ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಮದ್ದ, ಪರ್ಲಯಾ ಹಾಗೂ ಕೈಕಂಬ ಪರಿಸರದ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡು ನಿರ್ವಹಣೆಯ ಕೊರತೆಯಿಂದಾಗಿ ಜನ ಆರೋಗ್ಯದ ಭೀತಿ ಎದುರಿಸುತ್ತಿದ್ದಾರೆ.
ಇಲ್ಲಿ ನೂರಾರು ಸಂಖ್ಯೆಯಲ್ಲಿ ಮನೆಗಳು, ನಾಲ್ಕೈದು ಮಹಡಿಯ ವಸತಿ ಸಂಕೀರ್ಣಗಳು ಇದ್ದು ಇಷೆಲ್ಲಾ ಮನೆಗಳ ಕೊಳಚೆ ನೀರು ಹರಿಯುವ ಚರಂಡಿ ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿದು ಹೋಗದೆ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ರಾಡಿಯಾಗಿರುವ ಚರಂಡಿಯನ್ನು ಶುಚಿಗೊಳಿಸುವಂತೆ ಹಲವು ಸಮಯಗಳಿಂದ ಪುರಸಭೆಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಈ ವಾರ್ಡ್ ನ ಜನರ ಆರೋಪ. ಮನವಿಯ ಮೇಲೆ ಮನವಿ ನೀಡಿಯೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೂ ಲಿಖಿತ ದೂರು ಸಲ್ಲಿಸಲಾಗಿದೆ. ಕೊಳಚೆ ಬದಿಯಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆಯಿಂದಗಿ ಇಲ್ಲಿನ ಜನರಿಗೆ ತುರಿಕೆ ಕಾಯಿಲೆ ಸಾಮಾನ್ಯವಾಗಿದೆ. ಕೈಕಂಬದಿಂದ ಹರಿದು ಬರುವ ಅಂಗಡಿ ಹೊಟೇಲುಗಳ ಕೊಳಚೆ ನೀರು ಪರ್ಲೆಯ ಹಾಗೂ ಮದ್ದದ ಮೂಲಕ ಇದೇ ಚರಂಡಿಯಲ್ಲಿ ಹರಿಯುತ್ತಿದೆ. ಅಂತಿಮವಾಗಿ ಈ ಕೊಳಚೆ ನೀರು ಸೇರುವುದು ನೇತ್ರಾವತಿ ನದಿಗೆ. ಇದರಿಂದಾಗಿ ನದಿ ನೀರು ಮಲೀನವಾಗುತ್ತಿದೆ.
ಈ ವಾರ್ಡ್ ನ ಜನರ ಹೋರಾಟಕ್ಕೆ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಸಾಥ್ ನೀಡಿದೆ. ಇಲ್ಲಿನ ಸಮಸ್ಯೆಯನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯ ಗಮನಕ್ಕೆ ತಂದು ತಕ್ಷಣ ಸ್ಥಳ ಭೇಟಿ ನಡೆಸಿ ಸ್ವಚ್ಚಗೊಳಿಸುವಂತೆ ಮನವಿ ಮಾಡಿದೆ. ಅದರಂತೆ ಶುಕ್ರವಾರ ಪರ್ಲೆಯ ಹಾಗೂ ಮದ್ದ ಪರಿಸರದ ವಾಸ್ತವ ಸ್ಥಿತಿಯನ್ನು ಮುಖ್ಯಾಧಿಕಾರಿ ಪರಿಶೀಲಿಸಿ, ಸೋಮವಾರದಿಂದಲೇ ಸ್ಚಚ್ಛತಾ ಕಾರ್ಯ ನಡೆಸುವ ಬಗ್ಗೆ ಭರವಸೆ ನೀಡಿದ್ದಾರೆ. ಈ ಸಂದರ್ಭ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿಯ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ, ಉಪಾದ್ಯಕ್ಷ ರಾಜಾ ಚೆಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸುವರ್ಣ, ಪ್ರಮುಖರಾದ ಬಿ.ಎಂ.ಪ್ರಭಾಕರ ದೈವಗುಡ್ಡೆ, ಹರೀಶ್ ಪೆರಾಜೆ, ಶರೀಫ್ ಮದ್ದ, ಅಬ್ದುಲ್ ರಝಾಕ್ ಗುಂಪಕಲ್ಲು, ಹಸೈನಾರ್ ಪರ್ಲೆಯಾ ಪುರಸಭಾ ಅಧಿಕಾರಿಗಳಾದ ಚೆನ್ನಪ್ಪ ಗೌಡ, ಪರುಷೋತ್ತಮ ಹಾಜರಿದ್ದರು.