ಸುಳ್ಯ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸುಳ್ಯ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಯಿತು.
ತಾಲೂಕಿನ ವಿವಿಧ ಕಡೆಗಳಲ್ಲಿ ಮತ ಯಂತ್ರದಲ್ಲಿ ವ್ಯಾಪಕ ದೋಷ ಕಂಡು ಬಂದದ್ದು ಮತದಾನ ಪ್ರಕ್ರಿಯೆಯಲ್ಲಿ ವಿಳಂಬ ಆಗಲು ಕಾರಣವಾಯಿತು. ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ಮತಯಂತ್ರ ಕೈ ಕೊಟ್ಟಿತ್ತು. ಇದರಿಂದ ಕೆಲವು ಕಡೆಗಳಲ್ಲಿ ಅರ್ಧಗಂಟೆಯಿಂದ ಒಂದು ಘಂಟೆಯ ವರೆಗೆ ಮತದಾನ ವಿಳಂಬವಾಯಿತು. ಬಳಿಕ ಮತಯಂತ್ರ ಬದಲಿಸಿ ಮತದಾನ ಆರಂಭಿಸಿದರೂ ಕೆಲವೆಡೆ ಮತ್ತೆ ಮತ ಯಂತ್ರದಲ್ಲಿ ದೋಷ ಉಂಟಾಗಿ ಮತದಾನಕ್ಕೆ ಅಡ್ಡಿ ಉಂಟಾಯಿತು.
ಬೆಳ್ಳಾರೆ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 35 ರಲ್ಲಿ ತಾ.ಪಂ.ನ ಮತಯಂತ್ರದಲ್ಲಿ ದೋಷ ಕಂಡು ಬಂದು ಸುಮಾರು ಅರ್ಧ ಘಂಟೆಗೂ ಹೆಚ್ಚು ಮತಾನ ವಿಳಂಬವಾಯಿತು. ಬಳಿಕ ಮತಯಂತ್ರವನ್ನು ಬದಲಿಸಿ ಮತದಾನವನ್ನು ಮುಂದುವರಿಸಲಾಯಿತು. ಪೆರುವಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.ಪಂ.ನ ಮತಯಂತ್ರದಲ್ಲಿಯೂ ದೋಷ ಕಂಡು ಬಂದು ಮತದಾನ ವಿಳಂಬವಾಯಿತು. ಅರಂತೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬೊಳ್ಳಾಜೆ ಶಾಲೆಯ ಮತಗಟ್ಟೆ ಸಂಖ್ಯೆ 75 ರ ಜಿ.ಪಂ.ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ಅರಂತೋಡು ಜಿ.ಪಂ.ಕ್ಷೇತ್ರದ ಅಮೈಮಡಿಯಾರು ದ.ಕ.ಹಿ.ಪ್ರಾ.ಶಾಲೆಯ ಮತಗಟ್ಟೆ ಸಂಖ್ಯೆ 76 ರಲ್ಲಿ ಜಿ.ಪಂ.ಚುನಾವಣೆಯ ಮತಗಟ್ಟೆಯಲ್ಲಿ ಎರಡು ಬಾರಿ ದೋಷ ಕಂಡು ಬಂದ ಕಾರಣ ಸುಮಾರು ಒಂದು ಘಂಟೆಗೂ ಹೆಚ್ಚು ಮತದಾನಕ್ಕೆ ಅಡ್ಡಿ ಉಂಟಾಯಿತು. ನಾರ್ಣಕಜೆಯ ತಾ.ಪಂ.ಮತಗಟ್ಟೆಯಲ್ಲಿ. ಸುಬ್ರಹ್ಮಣ್ಯ ಕ್ಷೇತ್ರದ ಮತಗಟ್ಟೆ ಸಂಖ್ಯೆ 24 ರ ತಾ.ಪಂ.ಮತಯಂತ್ರದಲ್ಲಿ, ಎಣ್ಮೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ ಏಳರಲ್ಲಿ ತಾ.ಪಂ.ಮತಯಂತ್ರದಲ್ಲಿ ಪಂಬೆತ್ತಾಡಿಯ ಮತಗಟ್ಟೆ ಸಂಖ್ಯೆ 27 ರಲ್ಲಿ ಜಿ.ಪಂ.ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ಅಲ್ಲದೆ ತಾಲೂಕಿನ ವಿವಿಧ ಬೂತ್ಗಳಲ್ಲಿಯೂ ಮತ ಯಂತ್ರ ಕೆಲವೊಮ್ಮೆ ಕೈ ಕೊಟ್ಟ ಘಟನೆ ವರದಿಯಾಗಿದೆ. ಎರಡು ಬಾರಿ ಮತ ಯಂತ್ರ ಕೈಕೊಟ್ಟ ಉಬರಡ್ಕ ಗ್ರಾಮದ ಅಮೈ ಮಡಿಯಾರು ಹಿ.ಪ್ರಾ.ಶಾಲೆಯ 76ನೇ ಮತಗಟ್ಟೆಯಲ್ಲಿ ನಿರಂತರ ಸರತಿ ಸಾಲು ಕಂಡು ಬರುತಿತ್ತು. ಹಲವರು ಮತ ಹಾಕದೆ ಹಿಂತಿರುಗಿ ಹೋಗಿ ಪುನಾಃ ಬಂದು ಮತ ಚಲಾಯಿಸಿದ ಘಟನೆಯೂ ನಡೆದಿತ್ತು. ಸಂಜೆಯ ವೇಳೆಗೂ ಇಲ್ಲಿ ಉದ್ದದ ಸರತಿ ಸಾಲು ಕಂಡು ಬಂದಿತ್ತು.
ಹಳೆಯದಾದ ಮತ ಯಂತ್ರಗಳನ್ನು ವಿತರಣೆ ಮಾಡಿದ ಕಾರಣ ಈ ರೀತಿಯಲ್ಲಿ ಮತ ಯಂತ್ರ ಕೈ ಕೊಡಲು ಕಾರಣವಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಕೆಲವು ಕಡೆಗಳಲ್ಲಿ 200 ಮೀಟರ್ನ ಒಳಗೆ ತೆರೆದ ಪಕ್ಷಗಳ ತಾತ್ಕಾಲಿಕ ಬೂತ್ ಗಳನ್ನು ತೆರವುಗೊಳಿಸಲಾಯಿತು.