ಮಂಗಳೂರು: ಈ ನೆಲದ ಅನ್ನ ತಿಂದು, ನೀರು ಕುಡಿದು ಕೆಲ ವಿಕೃತ ಮನಸ್ಸುಗಳು ದೇಶವನ್ನು ತುಂಡರಿಸುವ ಮಾತುಗಳನ್ನು ಆಡಿದರೆ ಯಾವ ದೇಶಪ್ರೇಮಿ ತಾನೆ ಸುಮ್ಮನಿರಲು ಸಾಧ್ಯ ಎಂದು ಕನ್ನಡ ವಿಭಾಗದ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಹೇಳಿದರು.
ದೆಹಲಿಯ ಜೆಎನ್ಯು ವಿವಿಯಲ್ಲಿ ನಡೆದ ರಾಷ್ಟ್ರವಿರೋಧಿ ಹೇಳಿಕೆಯನ್ನು ವಿರೋಧಿಸಿ ಕೊಣಾಜೆಯ ಮಂಗಳೂರು ವಿವಿಯ ಪ್ರವೇಶದ್ವಾರದಿಂದ ಮಂಗಳಾ ಸಭಾಂಗಣದ ವರೆಗೆ ರಾಷ್ಟ್ರ ಧ್ವಜ ಹಿಡಿದುಕೊಂಡು ಬುಧವಾರ ನಡೆದ ತಿರಂಗಾ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸುಕ್ಷಿತಾ ರಾವ್ ಅವರು ಈ ದೇಶವನ್ನು ತುಂಡರಿಸುವ ಮಾತುಗಳನ್ನಾಡುವ ಕೆಲ ಒಡಕಿನ ಧ್ವನಿಗಳಿಗೆ ಉತ್ತರವಾಗಿ ಸಾವಿರ ಸಾವಿರ ಸಾವಿರ ಯಾಕೂಬ್ ಅಥವಾ ಅಫ್ಜಲ್ ನಿಂದ ಸಾಧ್ಯವಿಲ್ಲ ಎಂದರು. ನಮ್ಮ ಹೆಮ್ಮೆಯ ಭಾರತಾಂಬೆ ಬಂಜೆಯಲ್ಲ ಆಕೆ ನಮ್ಮಂತಹ ಸಾವಿರಾರು ದೇಶಪ್ರೇಮಿಗಳನ್ನು ಹುಟ್ಟುಹಾಕಿದ್ದಾರೆ. ನಮ್ಮ ದೇಶದಲ್ಲಿದ್ದುಕೊಂಡೇ ಪ್ರತ್ಯೇಕ ಕಾಶ್ಮೀರ ಬಗ್ಗೆ ಬೇಡಿಕೆ, ಜೊತೆಗೆ ಅಫ್ಜಲ್ಗುರುವಂತಹ ವಿರೋಧಿಗಳಿಗೆ ಬೆಂಬಲ ಸೂಚಿಸುವ ಕೆಲವು ವಿಕೃತ ಮನಸ್ಸುಗಳನ್ನು ದೂರವಿಡಬೇಕು ಎಂದು ಪುನೀತ್ ಹೇಳಿದರು.
ಪ್ರೊ. ಬಾಲಕೃಷ್ಣ ಮಾತನಾಡಿ ದೇಶದಲ್ಲಿ ನಮ್ಮಿಂದ ಆರಿಸಿಹೋದ ಮೂರ್ಖ ಶಾಸಕರು ಇರಬಹುದು ಅಥವಾ ದೇಶಕ್ಕಾಗಿ ಶ್ರಮಿಸುವ ಒಳ್ಳೆಯ ಶಾಸಕರು ಇರಬಹುದು. ದೇಶದ ವಿರುದ್ಧವಾಗಿ ಯಾರೇ ಮಾತನಾಡಿದರು ಅಂತವರನ್ನು ಬೆಂಬಲಿಸದೇ ಶಾಸಕಾಂಗ,ನ್ಯಾಯಾಂಗಗಳಿಗೆ ತಿಳಿಹೇಳುವ ಕೆಲಸ ಮಾಡಬೇಕಿದ್ದು ಇಂತಹ ಕೆಲಸವನ್ನು ನ್ಯಾಯಾಂಗ ಹಾಗೂ ಇತರ ಸಂಘಟನೆಗಳು ಈಗಾಗಲೇ ಮಾಡುತ್ತಿದೆ. ಇಂತವರಿಗೆ ಬೆಂಬಲವನ್ನು ಮಂಗಳೂರು ವಿಶ್ವವಿದ್ಯಾನಿಲಯ ನೀಡುತ್ತದೆ ಎಂದರು.
ಈ ತಿರಂಗಾ ರ್ಯಾಲಿಯಲ್ಲಿ ವಿದ್ಯಾರ್ಥಿ ನಾಯಕರುಗಳಾದ ಪ್ರಭಾಕರ್, ಸಂದೇಶ, ಶ್ಯಾಮ್ಪ್ರಸಾದ್ ಮತ್ತಿರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 100 ಅಡಿ ಉದ್ದದ ತಿರಂಗಾದ ರ್ಯಾಲಿಯೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ವಿವಿಯ ಮಂಗಳಾ ಸಭಾಂಗಣದ ಬಳಿ ಜಮಾಯಿಸಿದರು.