ಬಂಟ್ವಾಳ: ಬಾವಿಯಲ್ಲಿ ನೀರು ಸೇದುತ್ತಿದ್ದ ವೇಳೆ ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇರಾ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಮಂಗಳೂರು ಕಿನ್ನಿಗೋಳಿ ನಿವಾಸಿ ಬಬಿತಾ(24) ಎಂದು ಗುರುತಿಸಲಾಗಿದೆ. ಇರಾ ಗ್ರಾಮದ ದರ್ಖಾಸು ಎಂಬಲ್ಲಿ ಈ ಘಟನೆ ನಡೆದಿದೆ. ಮೂಲತಃ ಇರಾ ಗ್ರಾಮದ ದರ್ಖಾಸು ನಿವಾಸಿಯಾಗಿದ್ದ ಬಬಿತಾ ರನ್ನು ಕಳೆದ ನಾಲ್ಕು ವರ್ಷದ ಹಿಂದೆ ಕಿನ್ನಿಗೋಳಿಗೆ ಮದುವೆ ಮಾಡಿಕೊಡಲಾಗಿದ್ದು, ಇವರಿಗೆ ಎರಡು ವರ್ಷದ ಮಗುವಿದೆ. ಇರಾ ಸೋಮನಾಥೇಶ್ವರ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ ಬಬಿತಾ ರವರು ತನ್ನ ಪತಿ ಹಾಗೂ ಮಗುವಿನ ಜೊತೆಗೆ ಇರಾಕ್ಕೆ ಬಂದಿದ್ದು, ಪತಿ ಮಂಗಳವಾರವೇ ಕಿನ್ನಿಗೋಳಿಗೆ ತೆರಳಿದ್ದರು, ಬುಧವಾರ ಬಬಿತಾರವರೂ ತನ್ನ ಮಗುವಿನ ಜೊತೆಗೆ ತೆರಳುವವರಿದ್ದರು.
ಬುಧವಾರ ಬೆಳಿಗ್ಗೆ ಬಬಿತಾರವರು ತನ್ನ ತಾಯಿಮನೆಯಿಂದ ಸುಮಾರು 50 ಮೀ.ದೂರದಲ್ಲಿರುವ ದಂಡೆಯಿಲ್ಲದ ಬಾವಿಯಿಂದ ನೀರು ಎಳೆಯಲು ಮುಂದಾಗಿದ್ದರು. ಈ ವೇಳೆ ಬಾವಿಯ ಕಂಬ ಮುರಿದಿದ್ದು, ಹಗ್ಗ, ಕಂಬ ಹಾಗೂ ಕೊಡದ ಸಹಿತ ಬಬಿತಾರವರೂ ಬಾವಿಗೆ ಬಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳೀಯರು ಅವರನ್ನು ಬಾವಿಯಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ, ಆ ವೇಳೆಗಾಗಲೇ ಬಬಿತಾರವರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಠಾಣಾಧಿಕಾರಿ ರಕ್ಷಿತ್ ಗೌಡ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.
ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಸ್ಥಳೀಯರು ಜಾತಿಮತ ಬೇಧ ಮರೆತು ಅವರ ರಕ್ಷಣೆಗೆ ಮುಂದಾದರು. ಸ್ಥಳೀಯ ನಿವಾಸಿ ಇಬ್ರಾಹಿಂ ಎಂಬವರು ಪ್ರಾಣದ ಹಂಗು ತೊರೆದು ಬಾವಿಗೆ ಇಳಿದು, ಸ್ಥಳೀಯರ ನೆರವಿನೊಂದಿಗೆ ಬಬಿತಾರವರ ಪ್ರಾಣ ರಕ್ಷಣೆಗೆ ಮುಂದಾದರು. ಆದರೆ ಆಸ್ಪತ್ರೆ ಗೆ ತಲುಪುವಷ್ಟರಲ್ಲಿ ಬಬಿತಾ ಮೃತಪಟ್ಟಿದ್ದರು. ಜಾತಿಮತದ ಬೇಧವೆಣಿಸದೆ ಸಮಯಪ್ರಜ್ಞೆ ಮೆರೆದು ಮಾನವೀಯತೆಯಿಂದ ಪ್ರಾಣ ಉಳಿಸಲು ಮುಂದಾದ ಇಬ್ರಾಹಿಂ ಅವರ ಪ್ರಯತ್ನಕ್ಕೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ.