ಸುಳ್ಯ: ಸುಳ್ಯ ನಗರ ಸಮೀಪವೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಮತ್ತೆ ನಗರಕ್ಕೆ ನುಗ್ಗುವ ಆತಂಕ ಸೃಷ್ಠಿಸಿದೆ.
ಸುಳ್ಯ ನಗರ ಮತ್ತು ಅಜ್ಜಾವರ ಗ್ರಾಮದ ಗಡಿಯಲ್ಲಿ ಪಯಸ್ವಿನಿ ನದಿಯ ದಡದಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಗಜ ಪಡೆಗಳು ಪಯಸ್ವಿನಿ ನದಿ ದಾಟಿದರೆ ನಗರಕ್ಕೆ ಪ್ರವೇಶಿಸುವ ಭೀತಿ ಇದೆ. ಪಯಸ್ವಿನಿ ನದಿಯ ಒಂದು ಬದಿಯಲ್ಲಿ ಅಜ್ಜಾವರ ಗ್ರಾಮ ಮತ್ತು ಇನ್ನೊಂದು ಬದಿಯಲ್ಲಿ ಸುಳ್ಯ ನಗರ ವ್ಯಾಪ್ತಿಯ ಭಸ್ಮಡ್ಕ ಇದೆ. ನದಿಯ ಬದಿಯಲ್ಲಿ ಬೀಡು ಬಿಟ್ಟಿರುವ ಐದು ಆನೆಗಳ ಹಿಂಡು ನದಿ ದಾಟಿ ಭಸ್ಮಡ್ಕ ಭಾಗಕ್ಕೆ ನುಗ್ಗಲು ಪ್ರಯತ್ನ ನಡೆಸಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರ ಪ್ರಯತ್ನ ನಡೆಸಿ ನಗರದ ಕಡೆಗೆ ಬರುವುದನ್ನು ತಡೆದಿದ್ದಾರೆ.
ಪಟಾಕಿ ಸಿಡಿಸಿ, ತಮಟೆ, ಚೆಂಡೆ ಬಾರಿಸಿ ಆನೆಗಳು ನಗರಕ್ಕೆ ಇಳಿಯದಂತೆ ಕಾರ್ಯಾಚರಣೆ ನಡೆಸಲಾಗುತಿದೆ. ಆನೆಗಳನ್ನು ದೂರ ಅಟ್ಟಲು ಶತ ಪ್ರಯತ್ನ ನಡೆಸಿದರೂ ಅವು ದೂರ ಸರಿಯದೇ ಮೂರು ನಾಲ್ಕು ದಿನಗಳಿಂದ ಇಲ್ಲೇ ಬೀಡು ಬಿಟ್ಟಿದ್ದು ಕೃಷಿ ಹಾನಿಯನ್ನೂ ಮಾಡುತಿದೆ. ಎರಡು ಮರಿ ಆನೆಗಳು ಸೇರಿದಂತೆ ಐದು ಆನೆಗಳು ಪಯಸ್ವಿನಿ ನದಿಯಲ್ಲಿ ಜಳಕವಾಡುವುದು ಕಂದು ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್ 15 ರಂದು ಕಾಡಾನೆಗಳು ಸುಳ್ಯ ನಗರ ಪ್ರವೇಶಿಸಿ ದಿನ ಪೂರ್ತಿ ಆತಂಕದ ವಾತಾವರಣ ಸೃಷ್ಠಿಸಿತ್ತು. ಅಂದು ನಗರದ ಭಸ್ಮಡ್ಕಕ್ಕೆ ಬಂದಿದ್ದ ಏಳು ಆನೆಗಳ ಹಿಂಡನ್ನು ಸುಮಾರು 24 ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾಡಿಗೆ ಅಟ್ಟಲಾಗಿತ್ತು. ಇದೀಗ ಆನೆಗಳು ಮತ್ತೆ ನಗರ ಪ್ರದೇಶದ ಸನಿಹಕ್ಕೆ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ನಗರದ ಗಡಿ ಭಾಗದಲಿರುವ ಗ್ರಾಮಗಳಾದ ಆಲೆಟ್ಟಿ ಮತ್ತು ಅಜ್ಜಾವರ ಗ್ರಾಮಗಳಲ್ಲಿ ಆನೆಗಳು ನಿರಂತರ ಒಂದು ತಿಂಗಳಿನಿಂದ ಕೃಷಿ ಹಾನಿ ಮಾಡುತಿದೆ.
ಕಳೆದ ಒಂದೂವರೆ ವರ್ಷದಿಂದೀಚೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶದ ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ. ಆಗಿಂದಾಗ ನಾಡಿಗೆ ದಾಂಗುಡಿಯಿಡುವ ಕಾಡಾನೆಗಳ ಹಿಂಡು ಮಂಡೆಕೋಲು ಗ್ರಾಮವೊಂದರಲ್ಲೇ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ. ಇದೀಗ ಆನೆಗಳ ಉಪಟಳ ಇತರ ಗ್ರಾಮಗಳಿಗೂ ಹೆಚ್ಚಾಗಿರುವುದರ ಜೊತೆಗೆ ನಗರ ಪ್ರದೇಶಕ್ಕೂ ವ್ಯಾಪಿಸುತಿರುವುದು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದೆ.