ಪುತ್ತೂರು: 2014ರ ಇಸವಿಯಲ್ಲಿ ಬಲ್ನಾಡಿನಲ್ಲಿ ಮನೆಗೆ ನುಗ್ಗಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಜಿಯಾದ್ ಬಂಧಿತ ಆರೋಪಿ. 2014ರಲ್ಲಿ ಬಲ್ನಾಡಿನಲ್ಲಿ ಗೋಪಾಲ ಸುವರ್ಣ ಎಂಬವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಆರೋಪಿ ಇಬ್ರಾಹಿಂರವರ ಮೇಲೆ 307 ಸೆಕ್ಷನ್ ದಾಖಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಆರೋಪಿ ಮತ್ತೆ ನ್ಯಾಯಾಲಯ ವಿಚಾರಣೆ ವೇಳೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈ ನಿಟ್ಟಿನಲ್ಲಿ ನ್ಯಾಯಾಲಯ ಆರೋಪಿ ಮೇಲೆ ವಾರಂಟ್ ಜಾರಿ ಮಾಡಿತ್ತು. ಫೆ. 26ರಂದು ಸಂಜೆ ಸಂಪ್ಯ ಪೊಲೀಸರು ಪುತ್ತೂರು ಕಿಲ್ಲೇ ಮೈದಾನಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.