ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ನೇತ್ರಾವತಿಯ ಹರಿವಿನಿಂದ ಪ್ರತ್ಯೇಕಿಸ್ಪಟ್ಟ ತುಂಬೆ ಮತ್ತು ಸಜಿಪನಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬಹುಕಾಲದ ಕನಸಾಗಿರುವ `ತೂಗು ಸೇತುವೆ’ ಭಾಗ್ಯ ಇನ್ನೂ ಕೂಡಿ ಬರುವ ಹಾಗೆ ಕಾಣುತ್ತಿಲ್ಲ.
ಬಂಟ್ವಾಳ ತಾಲೂಕಿನ ತುಂಬೆ, ಪುದು, ಕಳ್ಳಿಗೆ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದ್ದರೆ ಇಲ್ಲಿ ಹರಿಯುವ ನೇತ್ರಾವತಿ ನದಿಯು ಸಜಿಪನಡು, ಸಜಿಪಪಡು, ಸಜಿಪಮೂಡ, ಸಜಿಪಮುನ್ನೂರು ಗ್ರಾಮಗಳನ್ನು ಪ್ರತ್ಯೇಕಿಸಿದೆ. ಸಜಿಪನಡು, ಪಡು, ಮೂಡ, ಮುನ್ನೂರು ಗ್ರಾಮಗಳ ನಾಗರಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬಿ.ಸಿ.ರೋಡ್, ಫರಂಗಿಪೇಟೆ, ಮಂಗಳೂರು ನಗರಕ್ಕೆ ತೆರಳಬೇಕಾದರೆ ದುಪ್ಪಟ್ಟು ಕಿಲೋ ಮೀಟರ್ ಸಾಗಬೇಕಾಗಿದೆ. ಅದರಲ್ಲೂ ಜನಸಾಮಾನ್ಯರು ಬಸ್, ಆಟೊ ಎಂದು ಎರಡುಪಟ್ಟು ಖರ್ಚು ಮಾಡುವ ಪರಿಸ್ಥಿತಿ ಇಲ್ಲಿದ್ದು.
ಆದ್ದರಿಂದ ಈ ಭಾಗದ ನಾಗರಿಕರು ಹಲವು ವರ್ಷಗಳಿಂದ ಸಜಿಪನಡು-ತುಂಬೆ ಕಡವಿಗೆ `ತೂಗು ಸೇತುವೆ’ (ದ್ವಿಚಕ್ರ ಹಾಗೂ ಮನುಷ್ಯರು ಸಂಚಾರಿಸುವಂತದ್ದು)ಯೊಂದರ ಬೇಡಿಕೆಯನ್ನಿಡುತ್ತಾ ಬಂದಿದ್ದರಾದರೂ ಬೇಡಿಕೆ ಈಡೇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ವೇಳೆ `ತೂಗು ಸೇತುವೆ’ ನಿರ್ಮಾಣವಾದಲ್ಲಿ ನಗರ ಸಂಚಾರದ ಸಮಸ್ಯೆ ಅರ್ಧದಷ್ಟು ಪರಿಹಾರವಾಗಲಿದೆ ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯ.
ಸಜಿಪನಡು, ಪಡು, ಮೂಡ, ಮುನ್ನೂರು ಗ್ರಾಮಗಳ ನಾಗರಿಕರು ಮುಡಿಪು-ದೇರಳಕಟ್ಟೆ ಮಾರ್ಗವಾಗಿ ಮಂಗಳೂರು ತಲುಪಬೇಕಾದರೆ 35 ಕಿ.ಮೀ. ಕ್ರಮಿಸಬೇಕಿದೆ. ಇನ್ನು ಮೆಲ್ಕಾರ್ ಮಾರ್ಗವಾಗಿ ಬಿ.ಸಿ.ರೋಡ್ ಗೆ 12 ಕಿ.ಮೀ. ಹಾಗೂ ಫರಂಗಿಪೇಟೆಗೆ 20 ಕಿ.ಮೀ. ಸಂಚರಿಸಬೇಕಿದೆ. ಒಂದು ವೇಳೆ ನಾಗರಿಕರ ಬೇಡಿಕೆಯಂತೆ ಸಜಿಪನಡು-ತುಂಬೆ `ತೂಗು ಸೇತುವೆ’ ನಿರ್ಮಾಣವಾದರೆ ತುಂಬೆ ಮೂಲಕ ಮಂಗಳೂರು ತಲುಪಲು ಬರೇ 18 ಕಿ.ಮೀ. ಸಾಕಾಗುವುದು. ಅಲ್ಲದೆ, ತುಂಬೆ ಮೂಲಕ ಬಿ.ಸಿ.ರೋಡ್ ಗೆ 5 ಕಿ.ಮೀ., ಫರಂಗಿಪೇಟೆಗೆ 4 ಕಿ.ಮೀ. ದೂರ ಕ್ರಮಿಸಿದರಾಯ್ತು. ಅಂದರೆ ಶೇ. 50ಕಿಂತಲೂ ಹೆಚ್ಚು ಕಿ.ಮೀ. ಪ್ರಯಾಣ ಕಡಿಮೆಯಾಗುತ್ತದೆ.
`ತೂಗು ಸೇತುವೆ’ ನಿರ್ಮಾಣದಿಂದ ಸಜಿಪನಡು, ಪಡು, ಮೂಡಾ, ಮುನ್ನೂರು ಗ್ರಾಮಗಳ ನಾಗರಿಕರಿಗೆ ಮಾತ್ರವಲ್ಲದೆ ತುಂಬೆ, ಪುದು, ಕಳ್ಳಿಗೆ ಗ್ರಾಮಗಳ ಸುತ್ತಮುತ್ತಲಿನ ಜನರಿಗೂ ಕೂಡ ಅನುಕೂಲವಾಗಲಿದೆ. ಮುಡಿಪು, ದೇರಳಕಟ್ಟೆ ಪ್ರದೇಶಗಳಿಗೆ ಪಂಪುವೆಲ್-ತೊಕ್ಕೋಟು ಮಾರ್ಗವಾಗಿ 35 ಕಿ.ಮೀ. ಸುತ್ತುವರಿಯುವುದನ್ನು ತಪ್ಪಿಸಿ ಸಜಿಪ ಮಾರ್ಗವಾಗಿ ಬರೇ 18 ಕಿ.ಮೀ. ಸಾಗಿ ತಲುಪಬಹುದಾಗಿದೆ. ಸಜಿಪ, ಬೋಳಿಯಾರ್ ಪ್ರದೇಶಗಳಿಗೆ ಬಿ.ಸಿ.ರೋಡ್-ಮೆಲ್ಕಾರ್ ದಾರಿಯಾಗಿ 20 ಕಿ.ಮೀ. ಕ್ರಮಿಸುವ ತುಂಬೆ, ಪುದು ಹಾಗೂ ಸುತ್ತಮುತ್ತಲಿನ ನಾಗರಿಕರಿಗೆ ತುಂಬೆ ಮೂಲಕ ಬರೇ ಮೂರ್ನಾಲ್ಕು ಕಿ.ಮೀ. ಸಾಗಿದರೆ ಸಾಕಾಗುವುದು. ಅಲ್ಲದೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿರುವ ಕೋಣಾಜೆ, ದೇರಳಕಟ್ಟೆಗೂ ತೆರಳಲು ವಿದ್ಯಾರ್ಥಿಗಳಿಗೆ ಕೂಡಾ ಅನುಕೂಲವಾಗಲಿದೆ.
ಈಗಾಗಲೇ ಸಜಿಪನಡು-ತುಂಬೆ, ಪಾವೂರು-ಅಡ್ಯಾರ್ ಕಡವಿಗೆ ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕರೂ ಆದ ಸಚಿವ ಯು.ಟಿ.ಖಾದರ್ ತೂಗು ಸೇತುವೆ ನಿರ್ಮಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಎಂಜಿನಿಯರ್ ಗಿರೀಶ್ ಭಾರದ್ವಾಜ್ರವರಲ್ಲಿ ಸರ್ವೇ ಕಾರ್ಯ ನಡೆಸಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರವು ರಸ್ತೆಗಳು ಹಾಗೂ ಬಸ್ ಸೌಕರ್ಯ ಇರುವ ಕಾರಣ ನೀಡಿ ಸಜಿಪನಡು-ತುಂಬೆ ಸೇತುವೆ ನಿರ್ಮಾಣ ಪ್ರಸ್ತಾಪವನ್ನು ತಿರಸ್ಕರಿಸಿದೆ. ಪಾವೂರು-ಅಡ್ಯಾರ್ ತೂಗು ಸೇತುವೆ ನಿರ್ಮಾಣ ಪ್ರಸ್ತಾಪವನ್ನು ಪುರಸ್ಕರಿಸಿದ್ದು, 1.50 ಕೋಟಿ ರೂ. ಅನುದಾನವನ್ನು ಕಾಯ್ದಿರಿಸಿದೆ.
ಹಲವು ವರ್ಷದ ಬೇಡಿಕೆಯಾಗಿರುವ ಸಜಿಪನಡು-ತುಂಬೆ ಸೇತುವೆ ನಿರ್ಮಾಣ ಪ್ರಸ್ತಾಪವನ್ನು ಸರಕಾರ ಕೈಬಿಟ್ಟಿರುವುದು ಇದೀಗ ಸಜಿಪನಡು, ಪಡು, ಮೂಡಾ, ಮುನ್ನೂರು, ತುಂಬೆ, ಪುದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಲ್ಲಿ ನಿರಾಸೆ ಮುಡಿಸಿದೆ. ಒಂದೆಡೆ ಆಕ್ರೋಶಕ್ಕೂ ಕಾರಣವಾಗಿದೆ. ಹಲವು ವರ್ಷದ ಬೆಡಿಕೆಯಾಗಿರುವ ಬಹುಪಯೋಗಿ `ತೂಗು ಸೇತುವೆ’ ನಿರ್ಮಾಣವನ್ನು ಸರಕಾರ ಕೈ ಬಿಟ್ಟಿರುವುದು ಸರಿಯಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಿ `ತೂಗು ಸೇತುವೆ’ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಸಜಿಪನಡು-ತುಂಬೆ ಮತ್ತು ಪಾವೂರು-ಅಡ್ಯಾರ್ `ತೂಗು ಸೇತುವೆ’ ನಿರ್ಮಾಣ ನನ್ನ ಕನಸಾಗಿದ್ದು, ಸೇತುವೆ ನಿರ್ಮಾಣಕ್ಕೆ 4ರಿಂದ 5 ಕೋಟಿ ರೂ. ಬೇಕಾಗಿದೆ. ಈ ಬಗ್ಗೆ ಸರ್ವೇ ನಡೆಸಿ ಸಲ್ಲಿಸಿದ್ದ ಪ್ರಸ್ತಾಪವನ್ನು ಸಜಿಪನಡು ಗ್ರಾಮದಲ್ಲಿ ರಸ್ತೆ ಹಾಗೂ ಬಸ್ಗಳ ಸೌಕರ್ಯವಿರುವ ಕಾರಣ ನೀಡಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ. ಆದರೂ, ಸಜಿಪನಡು ಮತ್ತು ತುಂಬೆ ಗ್ರಾಪಂ ಜೊತೆ ಸೇರಿ, ಸಂಸದ, ಶಾಸಕ, ರಾಜ್ಯಸಭೆ, ಜಿಪಂ, ತಾಪಂ ಹಾಗೂ ವಿವಿಧ ಅನುದಾನಗಳನ್ನು ಬಳಸಿ `ತೂಗು ಸೇತುವೆ’ ನಿರ್ಮಿಸಬಹುದಾಗಿದೆ. ಇದಕ್ಕೆ ನನ್ನಿಂದ ಆಗುವ ಎಲ್ಲ ಸಹಕಾರವನ್ನು ನೀಡಲು ತಾನು ಸಿದ್ಧನಿದ್ದೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.