ಬಂಟ್ವಾಳ: ತಾಲೂಕಿನ ತುಂಬೆಯಿಂದ ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಸರಬರಾಜಾಗುತ್ತಿರುವ ಪೈಪ್ ಮೇಲೆ ನಿರ್ಮಿಸಿರುವ ಕೌಂಪೌಂಡ್ ಗಳನ್ನು ಯಾವುದೇ ನೋಟಿಸ್ ನೀಡದೆ ಮನಪಾ ಅಧಿಕಾರಿಗಳು ಏಕಾಏಕಿ ಕೆಡವಿ ಹಾಕಿರುವ ಘಟನೆ ಶನಿವಾರ ತುಂಬೆ ಗ್ರಾಮದ ಕೆಳಗಿನ ತುಂಬೆಯಲ್ಲಿ ನಡೆದಿದೆ.
ಶನಿವಾರ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಆಗಮಿಸಿದ ಮಾನಪಾ ಎಂಜಿನಿಯರ್ ರಿಚಾರ್ಡ್ ನೇತೃತ್ವದ ಅಧಿಕಾರಿಗಳ ತಂಡ ಕೆಳಗಿನ ತುಂಬೆಯ ಮೂರು ಮನೆಗಳ ಕೌಂಪೌಂಡ್ ಗಳನ್ನು ಒಡೆದು ಹಾಕಿದ್ದಾರೆ. ಈ ಮೂರು ಮನೆಗಳಲ್ಲಿ ಎರಡು ಮನೆಗಳಿಗೆ ಮಾತ್ರ ಕೌಂಪೌಂಡ್ ತೆರವುಗೊಳಿಸುವಂತೆ ನಾಲ್ಕೈದು ತಿಂಗಳ ಹಿಂದೆ ನೋಟಿಸ್ ನೀಡಲಾಗಿತ್ತು ಎನ್ನಲಾಗಿದ್ದು, ಉಳಿದಂತೆ ಬಂಟ್ವಾಳ ತಾಲೂಕಿನ ಯಾವುದೇ ಮನೆಗಳಿಗೆ, ಅಂಗಡಿಗಳಿಗೆ ನೋಟಿಸ್ ನೀಡಿಲ್ಲ. ಕೆಳಗಿನ ತುಂಬೆ ನಾರಾಯಣ ಬಂಗೇರ ಎಂಬವರಿಗೆ ನೋಟಿಸ್ ನೀಡದೆ ಅವರ ಮನೆ ಕೌಂಪೌಂಡ್ ಒಡೆದು ಹಾಕಿದ್ದಾರೆ. ನಾವೇ ತೆರವುಗೊಳಿಸುತ್ತೇವೆ ಕೌಂಪೌಂಡ್ ಕೆಡವಬೇಡಿ ಎಂದು ಮನೆಯವರು ಬೇಡಿಕೊಂಡರೂ ಕೇಳದ ಅಧಿಕಾರಿಗಳು ಕೌಂಪೌಂಡನ್ನು ಒಡೆದು ಹಾಕಿದ್ದರಲ್ಲದೆ, ಕೌಂಪೌಂಡ್ ಗೆ ಅಳವಡಿಸಿದ್ದ ಕಬ್ಬಣದ ಗೇಟನ್ನು ಕೂಡಾ ಜೆಸಿಬಿ ಯಂತ್ರದಲ್ಲಿ ಹಾನಿಗೊಳಿಸಿದ್ದಾರೆ ಎಂದು ನಾರಾಯಣ ಬಂಗೇರ ಆರೋಪಿಸಿದ್ದಾರೆ.
ಹಲವು ವರ್ಷಗಳ ಹಿಂದೆ ನಮ್ಮ ಜಾಗದಲ್ಲಿ ಪೈಪ್ ಹಾಕಿದಾಗ ಮನಪಾ ಅಧಿಕಾರಿಗಳು ಪರಿಹಾರ ನೀಡಿಲ್ಲ. ಅಲ್ಲದೆ, ಪೈಪ್ ಮಣ್ಣಿನ ಅಡಿಯಲ್ಲಿರುವುದು. ನಿಮಗೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇಂದು ಏಕಾಏಕಿ ಕೌಂಪೌಂಡ್ ಒಡೆದು ಹಾಕಿರುವ ಅಧಿಕಾರಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ನಾರಾಯಣ ಬಂಗೇರ ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಪೊಲೀಸರಿಂದ ತರಾಟೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಮನಪಾ ಅಧಿಕಾರಿಗಳೊಂದಿಗೆ ತೆರವಿಗೆ ಯಾರಿಂದ ನೋಟಿಸ್ ಬಂದಿದೆಎಂದು ಕೇಳಿದರು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ತೆರವುಗೊಳಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದಾಗ, ಜಿಲ್ಲಾಧಿಕಾರಿಯವರ ಅದೇಶ ಪ್ರತಿ ತೋರಿಸುವಂತೆ ಹೇಳಿದರು. ಈ ವೇಳೆ ಮನಪಾ ಅಧಿಕಾರಿಗಳಲ್ಲಿ ಯಾವುದೇ ಆದೇಶ ಪ್ರತಿ ಇರಲಿಲ್ಲ. ಈ ವೇಳೆ ಸಿಡಿಮಿಡಿಗೊಂಡ ಅವರು, ಯಾವುದೇ ಆದೇಶಪ್ರತಿಯೂ ಇಲ್ಲದೆ, ಪೊಲೀಸರಿಗೆ ಮಾಹಿತಿಯೂ ನೀಡದೆ ಹೇಗೆ ಕಾರ್ಯಾಚರಣೆ ನಡೆಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
10 ಸಾವಿರದ ಆಸೆ ತೋರಿಸಿದ ಎಂಜಿನಿಯರ್: ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದಾಗ, ಕೌಂಪೌಂಡ್ ನಿರ್ಮಿಸಲು ಸ್ವಂತ 10 ಸಾವಿರ ಕೊಡುತ್ತೇನೆ. ಯಾವುದೇ ದೂರುಗಳನ್ನು ನೀಡಲು ಹೋಗಬೇಡಿ ಎಂದು ಮನಪಾ ಎಂಜಿನಿಯರ್ ರಿಚಾರ್ಡ್ ಎಂಬವರು ಸ್ಥಳೀಯರಲ್ಲಿ ಹೇಳಿದಾಗ ಆಕ್ರೋಶಗೊಂಡ ಸ್ಥಳೀಯರು ಅವರನ್ನು ತರಾಟೆಗೆ ತೆಗೆದರು. ಸ್ಥಳಕ್ಕೆ ಮಾಧ್ಯಮದವರು ಆಗಮಿಸುತ್ತಿದ್ದಂತೆ ಎಲ್ಲ ಅಧಿಕಾರಿಗಳು ಕಾರು ಏರಿ ಹೊರಟು ಹೋದರು.