ಮೂಡುಬಿದಿರೆ: ನರೇಂದ್ರ ಮೋದಿ ಸರಕಾರವು ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಪೇಟೆಗಳಲ್ಲಿ ನೂರಾರೂ ಫ್ಲೆಕ್ಸ್ ಗಳನ್ನು ಅಡವಡಿಸುವ ಮೂಲಕ ಸ್ಮಾರ್ಟ್ ಸಿಟಿಗಳ ಚಿತ್ರಣ ಫ್ಲೆಕ್ಸ್ ಸಿಟಿಗಳಾಗಿ ಮಾರ್ಪಾಟಾಗಿವೆ ಎಂದು ಮೀನುಗಾರಿಕ ಸಚಿವ ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಹಾಗೂ ಅದರ ವಿರೋಧಿ ಗುಂಪುಗಳ ಪ್ರತಿಭಟನೆ ರೂಪದ ಉದ್ರೇಕಗಳಿಗೆ, ಪ್ರಶಾಂತ್ ಬಲಿಯಾಗಬೇಕಾಯಿತೇ ವಿನಃ, ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಈ ಪ್ರಕರಣ ಬಿಜೆಪಿಯ ಪ್ರೇರಣೆಯಿಂದಾಗಿದೆ. ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು ಎಂದರು.
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಅಭಿಮಾನ ಮತ್ತು ಗೌರವವಿದೆ. ಆದ್ದರಿಂದ ಮೂಡುಬಿದಿರೆಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ 5 ಜಿ.ಪಂ ಮತ್ತು 20 ತಾ.ಪಂಗಳಲ್ಲಿ ಗೆಲವು ನಮ್ಮದಾಗಿರುತ್ತದೆ ಎಂದರು. ಕಳೆದ ಸಾಲಿನ ಚುನಾವಣೆಯ ಸಂದರ್ಭ ನಮ್ಮ ನಡುವಿನ ಸಮಸ್ಯೆ ಮತ್ತು ಒತ್ತಡಗಳ ಪರಿಣಾಮವಾಗಿ ಕೆಲವು ಕಡೆ ಸೋಲಾಗಿತ್ತು. ಆದರೆ ಈ ಬಾರಿ ಸರಿಯಾದ ನಿರ್ಧಾರ ಹಾಗೂ ಉತ್ತಮ ಅಭ್ಯರ್ಥಿಗಳ ಆಯ್ಕೆಯಾಗಿರುವುದರಿಂದ ಗೆಲವು ನಮ್ಮ ಪಾಲಿಗಾಗಲಿದೆ ಎಂದು ತಿಳಿಸಿದರು.
ಭಾರತೀಯತೆಯ ಬಗ್ಗೆ ಮಾತನಾಡುವ ಮೋದಿಯ ಡ್ರೆಸ್ಕೋಡ್ ವಿದೇಶದ್ದು. ಇಂಗ್ಲೇಡಿನಲ್ಲಿ ಇವರ ಡ್ರೆಸ್ಸಿನ ವಿನ್ಯಾಸವನ್ನು ಮಾಡಲಾಗುತ್ತಿದೆ. ಅಲ್ಲದೆ ಅವರು ಬಳಸುವ ಕನ್ನಡಕ ಮತ್ತು ವಾಚುಗಳು ದುಬಾರಿ ಬೆಲೆಯದ್ದಾಗಿದೆಯಾದರೂ ಈ ಬಗ್ಗೆ ಯಾರೂ ಟೀಕೆ ಮಾಡುತ್ತಿಲ್ಲ. ಆದರೆ ಸಿದ್ದರಾಮಯ್ಯನವರು ಧರಿಸಿರುವ ವಾಚು ದುಬಾರಿ ಬೆಲೆಯದ್ದೆಂದು ಟೀಕೆ ಮಾಡುತ್ತಿದ್ದಾರೆ ಎಂದು ವಿಷಾಧ ವ್ಯಕ್ತ ಪಡಿಸಿದರು.