News Kannada
Monday, September 26 2022

ಕರಾವಳಿ

ತೊಡಿಕಾನದ ದೇವರ ಮೀನುಗಳಿಗೆ ನೀರಿನ ಕೊರತೆ - 1 min read

Photo Credit :

ತೊಡಿಕಾನದ ದೇವರ ಮೀನುಗಳಿಗೆ ನೀರಿನ ಕೊರತೆ

ಸುಳ್ಯ: ಪ್ರಕೃತಿಯ ಬಲು ಅಪರೂಪದ ಕೊಡುಗೆ ಸುಳ್ಯ ತಾಲೂಕಿನ ತೊಡಿಕಾನದ ಪುರಾಣ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಮತ್ಸ್ಯ ತೀರ್ಥ ನದಿಯಲ್ಲಿರುವ ಮಹಶೀರ್ ಮೀನುಗಳು. ಆದರೆ ಇದೀಗ ಅಪ್ಪಳಿಸಿರುವ ಕಡು ಬೇಸಿಗೆ ಈ ದೇವರ ಮೀನುಗಳಿಗೂ ಜಲಕ್ಷಾಮದ ಭೀತಿಯನ್ನು ತಂದೊಡ್ಡಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವದಿಂದಾಗಿ ಈ ಮೀನುಗಳನ್ನು ಸಂರಕ್ಷಿಸುವುದೇ ಒಂದು ಸವಾಲಾಗಿದೆ. ಬೇಸಿಗೆ ಬಂದರೆ ನೀರಿನ ಕೊರತೆಯಿಂದ ಈ ಮೀನುಗಳು ವಿಲವಿಲನೆ ಒದ್ದಾಡುವ ಪರಿಸ್ಥಿತಿ ಉಂಟಾಗುತ್ತಿದೆ.

ದೇವಸ್ಥಾನದ ಪಕ್ಕದಲ್ಲಿರುವ  ಅಣೆಕಟ್ಟಿನಲ್ಲಿ  ಶೇಖರಣೆಯಾದ  ನೀರಿನಲ್ಲಿ ಮೀನುಗಳು ಓಡಾಡುತ್ತವೆ. ಎಲ್ಲೆಡೆ ನದಿ, ಹಳ್ಳ, ಕೊಳ್ಳಗಳು ಬತ್ತುತ್ತಿರುವಂತೆಯೇ ಮತ್ಸ್ಯ ತೀರ್ಥ ಹೊಳೆಯಲ್ಲಿಯೂ ನೀರಿನ ಹರಿವು ಕಡಿಮೆಯಾಗುತ್ತಾ ಬರುವುದು ಮೀನುಗಳಿಗೆ ಕಂಠಕಪ್ರಾಯವಾಗಿ ಪರಿಣಮಿಸುತ್ತದೆ.  ಈ   ಮೀನುಗಳಿಗೆ ಬದುಕಲು ತಂಪಾದ ಶುದ್ಧ ಹರಿಯುವ ನೀರು ಬೇಕಾಗಿದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಮೀನುಗಳಿಗೆ ನೀರಿನ ಕೊರತೆ ಎದುರಾಗುತ್ತದೆ. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ನೀರಿನ ಅಭಾವ ತಲೆದೋರಿದೆ. ಇದರಿಂದ ಮೀನುಗಳನ್ನು ಬದುಕಿಸಲು ದೇವಸ್ಥಾನದ ವತಿಯಿಂದ ದೂರದ ದೇವರಗುಂಡಿ ಜಲಪಾತದಿಂದ ಪೈಪ್ ಮೂಲಕ ನೀರನ್ನು ತಂದು ಡ್ಯಾಂಗೆ ಹರಿಸಲಾಗುತ್ತದೆ. ಅಲ್ಲದೆ ಟ್ಯಾಂಕಿನ ನೀರನ್ನು ಕೂಡ ಹರಿಸಿ ಮೀನುಗಳ ಮೇಲೆ ಹಾಯಿಸಿ ಮೀನುಗಳನ್ನು ಸಂರಕ್ಷಿಸುವ ಪ್ರಯತ್ನ ನಡೆಸಲಾಗುತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದು ನೀರು ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಈ ಮೀನುಗಳಿಗೆ ಅಪಾಯ ಎದುರಾಗುವ ಆತಂಕ ಎದುರಾಗಿದೆ.

ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಿಂದ ದೇವರ ಮೀನುಗಳ ಜೀವಕ್ಕೆ ಕುತ್ತು ಬಂದ ಹಲವು ನಿದರ್ಶನಗಳಿವೆ. 1999 ಮತ್ತು 2003  ರಲ್ಲಿ ಭೀಕರ ಬರಗಾಲ ಅಪ್ಪಳಿಸಿ ನೀರಿನ ಕೊರತೆ ಉಂಟಾಗಿ ಮೀನನ ಸಂತತಿಗೆ ತೀವ್ರ ತೊಂದರೆ ಎದುರಾಗಿತ್ತು. ವಿಶಿಷ್ಟ ಪ್ರಭೇದದ ಈ ಮೀನು ಒಮ್ಮೆ ನಾಶವಾದರೆ ಮತ್ತೆ ಅವುಗಳು ವೃದ್ಧಿಯಾಗುವುದು ಬಲು ಕಷ್ಟ. ಈ ಮೀನುಗಳಿಗೆ ಬದುಕಲು ಕಲುಷಿತಗೊಳ್ಳದ ಹರಿಯುವ ನೀರು ಅತೀ ಅಗತ್ಯ. ಮತ್ಸ್ಯತೀರ್ಥದ ನೀರಿನ ಹರಿವು ಕಡಿಮೆಯಾದಾಗಲೆಲ್ಲ ದೇವರಗುಂಡಿ ಜಲಪಾತದಿಂದ ಪೈಪ್ ಹಾಕಿ ನೀರನ್ನು ಮತ್ಸ್ಯ ತೀರ್ಥಕ್ಕೆ ಹರಿಸಲಾಗುತ್ತದೆ. ಆದರೆ ಈ ಬಾರಿ ದೇವರಗುಂಡಿಯಲ್ಲಿಯೂ ನೀರು ತೀರಾ ಕಡಿಮೆಯಾಗುತ್ತುರುವುದು ಆತಂಕ ಹೆಚ್ಚಿಸಿದೆ.

ಮತ್ಸ್ಯತೀರ್ಥದ ಸಂರಕ್ಷಣೆಗೆ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದ್ದರೂ, ಬೇಸಿಗೆಯಲ್ಲಿ ಮೀನುಗಳಿಗೆ ಜಲಕ್ಷಾಮ ಎದುರಾಗುವುದನ್ನು ತಡೆಯಲು ಯಾವುದೂ ಪೂರಕವಾಗಿಲ್ಲ. ಮೀನುಗಾರಿಕಾ ಇಲಾಖೆಯು ಈ ಮತ್ಸ್ಯತೀರ್ಥವನ್ನು `ಮತ್ಸ್ಯಧಾಮ’ವೆಂದು ಘೋಷಣೆ ಮಾಡಿತ್ತು. ಪ್ರತಿ ವರ್ಷ ನೀರಿನ ಕೊರತೆಯಿಂದ ಮೀನುಗಳಿಗೆ ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ನೀರು ಸರಬರಾಜಿಗೆ ಶಾಶ್ವತ ಯೋಜನೆ ರೂಪಿಸಬೇಕೆಂಬ ಬೇಡಿಕೆ ಇದೆ.

`ದೇವರ ಮೀನುಗಳು’
ತೊಡಿಕಾನದ ಮಲ್ಲಿಕಾರ್ಜುನ ಕ್ಷೇತ್ರದ ಸಮೀಪದಲ್ಲಿಯೇ ಹರಿಯುವ ಮತ್ಸ್ಯತೀರ್ಥ ನದಿ ಮತ್ತು ಮತ್ಸ್ಯಸಂಕುಲವನ್ನು ಜನರು ಬಲು ಪೂಜನೀಯ ಭಾವದಿಂದ ಕಾಣುತ್ತಾರೆ. ಶಿವಲಿಂಗವನ್ನು ಕಣ್ವ ಮಹರ್ಷಿಗಳು ತೊಡಿಕಾನದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಶಿವನು ಮಹಾವಿಷ್ಣುವನ್ನು  ಮತ್ಸ್ಯವಾಹನವನ್ನಾಗಿಸಿ ಅಂತರ್ ಮಾರ್ಗದಲ್ಲಿ ಧಾವಿಸಿ ಬಂದನು ಎಂಬ ಪ್ರತೀತಿ ಇದೆ. ಹೀಗೆ ಮೀನಾಗಿ ಬಂದ ಮಹಾವಿಷ್ಣು ದೇವಸ್ಥಾನದ ಬಳಿಯ ನದಿಯಲ್ಲಿ ನೆಲೆಸುತ್ತಾನೆ ಎಂಬುದು ನಂಬಿಕೆ. ಆದುದರಿಂದಲೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅರ್ಚನೆಯಾದ ನೈವೇದ್ಯವನ್ನು ಮೀನುಗಳಿಗೆ ಅರ್ಪಿಸಲಾಗುತ್ತದೆ. ಭಕ್ತರು ಮೀನುಗಳಿಗೆ ಅಕ್ಕಿ ಹಾಗು ಇತರ ಆಹಾರ ಪದಾರ್ಥಗಳನ್ನು ಅರ್ಪಿಸುತ್ತಾರೆ.

See also  ಸೌದಿ ಅರೇಬಿಯಾದಲ್ಲಿ ಶಿರ್ವದ ನರ್ಸ್ ನಿಗೂಢ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು