ಕಾರ್ಕಳ: ನಿಟ್ಟೆ ಕಾಲೇಜು ಎದುರುಗಡೆಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಹೈಟೈಶ್ಯನ್ ವಿದ್ಯುತ್ ತಂತಿಗಳ ಸ್ವರ್ಶದಿಂದ ಹೊರಬಂದ ಬೆಂಕಿಯ ಕಿಡಿ ಸುಮಾರು 3 ಎಕರೆ ಭೂಮಿಯಲ್ಲಿದ್ದ ಮುಳ್ಳಿಹುಲ್ಲು ಸುಟ್ಟು ಕರಗಲು ಉಂಟು ಮಾಡಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಸುಮಾರು 10 ಅಡಿ ಎತ್ತರದಲ್ಲಿ ಹೈಟೈಶ್ಯನ್ ಹಾದು ಹೋಗಿದ್ದು ಎರಡು ಬದಿಯ ಆಧಾರಕಂಬಗಳು ಬಲು ದೂರದಲ್ಲಿ ಇರುವುದರಿಂದ ಅದರ ತಂತಿಗಳು ಜೋತುಬಿದ್ದಿದ್ದು ಸಣ್ಣ ಪ್ರಮಾಣದ ಗಾಳಿ ಎದುರಾದಾಗ ತಂತಿಗಳು ಪರಿಸ್ಪರ ಸ್ವರ್ಶಕ್ಕೊಳಗಾಗುತ್ತಾ ವಿದ್ಯುತ್ ಕಿಡಿಗಳು ಇದರ ಮೂಲಕ ಹೊರ ಬರುತ್ತಿದೆ. ಗುರುವಾರ ಮಧ್ಯಾಹ್ನ ಸುಮಾರು 12ರ ವೇಳೆಗೆ ಇದೇ ಘಟನೆ ಮರುಕಳಿಸಿದ್ದು, ಇದರ ತಳಭಾಗದಲ್ಲಿ ಬೆಳೆದು ಒಣಗಿ ನಿಂತಿರುವ ಮುಳ್ಳಿಹುಲ್ಲಿಗೆ ಬೆಂಕಿಯ ಕಿಡಿ ತಗುಲಿ ಕ್ಷಣ ಮಾತ್ರದಲ್ಲಿ ಪರಿಸರದ ಮೂರು ಎಕರೆ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಗೆ ವ್ಯಾಪ್ತಿಸಿತು. ಅಕ್ಕಪಕ್ಕದಲ್ಲಿ ಹಲವು ಮನೆಗಳು ಇದ್ದವು.
ಮಧ್ಯಭಾಗದಲ್ಲಿ ದೈವದ ಗುಡಿಯೊಂದಿದ್ದು, ಸ್ಥಳೀಯ ನಾಗರಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವುದರಿಂದ ಇದಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಅದರ ಪಕ್ಕದಲ್ಲಿರುವ ತೆಂಗಿನ ಸಸಿ ಹಾನಿಗೊಳಗಾಗಿದೆ. ಇದರ ಮುಂದುವರಿದ ಭಾಗವಾಗಿ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಸಫಲರಾದರು.