ಮಂಗಳೂರು: ಬಿಜೆಪಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ದಾಳಿ ನಡೆಸಿದ ಘಟನೆ ಭಾನುವಾರ ಸಂಜೆ ಜೋಕಟ್ಟೆ ಬಳಿ ನಡೆದಿದೆ.
ಜೋಕಟ್ಟೆ ತೋಕುರು ನಿವಾಸಿಯಾದ ಪ್ರಕಾಶ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ನಾಲ್ಕು ಜನರ ತಂಡ ಎರಡು ಬೈಕ್ ಗಳಲ್ಲಿ ಬಂದು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕಾಶ್ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಕಳವಾರ್ ನಲ್ಲಿರುವ ಅಂಗಡಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ತಂಡವು ಯದ್ವಾತದ್ವಾ ತಲವಾರ್ ನಿಂದ ದಾಳಿ ನಡೆಸಿದ್ದು, ಈ ಸಂದರ್ಭ ಸ್ಕೂಟರ ಸಮೇತ ಪ್ರಕಾಶ್ ನೆಲಕ್ಕುಳಿದ್ದಾರೆ. ಕೈ ಭುಜ, ಸೊಂಟ ಮತ್ತಿತ್ತರ ಭಾಗಗಳಿಗೆ ಗಂಭೀರ ಗಾಯವಾಗಿದೆ. ಗ್ರಾಮ ಪಂಚಾಯಿತಿಗೆ ರಜೆ ಇದ್ದುದರಿಂದ ಘಟನಾ ಸ್ಥಳದಲ್ಲಿ ಯಾರೂ ಇರಲಿಲ್ಲ. ಪ್ರಕಾಶ್ ಗಾಯಗೊಂಡು ಬೊಬ್ಬೆ ಹೊಡೆಯುವುದನ್ನು ಕೇಳಿ ದೂರದಲ್ಲಿ ಆಟವಾಡುತ್ತಿದ್ದ ಮಕ್ಕಳು ಕೂಡ ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ.