ಕಾರ್ಕಳ: ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಗಳು ಅದ್ಯಾವುದೋ ಕಾರಣಕ್ಕೆ ಮನಸ್ಥಾಪ ಉಂಟಾಗಿ ವಿವಾಹಕ್ಕೆ ಅಡ್ಡಿ ಉಂಟಾಗಿತ್ತು. ನೊಂದ ಯುವತಿಯ ಕೋರಿಕೆಯಂತೆ ಕಾರ್ಕಳ ತಾಲೂಕು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಅವರಿಬ್ಬರನ್ನು ಒಂದು ಸೇರಿಸಿ ವಿವಾಹ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡ ಘಟನಾವಳಿ ನಡೆದಿದೆ.
ಮಾಳ ಗ್ರಾಮದ ಕಲ್ಲಡಲ್ಕೆ ಮುಳ್ಳೂರು ನಿವಾಸಿಗಳಾದ ಭೋಜ ಹಾಗೂ ಶಾಲಿನಿ ಎಂಬವರು ಸುದ್ದಿಯ ಕೇಂದ್ರ ಬಿಂದು. ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಶಾಲಿನಿ ತನ್ನ ನೋವನ್ನು ಹೇಳಿಕೊಂಡು ತಮ್ಮಿಬ್ಬರನ್ನು ಒಂದುಗೂಡಿಸಿ ಎಂಬ ಕೋರಿಕೆಯನ್ವಯ ಕೇಂದ್ರದ ಪ್ರಮುಖರು ಯುವಕ ಯುವತಿಯ ಮನೆಯವರನ್ನು ಅಲ್ಲಿಗೆ ಕರೆಯಿಸಿ ಕೌಟುಂಬಿಕ ಸಮಾಲೋಚನೆ ನಡೆಸಿದರು. ವಿವಾಹ ಪೂರ್ವ ಸಿದ್ಧತೆಗೆ ತಯಾರು ನಡೆಸುವಂತೆ ನೀಡಿರುವ ಮಾರ್ಗದರ್ಶನವನ್ನು ಇತ್ತಂಡವು ಒಪ್ಪಿಕೊಂಡಿತು.
ಫೆಬ್ರವರಿ 25ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೋಜ ಹಾಗೂ ಶಾಲಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಹಾಗೂ ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಪ್ರಮುಖರು ಆಶೀರ್ವದಿಸಿದ್ದಾರೆ. ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಕೌಟುಂಬಿಕ ಸಮಾಲೋಚಕಿ ಸುನೀತಾ ಸುಧಾಕರ್, ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ ಈದು, ಕಾರ್ಯದರ್ಶಿ ಸುನೀತಾ ಅನಂತಕೃಷ್ಣ ಶೆಟ್ಟಿ, ಸದಸ್ಯರುಗಳಾದ ಕೆ.ಪಿ ಪದ್ಮಾವತಿ, ರತ್ನಾವತಿ ನಾಯಕ್, ವಿನೋದಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೋನ್ಸಾಲ್ವಿಸ್ ಹಾಗೂ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಿ.ಎಂ ನಾಯ್ಕಲರ್ ಶುಭ ಹಾರೈಸಿದರು.