ಸುಳ್ಯ: ರಾಜ್ಯ ಇಂಧನ ಸಚಿವರಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಬಂಧಿಸಿದ ಘಟನೆ ದೊಡ್ಡ ವಿವಾದ ಸೃಷ್ಠಿಸುವುದರ ಜೊತೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಷ್ಟ್ರೀಯ ಚಾನೆಲ್ ಗಳು ಸೇರಿದಂತೆ ಮಾಧ್ಯಮಗಳು ಪ್ರಾಮುಖ್ಯತೆಯಿಂದ ಘಟನೆಯ ಬಗ್ಗೆ ವರದಿ ನೀಡಿರುವುದು ಘಟನೆಗೆ ರಾಜಕೀಯ ತಿರುವು ಪಡೆಯಲು ಕಾರಣವಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಕಡಿತದ ಹಿನ್ನಲೆಯಲ್ಲಿ ಸಚಿವರಿಗೆ ದೂರವಾಣಿ ಕರೆ ಮಾಡಿ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂಬ ದೂರಿನ ಮೇರೆಗೆ ಬೆಳ್ಳಾರೆಯ ಸಾಯಿ ಗಿರಿಧರ ರೈ ಯನ್ನು ಸುಳ್ಯ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದರು.
ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ವಿದ್ಯುತ್ ಸಮಸ್ಯೆಯನ್ನು ನಿವೇದಿಸಿ ಕೊಳ್ಳಲು ಇಂಧನ ಸಚಿವರಿಗೆ ದೂರವಾಣಿ ಕರೆ ಮಾಡಿದ ಕೃಷಿಕರನ್ನು ಸಚಿವರು ತನ್ನ ಪ್ರಭಾವ ಬಳಸಿ ಪೊಲೀಸರಿಂದ ಬಂಧಿಸುವಂತೆ ಮಾಡಿದ್ದು ಖಂಡನೀಯ ಎಂದು ಬಿಜೆಪಿ ಮಂಡಲ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಗಿರಿಧರ ರೈ ಯವರ ವಿರುದ್ಧ ಕೇಸು ದಾಖಲಿಸಿ ತಡರಾತ್ರಿ 20 ಕ್ಕೂ ಹೆಚ್ಚು ಪೊಲೀಸರು ಮನೆಯ ಬಾಗಿಲನ್ನು ಮುರಿದು ಅಕ್ರಮವಾಗಿ ಮನೆಗೆ ಪ್ರವೇಶಿಸಿ ಬಂಧಿಸಿರುವುದು ಖಂಡನೀಯ. ಜನತೆಗೆ ವಿದ್ಯುತ್ತನ್ನು ನೀಡಲು ವಿಫಲವಾದ ರಾಜ್ಯ ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ಸರ್ಕಾರ ಗ್ರಾಹಕರನ್ನೇ ಬಂಧಿಸಿ ಜೈಲಿಗೆ ತಳ್ಳಲು ಪ್ರಯತ್ನಿಸುತಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಸಚಿವರಿಗೆ ಕರೆ ಆಂದೋಲನ:
ಘಟನೆಯನ್ನು ವಿರೋಧಿಸಿ ಇಂದಿನಿಂದ ವಿದ್ಯುತ್ ಸಮಸ್ಯೆಯ ಬಗ್ಗೆ ಸಚಿವರಿಗೆ ನೇರ ಕರೆ ಮಾಡಿ ತಿಳಿಸುವ ಅಭಿಯಾನವನ್ನು ಆರಂಭಿಸಲು ಬಿಜೆಪಿ ಹಿಂದುಳಿದ ಮೋರ್ಚಾ ನಿರ್ಧರಿಸಿದೆ. ಸಚಿವರಿಗೆ ಕರೆ ಮಾಡಿ ನಿಂದಿಸಿದ್ದಾರೆ ಎಂದು ಹೇಳಿ ತನ್ನ ಪ್ರಭಾವವನ್ನು ಬಳಸಿ ಸಚಿವರು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಗ್ರಾಹಕರನ್ನು ರಾತೋ ರಾತ್ರಿ ಮನೆಗೆ ನುಗ್ಗಿ ಕಾನೂನು ಬಾಹಿರವಾಗಿ ಬಂಧಿಸಿದ ಘಟನೆಯನ್ನು ವಿರೋಧಿಸಿ ದ.ಕ.ಜಿಲ್ಲೆಯಿಂದ ದೂರವಾಣಿ ಕರೆ ಮಾಡಿ ಸಚಿವರಿಗೆ ವಿದ್ಯುತ್ ಸಮಸ್ಯೆ ಬಗ್ಗೆ ತಿಳಿಸುವ ಆಂದೋಲನವನ್ನು ಇಂದಿನಿಂದ ಆರಂಭಿಸಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಸುಳ್ಯ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ.
ನಿನ್ನೆಯೂ ಮುಂದುವರಿದ ವಿದ್ಯುತ್ ಸಮಸ್ಯೆ:
ಈ ಮಧ್ಯೆ ಸುಳ್ಯದಲ್ಲಿ ನಿನ್ನೆಯೂ ವಿದ್ಯುತ್ ಅಭಾವ ಕಾಡಿತ್ತು. ಮಂಗಳವಾರ ದಿನ ಪೂರ್ತಿ ವಿದ್ಯುತ್ ಕಡಿತಗೊಂಡಿತ್ತು. ಸಂಜೆಯ ವೇಳೆಗೆ ಬಂದರೂ ಹಲವು ಬಾರಿ ಕಣ್ಣಾ ಮುಚ್ಚಾಲೆಯಾಡುತ್ತಿತ್ತು. ಇಲ್ಲಿ ವಿದ್ಯುತ್ ಅಭಾವದ ವಿರುದ್ಧ ಪ್ರತಿಭಟನೆಯ ಕಾವೂ ಏರತೊಡಗಿದೆ. ವಿದ್ಯುತ್ ಅವ್ಯವಸ್ಥೆಯ ವಿರುದ್ಧ ಮಂಗಳವಾರ ಸವಿತಾ ಸಮಾಜದ ವತಿಯಿಂದ ಪ್ರತಿಭಟನೆ ನಡೆದಿತ್ತು. ಇಂದು ಬಿಜೆಪಿಯ ನೇತೃತ್ವದಲ್ಲಿ ಮೆಸ್ಕಾಂ ಕಚೇರಿಯ ಎದುರಿನಲ್ಲಿ ಬೆಳಿಗ್ಗೆ ಒಂಭತ್ತರಿಂದ ಆರರವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಸಾಯಿ ಗಿರಿಧರ ರೈ ಪ್ರತಿಕ್ರಿಯೆ:
ಸುಳ್ಯ ತಾಲೂಕಿನಲ್ಲಿ ವಿಪರೀತ ವಿದ್ಯುತ್ ಸಮಸ್ಯೆ ಇದೆ. ಈ ಕುರಿತು ಯಾವ ಅಧಿಕಾರಿಗಳಿಗೆ ಹೇಳಿದರೂ ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ. ವಿದ್ಯುತ್ ಸಮಸ್ಯೆಯ ಬಗ್ಗೆ ತಿಳಿಸಲು ಶನಿವಾರ ಸಚಿವರಿಗೆ ದೂರವಾಣಿ ಮಾಡಿದ್ದರೂ ಅವರು ಕರೆ ಸ್ವೀಕರಿಸಲಿಲ್ಲ. ಭಾನುವಾರ ಸಂಜೆ ಮತ್ತೆ ಕರೆ ಮಾಡಿದಾಗ ಸಚಿವರು ಕರೆ ಸ್ವೀಕರಿಸಿ ಗದರಿಸಿ ಮಾತನಾಡಿದ್ದಾರೆ. ಅದಕ್ಕೆ ನಾನು ಕೂಡ ಉತ್ತರಿಸಿದ್ದೇನೆ. ಅದಕ್ಕೆ ಪೊಲೀಸರ ಮೂಲಕ ಕೇಸು ದಾಖಲಿಸಿ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಬಂಧಿಸಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಇದಕ್ಕೆ ಯಾರಲ್ಲೂ ಪರಿಹಾರ ಸಿಗದ ಸ್ಥಿತಿ ಉಂಟಾಗಿದೆ ಎಂದು ಸಾಯಿ ಗಿರಿಧರ ರೈ ಪ್ರತಿಕ್ರಿಯಿಸಿದರು.