ಮೂಡುಬಿದರೆ: ಪೇಟೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ಡೌನ್ ಸಮಸ್ಯೆಯಿಂದ ಸೇವೆ ಸ್ಥಗಿತಗೊಂಡಿದೆ. ಕಚೇರಿಯ ಸಿಬ್ಬಂದಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.
ಅವ್ಯವಸ್ಥೆಗಳಿಂದ ತಾಂಡವಾಡುತ್ತಿರುವ ಮೂಡುಬಿದರೆ ಉಪನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಗುರುವಾರದಿಂದ ಸರ್ವರ್ ಡೌನ್ ಸಮಸ್ಯೆಯಿಂದ ಕೆಲಸಕಾರ್ಯಗಳು ಸ್ಥಗಿತಗೊಂಡಿದ್ದು, ಅಗತ್ಯ ನೋಂದಣಿಗೆ ಬರುವ ನಾಗರಿಕರು ಕಂಗಾಲಾಗಿದ್ದಾರೆ. ಸಿಬ್ಬಂದಿಗಳಲ್ಲಿ ಮಾಹಿತಿ ಕೇಳಿದರೆ, `ಯಾವಾಗ ಸರಿಯಾಗುತ್ತದೆ ಗೊತ್ತಿಲ್ಲ’ ಎಂಬ ಮಾಹಿತಿ ಬರುತ್ತದೆ. ದಾಖಲೆಗಳ ಅಗತ್ಯ ನೊಂದಣಿ ಮಾಡಿಸಲು ಬರುವ ಸಂದರ್ಭದಲ್ಲಿ ಸೇವೆ ಸಿಗದಿದ್ದರೆ ಯಾರ ಬಳಿ ಕೇಳುವುದು ಎಂದು ಜನರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ನೋಂದಣಿ ಕೆಲಸ ಮಾಡಿಸಿಕೊಳ್ಳಲು ಬಂದ 75ರ ಹರೆಯದ ಮಹಿಳೆಯೊಬ್ಬರು ಕಚೇರಿ ಮುಂದೆ ಪ್ರಜ್ಞೆ ಬಿದ್ದಿದ್ದರು. ನೋಂದಣಿ ಬಳಿಕ ಮುಂಬೈ, ಬೆಂಗಳೂರು ಮುಂತಾದ ಕಡೆ ತೆರಳಬೇಕಾಗಿರುವವರು ಕೂಡ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ, ಬೀಗ ಜಡಿದಿರುವ ಶೌಚಾಲಯದಿಂದಾಗಿ ಮಹಿಳೆಯರು, ಮಕ್ಕಳು ಪರದಾಡುವಂತಾಗಿದೆ.
ಕಚೇರಿಯ ಅವ್ಯವಸ್ಥೆಗಳ ಬಗ್ಗೆ ನಾವು ಇಲ್ಲಿನ ಅಧಿಕಾರಿಗಳಲ್ಲಿ ವಿಚಾರಿಸುತ್ತೇವೆ. ಅವರ ದೂರವಾಣಿ ನಂಬರ್ ಕೊಡಿ ಎಂದು ನಾಗರಿಕರು ಕೇಳಿದರೆ, `ಅವರ ಮೊಬೈಲ್ ನಂಬರ್ ಗೊತ್ತಿಲ್ಲ’ ಎಂಬ ಉತ್ತರವೂ ಸಿಬ್ಬಂದಿಗಳಿಂದ ಬಂದಿದೆ. ಕಚೇರಿಯ ಹೊರಭಾಗದಲ್ಲಿ ಹಾಕಲಾಗಿರುವ ಸೂಚನ ಫಲಕದಲ್ಲಿ ಪೊಲೀಸ್ ಹಾಗೂ ಇತರ ತುರ್ತು ದೂರವಾಣಿ ಸಂಖ್ಯೆ ಇದೆಯೇ ಹೊರತು, ಕಚೇರಿಯ ಅಧಿಕಾರಿ, ಇಲ್ಲವೇ ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಲಗತ್ತಿಸಿಲ್ಲ. ಹೇಗೋ ಬೆಂಗಳೂರಿನ ಕಚೇರಿಯ ಸಂಖ್ಯೆಯನ್ನು ಪಡೆದು, ಅದನ್ನು ಸಂಪರ್ಕಿಸಿದಾಗ, ಕಾಲ್ ರಿಸೀವ್ ಮಾಡದೇ ಇರುವುದು ಕೂಡ ಮೂಡುಬಿದರೆ ನಾಗರಿಕರನ್ನು ಆಕ್ರೋಶಿತರನ್ನಾಗಿಸಿದೆ.