ಲಿ ತೋರಗಾತ್ರದ ಕಬ್ಬಿಣದ ಸರೀಗೆಯನ್ನು ಪಕ್ಕದಲ್ಲಿ ಇರುವಂತಹ ಬೃಹತ್ ಗಾತ್ರದ ಮರಕ್ಕೆ ಕಟ್ಟಲಾಗುತ್ತದೆ.
ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಪಟ್ಟಾಭೂಮಿಗೆ ತಾಗಿಕೊಂಡು ಸುಮಾರು ಒಂದುವರೆ ಕಿ.ಮೀ ಉದ್ದದ ಡಾಂಬರು ರಸ್ತೆಯ ಅವಶೇಷ ಕಂಡುಬರುತ್ತಿದೆ. ರಸ್ತೆ ಪೂರ್ತಿ ಹೊಂಡ ಗುಂಡಿಯಿಂದಲೇ ತುಂಬಿದೆ. ಹಾಲಿ-ಮಾಜಿ ಶಾಸಕರಿಬ್ಬರು ಶಾಸಕರ ನಿಧಿಯಿಂದ ಬಿಡುಗಡೆಮಾಡಿರುವ ಅನುದಾನದಿಂದ ನಿರ್ಮಾಣವಾದ ರಸ್ತೆ ಇದಾಗಿದೆ ಎಂದು ತಿಳಿದುಬಂದಿದೆ. ಅನಾದಿ ಕಾಲದಿಂದಲೂ ಹೆಚ್ಚಾಗಿ ವಾಸ ಮಾಡಿಕೊಂಡು ಬಂದಿರುವ ಪರಿಶಿಷ್ಟ ಜಾತಿ ಸಮುದಾಯದವರ ಮೇಲಿನ ಮಮಕಾರದಿಂದ ಇಷ್ಟೊಂದು ಕೆಳದರ್ಜೆಯ ಕಾಮಗಾರಿಯ ಮೂಲಕ ಡಾಂಬರೀಕರಣ ನಡೆಸಲಾಗಿದೆ ಎಂಬ ಯಕ್ಷ ಪ್ರಶ್ನೆಗಳು ಸಹಜವಾಗಿ ಮೂಡತೊಡಗಿದೆ. ಅತ್ತ ವಾಹನ ಓಡಾಟಕ್ಕೂ ಇತ್ತ ಮಾನವನ ನಡೆದಾಟಕ್ಕೂ ಆಯೋಗ್ಯವಾದ ರಸ್ತೆಯ ಮೂಲಕವಾಗಿ ಅಲ್ಲಿನ ನಾಗರಿಕರು ಜೀವನ ಸಾಗಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿಯಾಗಿದೆ.