ಸುಳ್ಯ: ಹಾಲಿ 33 ಕೆ.ವಿ ಸಬ್ ಸ್ಟೇಷನ್ ವಿದ್ಯುತ್ ಲೈನ್ ಮಾರ್ಗದಲ್ಲಿಯೇ 110 ಕೆ.ವಿ ಲೈನ್ ಎಳೆದು ಸಬ್ ಸ್ಟೇಷನ್ ಯೋಜನೆ ಅನುಷ್ಠಾನಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದರು.
ಅವರು ತಾಲೂಕಿನ 11 ಕಡೆ 110 ಸಬ್ ಸ್ಟೇಷನ್ ವಿದ್ಯುತ್ ಲೈನ್ ಹಾದು ಹೋಗುವ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾದ ಸ್ಥಳ ಪರಿಶೀಲನೆ ನಡೆಸಿ ಪತ್ರಕರ್ತರ ಜತೆ ಮಾತನಾಡಿದರು. 110 ಕೆ.ವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ವೇ ಕಾರ್ಯ ಹಂತದಲ್ಲಿದೆ. ಜನರ ಆಕ್ಷೇಪಣೆಗಳು ಇರುವ ಕಾರಣ ಸೂಚಿತ ಮಾಡಾವು -ಜಾಲ್ಸೂರು ಮಾರ್ಗವೇ ಅಂತಿಮ ಎಂದು ಪರಿಗಣಿತವಾಗಿಲ್ಲ. ಈಗಿರುವ 33 ಕೆ.ವಿ ಸಬ್ ಸ್ಟೇಷನ್ ಮಾರ್ಗದಲ್ಲಿಯೇ 110 ಸಬ್ ಸ್ಟೇಷನ್ ಮಾರ್ಗ ಅನುಷ್ಠಾನಿಸುವ ಕುರಿತು ಪರಿಶೀಲನೆ ನಡೆಸಲು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಜನವರಿಯಲ್ಲಿ ಉಭಯ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸದ ಬಗ್ಗೆ ಜಿಲ್ಲಾಧಿಕಾರಿ ಬಳಿ ಪ್ರಶ್ನಿಸಿದಾಗ, ಆಡಳಿತ್ಮಾಕವಾಗಿ ಇಲ್ಲಿ ಸಮಸ್ಯೆ ಇಲ್ಲ. ಬದಲಿಗೆ ಲೈನ್ ಹಾದು ಹೋಗುವ ಖಾಸಗಿ ಜಮೀನಿನಲ್ಲಿ ಆಕ್ಷೇಪ ಬಂದಿದೆ. ತಾಲೂಕಿನ 11 ಆಕ್ಷೇಪಣೆಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇದೆ. ಕೆಲವು ತೀಮರ್ಾನ ಆಗಿದೆ. ಉಳಿದ ಆಕ್ಷೇಪಣೆಗಳ ತನಿಖೆ ನಡೆಸಿ ಮುಂದಿನ ಶುಕ್ರವಾರದೊಳಗೆ ಆದೇಶ ನೀಡಲಾಗುವುದು ಎಂದು ಅವರು ಹೆಳಿದರು.
ಜನರಿಗೆ ಯೋಜನೆ ಬೇಕು. ಆದರೆ ತಮ್ಮ ಜಮೀನಿನಲ್ಲಿಒಳಗೆ ಬೇಡ. ಹುದ್ದೆ ಬೇಕು. ಆದರೆ ಕೈಗಾರಿಕೆ ಬೇಡ. ವಿದ್ಯುತ್ ಬೇಕು. ಲೈನ್ ಹಾದು ಹೋಗುವುದು ಬೇಡ. ಇಂತಹ ನಿಲುವುಗಳೇ ಅಧಿಕ. ಹಾಗಾಗಿ ಯೋಜನೆಗಳ ಅನುಷ್ಠಾನಕ್ಕೆ ತೊಡಕು ಉಂಟಾಗುತ್ತದೆ. ಸಾಧಕ – ಬಾಧಕಗಳ ಕುರಿತು ವಿಮರ್ಶಿಸಿ, ಯೋಜನೆ ಅನುಷ್ಠಾನ ಮಾಡಬೇಕಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಸಬ್ ಸ್ಟೇಷನ್ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದರು.
ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ ಅರ್ಜಿದಾರರ ಜಮೀನು ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೃಷಿ ಕಾರ್ಯಕ್ಕೆ ನಷ್ಟವಾಗುವ ಕುರಿತು ಸ್ಥಳೀಯರು ಅಳಲು ತೋಡಿಕೊಂಡರು. ಪರ್ಯಾಯ ಮಾರ್ಗ ಕಂಡುಕೊಳ್ಳಲು ಒತ್ತಾಯಿಸಿದರು.