ಪುತ್ತೂರು: ಗೌಡ ಸಾರಸ್ವತ ಬ್ರಾಹ್ಮಣರ ಆಧ್ಯಾತ್ಮಿಕ ಕೇಂದ್ರವಾಗಿರುವ ಕಾಶಿ ಮಠದ ಹಿರಿಯ ಸ್ವಾಮೀಜಿಗೆ ಹಿಂದೆ ಕಿರಿಯ ಸ್ವಾಮೀಜಿಯಾಗಿದ್ದ ಶಿವಾನಂದ ಪೈ ಯಾನೆ ರಾಘವೇಂದ್ರ ತೀರ್ಥರು ಮಠಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ರಾಘವೇಂದ್ರ ತೀರ್ಥರು ಪುತ್ತೂರಿನಲ್ಲಿದ್ದಾರೆಂಬ ಸೂಚನೆ ಮೇರೆಗೆ ಆಂಧ್ರದ ಕಟಪ ಪೊಲೀಸರು ಮತ್ತು ಸಿಬಿಐ ತಂಡ ಫೆ.13ರಂದು ರಾತ್ರಿ ಖಾಸಗಿ ಇನ್ನೋವ ಕಾರು (ಎ.ಪಿ.03 ಟಿಬಿ 4512)ರಲ್ಲಿ ಪುತ್ತೂರಿಗೆ ಆಗಮಿಸಿ ಇಲ್ಲಿನ ರಾಮ ಲಾಡ್ಜ್ ನಲ್ಲಿ ತಂಗಿದ್ದು ಸ್ಥಳೀಯ ಜಿ.ಎಸ್.ಬಿ. ಸಮುದಾಯದ ನಾಲ್ವರೊಂದಿಗೆ ಫೆ.14ರಂದು ಬೆಳಿಗ್ಗೆ ಗಂಟೆ. 8ಕ್ಕೆ ಕಾರಿಗೆ ಪೊಲೀಸ್ ಎಂದು ಫಲಕ ಹಾಕಿ ಕೆಮ್ಮಾಯಿ ಸಮೀಪದ ಸತ್ಯಶೋಧನಾ ಟ್ರಸ್ಟ್ ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಅಲ್ಲದೆ ಮುಂದೆ ರಾಘವೇಂದ್ರ ತೀರ್ಥರು ಇಲ್ಲಿಗೆ ಬಂದರೆ ಮಾಹಿತಿ ನೀಡಲು ತಿಳಿಸಿರುವುದಾಗಿ ತಿಳಿದು ಬಂದಿದೆ.
1999ರಿಂದಲೂ ರಾಘವೇಂದ್ರ ತೀರ್ಥರು ಮತ್ತು ಸುಧೀಂದ್ರ ತೀರ್ಥ ಸ್ವಾಮೀಜಿ ನಡುವೆ ಕಾನೂನು ಸಂಘರ್ಷ ನಡೆಯುತ್ತಿದ್ದು, ಜಿಎಸ್ಬಿ ಸಮುದಾಯದಲ್ಲಿಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ತತ್ಪರಿಣಾಮವಾಗಿ ಹಿರಿಯ ಸ್ವಾಮೀಜಿಯವರು ಶಿಷ್ಯತ್ಯಾಗ ಮಾಡಿ, ಬೇರೆಯೇ ಸ್ವಾಮೀಜಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು. ಆದರೆ, ಮಠದ ಮೂಲ ವಿಗ್ರಹ ಮತ್ತು ಇತರ ಪೂಜಾ ಸೊತ್ತು-ಸಾಮಗ್ರಿಗಳು ರಾಘವೇಂದ್ರ ತೀರ್ಥರ ಕೈಯಲ್ಲೇ ಇದ್ದವು. ಆ ಸಂದರ್ಭದಲ್ಲಿ ಸಂಸ್ಥಾನದ ಮೂಲವಿಗ್ರಹ, ಪೂಜಾ ಸಾಮಗ್ರಿ ಮತ್ತು ಮಠದ ಇತರ ಸೊತ್ತುಗಳು ಯಾರಿಗೆ ಸೇರಿದ್ದೆಂಬ ವಿವಾದವೂ ಹುಟ್ಟಿಕೊಂಡಿತು. ಬಳಿಕ ತಿರುಪತಿಯ ನ್ಯಾಯಾಲಯವೊಂದು, ಅವೆಲ್ಲವೂ ಹಿರಿಯ ಸ್ವಾಮೀಜಿಗೇ ಸೇರಬೇಕೆಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಘವೇಂದ್ರ ತೀರ್ಥರು ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋದಾಗ, ಅಲ್ಲಿಯೂ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಆಂಧ್ರ ಸಿಬಿಐ ತಂಡ ರಾಘವೇಂದ್ರ ತೀರ್ಥರ ಶೋಧ ಕಾರ್ಯಚರಣೆ ನಡೆಸುತ್ತಿದೆ.