ಬಂಟ್ವಾಳ: ಅಡುಗೆ ಅನಿಲ ತುಂಬಿಸಿಕೊಂಡು ಬೆಂಗಳೂರಿಗೆ ಸಾಗುತ್ತಿದ್ದ ಕ್ಯಾಪ್ಸೂಲ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿಯಾಗಿ ಹೆದ್ದಾರಿಯಲ್ಲೇ ಅಡ್ಡ ಬಿದ್ದ ಘಟನೆ ಭಾನುವಾರ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ತುಂಬೆ ಕಾಲೇಜು ಸನಿಹ ಕೆಳಗಿನ ತುಂಬೆ ಮುಳಿಕಂಡ ತಿರುವಿನಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಅವಘಡ ನಡೆದಿದ್ದು, ಮೃತ ಚಾಲಕನನ್ನು ತಮಿಳ್ನಾಡು ರಾಜ್ಯದ ಸೇಲಂ ಜಿಲ್ಲೆ ಗಂಗವಳ್ಳಿ ತಾಲೂಕು ನಡುವಳ್ಳೂರು ಕೀಳಬದಿ ಮನೆ ನಿವಾಸಿ ಜಯಪ್ರಕಾಶ್ ಯನ್.(27) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಬಂಟ್ವಾಳ, ಮಂಗಳೂರು ಮತ್ತು ಪುತ್ತೂರಿನ ಅಗ್ನಿ ಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿ ಮುಂಜಾಗೃತ ಕ್ರಮ ಕೈಗೊಳ್ಳಲಾಯಿತು. ಅನಿಲ ತುಂಬಿದ ಕ್ಯಾಪ್ಸೂಲ್ ಟ್ಯಾಂಕರ್ ಅಡ್ಡ ಬಿದ್ದರೂ ಸೋರಿಕೆ ಆಗದ ಕಾರಣ ಹತ್ತಿರದ ಮನೆ ಮತ್ತು ನಿವಾಸಿಗಳಿಗೆ ಹಾನಿಯಾಗುವುದು ತಪ್ಪಿದೆ. ಟ್ಯಾಂಕರ್ ನಲ್ಲಿದ್ದ ಡೀಸೆಲ್ ಸೋರಿಕೆಯಾಗಿ ರಸ್ತೆಯಲ್ಲಿ ಹರಿದಿದ್ದು, ಆತಂಕಕ್ಕೆ ಕಾರಣವಾಯಿತು. ಆದರೂ ಅಗ್ನಿ ಶಾಮಕ ಇಲಾಖೆ ಮುಂಜಾಗೃತ ಕ್ರಮ ಕೈಗೊಂಡಿತ್ತು.
ಟ್ಯಾಂಕರ್ ಅಡ್ಡ ಬಿದ್ದ ತಕ್ಷಣದಲ್ಲಿ ಹೆದ್ದಾರಿಯಲ್ಲಿ ವಾಹನಸಂಚಾರ ಸ್ಥಗಿತಗೊಳಿಸಲಾಗಿದ್ದು, ಕೆಲ ಕಾಲದ ಬಳಿಕ ನೆತ್ತರಕೆರೆ ಜಂಕ್ಷನ್ ನಿಂದ ತುಂಬೆ ಖಾಸಗಿ ಆಸ್ಪತ್ರೆಯ ತನಕ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಘಟನೆ ನಡೆದ ಹತ್ತು ನಿಮಿಷದಲ್ಲಿ ಎಂಆರ್ಪಿಎಲ್ ಕಂಪೆನಿಗೆ ಪೊಲೀಸರು ಮಾಹಿತಿ ನೀಡಿ ಅನಿಲ ಸೋರಿಕೆ ನಿಯಂತ್ರಣ ಸಲಕರಣೆ ಸಹಿತ ಸ್ಥಳಕ್ಕೆ ಬರುವಂತೆ ಹಾಗೂ ಟ್ಯಾಂಕರ್ ತೆರವು ಕಾರ್ಯಾಚರಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು.
ಆದರೆ ಎಂಆರ್ ಪಿಎಲ್ ನಿಂದ ಸುಮಾರು ಎರಡುವರೆ ಗಂಟೆಗಳಷ್ಟು ವಿಳಂಬವಾಗಿ ಎಂಆರ್ ಪಿಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ರವರ ಆಕ್ರೋಶಕ್ಕೆ ಗುರಿಯಾದರು. ಇನ್ನಾದರೂ ಬೇಗ ಕ್ರಮ ಕೈಗೊಳ್ಳಿ, ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣದ ಕಷ್ಟ ಏನೆಂದು ತಿಳಿದಿದೆಯಲ್ಲ ಎಂದು ಅಧಿಕಾರಿಗಳನ್ನು ಎಸೈ ತರಾಟೆಗೆ ತೆಗೆದುಕೊಂಡರು.
ಅನಿಲ ಸಾಗಾಟದ ಕ್ಯಾಪ್ಸೂಲ್ ಟ್ಯಾಂಕರ್ ನಲ್ಲಿ ಇಬ್ಬರು ಚಾಲಕರು, ಒಬ್ಬ ನಿರ್ವಾಹಕ ಇರಬೇಕಾಗಿರುವುದು ನಿಯಮ. ಆದರೆ ಅಪಘಾತಕ್ಕೆ ಒಳಗಾದ ಟ್ಯಾಂಕರ್ ನಲ್ಲಿ ಚಾಲಕನೊಬ್ಬನೇ ಇದ್ದುದಾಗಿ ಪೊಲೀಸರು ತಿಳಿಸಿದ್ದು ಕಂಪೆನಿಯ ಮೇಲೆಯೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣವೇ ಇಲ್ಲಿ ನಡೆಯುವ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಕೆಳಗಿನ ತುಂಬೆ ಮುಳಿಕಂಡ ತಿರುವಿನಲ್ಲಿ ದಿನಂಪ್ರತಿ ವಾಹನ ಅಪಘಾತಗಳು ಸಾಮಾನ್ಯ ಎಂಬಂತೆ ನಡೆಯುತ್ತಿದೆ. ಕ್ಯಾಪ್ಯೂಲ್ ಟ್ಯಾಂಕರ್ ಬೀಳುವ ಅರ್ಧಗಂಟೆ ಮೊದಲು ದ್ವಿಚಕ್ರ ಸವಾರಿಬ್ಬರು ಇದೇ ತಿರುವಲ್ಲಿ ಬಿದ್ದು ಗಾಯ ಮಾಡಿಕೊಂಡು ಹೋಗಿದ್ದಾರೆ. ಇಲ್ಲಿನ ತಿರುವನ್ನು ನೇರ ಮಾಡದಿರುವ ಹೆದ್ದಾರಿ ಇಲಾಖೆಯೇ ಅಪಘಾತಕ್ಕೆ ಕಾರಣವಾಗಿದೆ. ವೇಗವಾಗಿ ಬರುವ ವಾಹನಗಳು ಈ ತಿರುವಿನಲ್ಲಿ ನಿಯಂತ್ರಣ ಸಿಗದೆ ರಸ್ತೆಯ ಅಂಚಿಗೆ ಢಿಕ್ಕಿ ಆಗುತ್ತದೆ. ಇಲ್ಲದಿದ್ದರೆ ಸ್ಕಿಡ್ ಆಗಿ ಉರುಳಿ ಬೀಳುತ್ತವೆ ಎಂದಿದ್ದಾರೆ.
ಮರಳು ಸಾಗಾಟದ ಲಾರಿಗಳಿಂದ ಸುರಿದ ಮರಳು ರಸ್ತೆಯ ಬದಿಯಲ್ಲಿ ಸಂಗ್ರಹ ಆಗಿದ್ದು ಅದರ ಮೇಲಕ್ಕೆ ಬರುವ ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಉರುಳಿ ಬೀಳುತ್ತವೆ ಎಂದು ಇದೇ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ಸ್ಥಳೀಯರು ತೋರಿಸಿದ್ದರು. ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸಲು ಪ್ರಕಾಶ್ ಬಿ. ಶೆಟ್ಟಿ , ಸಮದ್ ಕೈಕಂಬ ಮತ್ತು ಜೊತೆಗಾರರು, ಅಶೋಕ್ ಕಜೆಕಂಡ, ಪ್ರಶಾಂತ ಕೊಟ್ಟಾರಿ, ಶೇಖರ ತುಂಬೆ ಮತ್ತು ಇತರರು ಸಹಕರಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಬಂಟ್ವಾಳ ಸಂಚಾರಿ ಠಾಣೆಯ ಎಸೈ ಚಂದ್ರಶೇಖರಯ್ಯ, ವೃತ್ತನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ಮೊದಲಾದವರು ಸ್ಥಳಕ್ಕೆ ಧಾವಿಸಿ ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.