ಮಂಗಳೂರು: ಅಪ್ರಾಪ್ತೆಯನ್ನು ಯುವಕನೋರ್ವ ಅಪಹರಣಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ನಡೆದಿದೆ.
ಅಪಹರಣಕ್ಕೆ ಒಳಗಾಗಿರುವ ಬಾಲಕಿ (16) ವಯಸ್ಸಿನವಳಾಗಿದ್ದು, ಕೊಲ್ಯದ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಫೆ 20ರಂದು ಶಾಲೆಗೆಂದು ತೆರಳಿದ ವಿದ್ಯಾರ್ಥಿನಿ ಬಳಿಕ ವಾಪಸ್ಸಾಗಿರಲಿಲ್ಲ. ಈ ಬಗ್ಗೆ ಮನೆಮಂದಿ ಸಂಶಯಗೊಂಡು ಸ್ಥಳೀಯವಾಗಿ ವಿಚಾರಿಸಿದಾಗ ನೆರೆಮನೆಯ ಯುವಕನೋರ್ವನು ನಾಪತ್ತೆಯಾಗಿರುವ ವಿಚಾರ ಗೊತ್ತಾಗಿದೆ. ಬಳಿಕ ಈತನೇ ವಿದ್ಯಾರ್ಥಿನಿಯನ್ನು ಅಪಹರಿಸಿರುವ ವಿಚಾರ ಬೆಳಕಿಗೆ ಬಂದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಅಪಹರಣಕಾರ ಬಜರಂಗದಳ ಕಾರ್ಯಕರ್ತ. ವಿದ್ಯಾರ್ಥಿನಿಯನ್ನು ಅಪಹರಿಸಿದ ಯುವಕ ಕುಂಪಲ ಮೂರುಕಟ್ಟೆ ನಿವಾಸಿ ಶಶಿ (21)ಎಂಬವನಾಗಿದ್ದಾನೆ. ಈತ ಕುಂಪಲ ಭಾಗದಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದಾನೆ.
ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಂದರ್ಭದಲ್ಲಿ ಆಕೆಯ ಪರಿಚಯ ಬೆಳೆಸಿಕೊಂಡಿದ್ದ ಈತ ಅದನ್ನೇ ದುರುಪಯೋಗಪಡಿಸಿಕೊಂಡು ಅಪಹರಣಗೈದಿರುವ ಶಂಕೆ ಹೆತ್ತವರು ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಶಶಿ ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.