ಬಂಟ್ವಾಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಯೊಬ್ಬರ ಕರಿಮಣಿ ಸರವನ್ನು ಆರೋಪಿಯೋರ್ವ ಎಳೆದು ಪರಾರಿಯಾದ ಘಟನೆ ಮಂಗಳವಾರ ಬೆಳಿಗ್ಗೆ ತಣ್ಣೀರು ಪಂಥ ಗ್ರಾಮದ ಮುಂದಿಲ ಗೋಳಿಪಲ್ಕೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ರಾಘವೇಂದ್ರ ಎಂಬವರ ಪತ್ನಿ ಲತಾ ಎಂಬವರೇ ಸರಕಳಕೊಂಡವರಾಗಿದ್ದು, ಸ್ಥಳೀಯ ನಿವಾಸಿ ಹರಿಪ್ರಸಾದ್ ನನ್ನು ಆರೋಪಿಯೆಂದು ಗುರುತಿಸಲಾಗಿದೆ. ಲತಾ ಅವರ ತನ್ನ ಮಗನನ್ನು ನೆತ್ತರ ಸರಕಾರಿ ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಲತಾ ಅವರಿಗೆ ಪರಿಚಿತನಾಗಿದ್ದ ಹರಿಪ್ರಸಾದ್, ತನಗೆ 2000 ರೂ ಸಾಲ ಕೊಡಿ ಎಂದು ಕೇಳಿದಾಗ ಅವರು ಇಲ್ಲ ಎಂದರು. ಈ ಕ್ಷಣವೇ ಆರೋಪಿಯು ಲತಾರ ಕೈ ಹಿಡಿದು ಎಳೆದುಕೊಂಡು ಹೋಗಿ ಕುತ್ತಿಗೆಯನ್ನು ಬಲವಾಗಿ ಒತ್ತಿ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ. ಕಳೆದುಕೊಂಡಿರುವ ಕರಿಮಣಿ ಸರ ನಾಲ್ಕು ಪವನ್ ತೂಕವಿದ್ದು, 85 ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.