ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿರುವ ಪ್ರಣಾಳಿಕೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಲ್ಲಿ ಬದ್ದವಾಗಿದ್ದು ಜಿಲ್ಲೆ ಹಾಗೂ ಬಂಟ್ವಾಳ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕಂಕಣ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬಂಟ್ವಾಳದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಎರಡೂವರೆ ವರ್ಷಗಳ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ವಿವರಿಸಿದರು. ಮಾತಿನುದ್ದಕ್ಕೂ ಸಚಿವರು ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿದರಲ್ಲದೆ ಬಿ.ಸಿ.ರೋಡಿನಲ್ಲಿ ಅಂಬೇಡ್ಕರ್ ಸಮುದಾಯ ಭವನ, ಖಾಸಗಿ ಬಸ್ಸು ನಿಲ್ದಾಣ ಹಾಗೂ ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಜಮೀನಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಬಿ.ಸಿ.ರೋಡಿನಲ್ಲಿ ಮಿನಿ ವಿಧಾನಸೌಧ, ಉದ್ಯಾನವನ, ಕೆಎಸ್ಆರ್ ಟಿಸಿ ಬಸ್ಸು ತಂಗುದಾಣ, ಪ್ರವಾಸಿ ಮಂದಿರ, ಮೆಸ್ಕಾಂ ವಿಭಾಗೀಯ ಕಚೇರಿ, ಸಂಚಾರಿ ಪೊಲೀಸ್ ಠಾಣೆಯ ಅನುಷ್ಠಾನ, ಪೊಲೀಸ್ ಉಪವಿಭಾಗ ಸ್ಥಾಪನೆ, ಸರ್ಕಾರಿ ಆಸ್ಪತ್ರೆಯನ್ನು ನೂರು ಬೆಡ್ನ ಆಸ್ಪತ್ರೆಯಾಗಿ ಮೇಲ್ದರ್ಜೆಗೆ, ಕೆಪಿಟಿಗೆ ಸ್ವಂತ ಕಟ್ಟಡ, ಸರ್ಕಾರಿ ಪದವಿ ಹಾಗೂ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡ, ಬಂಜನಪದವಿನಲ್ಲಿ ತಾಲೂಕಿ ಕ್ರೀಡಾಂಗಣಕ್ಕೆ 9 ಎಕರೆ ಜಮೀನು ಮೀಸಲು, ಕಾರೀಂಜೇಶ್ವರ ಕ್ಷೇತ್ರದಲ್ಲಿ ದೈವೀವನ ನಿರ್ಮಾಣ, ವೀರಕಂಭದಲ್ಲಿ ಸಿರಿಚಂದನ ವನ, ತಾಲೂಕಿನಲ್ಲಿ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಮಾಣಿ, ನರಿಕೊಂಬು ಮತ್ತು ಸಜೀಪಮುನ್ನೂರಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಾಗೂ ಅಜಿಲಮೊಗರು, ಕಡೇಶಿವಾಲಯ ಸಂಪರ್ಕಕ್ಕೆ ನೇತ್ರಾವತಿಗೆ ಸೇತುವೆ ನಿರ್ಮಾಣಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಇದು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಣ್ಣಿಗೆ ಕಾಣುವ ರೀತಿಯಲ್ಲಿ ಆಗಿರುವ ಕಾಮಗಾರಿಗಳ ಹೈಲೈಟ್ಸ್ ಎಂದು ವಿವರಿಸಿದರು. ಹಾಗೆಯೇ ಜಿ.ಪಂ. ಪಿಡಬ್ಲ್ಯುಡಿ ರಸ್ತೆಗಳನ್ನು ನಮ್ಮ ಗ್ರಾಮ ನಮ್ಮ ರಸ್ತೆ, ನಬಾರ್ಡ್, ಸಿಆರ್ಎಫ್ ಯೋಜನೆಯಲ್ಲಿ ಹಲವಾರು ಗ್ರಾಮೀಣ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗಿದೆ ಎಂದರು.
ಕನ್ಯಾನಕ್ಕೆ ಹೊಸ ಕಾಲೇಜು ಮಂಜೂರು, ಸುರಿಬೈಲಿಗೆ ಪ್ರೌಢಶಾಲೆ, ಮಜ್ಜೊನಿ-ಕೋಡಪದವು ರಸ್ತೆಯ ಅಭಿವೃದ್ದಿ, ಶಾಸಕರ ಪ್ರದೇಶಾಭಿವೃದ್ದಿ ನಿಧಿಯಡಿಯಲ್ಲೂ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ ಎಂದ ಅವರು ಪೊಳಲಿಯಿಂದ ವಿಟ್ಲಗಡಿಯವರಗೆ ರಸ್ತೆ ಅಭಿವೃದ್ದಿಗೆ 19.2ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಹಲವಾರು ಖಾಸಗಿ ಸಂಸ್ಥೆಗಳ ಆರ್ಥಿಕ ನೆರವಿನಿಂದ ಪುರಸಭಾ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಹಾಗೂ ಶವಗಾರ ನಿರ್ಮಾಣ, ಕಾರಿಂಜ, ನರಹರಿ, ಪೊಳಲಿ, ಕಾವೇಶ್ವರ ದೇವಸ್ಥಾನದ ಪರಸರದಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದ ಮೂಲಕ ವಾಹನ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದರು.
ತಾಲೂಕಿನಲ್ಲಿ ಒಟ್ಟು 13, 794 ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆ, 94ಸಿ ಯೋಜನೆಯಡಿ 13683 ಅರ್ಜಿಗಳ ಪೈಕಿ 2068 ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ಪತ್ರ ನೀಡಲಾಗಿದೆ ಉಳಿದವುಗಳು ಪರೀಶೀಲನಾ ಹಂತದಲ್ಲಿದೆ ಎಂದು ವಿವರಿಸಿದ ಸಚವರು ಬಂಟ್ವಾಳ ತಾಲೂಕಿನ ಸಮಗ್ರ ವಿಕಾಸಕ್ಕೆ ಆದ್ಯತೆ ನೀಡಲಾಗುವುದು ಎಂದರು. ನಾನು ಉದಾಸೀನ ಶಾಸಕನಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ ಸಚಿವ ರೈ ಯವರು, ಕಾಂಗ್ರೇಸ್ ಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಂಡು ಪುಕ್ಕಟೆ ಪ್ರಚಾರಗಿಟ್ಟಿಸಿಕೊಳ್ಳುವ ವರ ವಿರುದ್ದ ಜನತೆ ಜಾಗೃತರಾಗಬೇಕು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಗಳನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ತಾಲೂಕು ಹಾಗೂ ಜಿಲ್ಲೆಯ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಜನರು ಮತ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಪ್ರಮುಖರಾದ ಬಿ.ಹೆಚ್.ಖಾದರ್, ಪದ್ಮನಾಭ ರೈ, ಶಶಿಧರ ಹೆಗ್ಡೆ, ರವೂಫ್, ಜಿನರಾಜ ಆರಿಗ, ಲುಕ್ಮಾನ್, ಜನಾರ್ಧನ ಚೆಂಡ್ತಿಮಾರ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಗಂಗಾಧರ, ಜಗದೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.