News Kannada
Friday, September 30 2022

ಕರಾವಳಿ

ಪಯಸ್ವಿನಿ ನದಿಗೆ ಕೋಳಿ ತ್ಯಾಜ್ಯ: ಕಲುಷಿತಗೊಳ್ಳುತ್ತಿರುವ ನೀರು - 1 min read

Photo Credit :

ಪಯಸ್ವಿನಿ ನದಿಗೆ ಕೋಳಿ ತ್ಯಾಜ್ಯ: ಕಲುಷಿತಗೊಳ್ಳುತ್ತಿರುವ ನೀರು

ಸುಳ್ಯ: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸಾವಿರಾರು ಮಂದಿಗೆ ಜೀವದಾಯಿನಿಯಾದ ಪಯಸ್ವಿನಿ ನದಿಗೆ ಕೋಳಿ ತ್ಯಾಜ್ಯ ಎಸೆದು ವ್ಯಾಪಕವಾಗಿ ನೀರನ್ನು ಕಲುಷಿತಗೊಳಿಸಲಾಗುತಿದೆ. ಸುಳ್ಯ ನಗರ ಸಮೀಪದ ಕಾಂತಮಂಗಲ ಸೇತುವೆಯ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯವನ್ನು ಎಸೆದಿರುವುದು ಕಂಡು ಬಂದಿದೆ.

ಸುಮಾರು ಐವತ್ತಕ್ಕೂ ಹೆಚ್ಚು ಗೋಣಿ ಚೀಲ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ಕೋಳಿ ತ್ಯಾಜ್ಯಗಳು ನೀರಿನಲ್ಲಿ ತೇಲುತಿದೆ. ಕೋಳಿಯ ಗರಿಗಳು, ಕೋಳಿ ಕಾಲು, ಮಾಂಸದ ತುಂಡುಗಳು ಮತ್ತಿತರ ತ್ಯಾಜ್ಯಗಳನ್ನು  ಚೀಲಗಗಳಲ್ಲಿ ತುಂಬಿ ಕಾಂತಮಂಗಲ ಸೇತುವೆಯ ಮೇಲಿಂದ ನದಿಗೆ  ಎಸೆಯಲಾಗಿದೆ. ಕೋಳಿ ಅಂಗಡಿಗಳಲ್ಲಿನ ತ್ಯಾಜ್ಯಗಳು ಈ ರೀತಿಯಲ್ಲಿ ಪಯಸ್ವಿನಿ ನದಿಗೆ ಎಸೆಯಲಾಗುತಿದೆ. ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದ್ದು ಕೆಲವು ಹೊಂಡಗಳಲ್ಲಿ ಮತ್ತು ಗಯಗಳಲ್ಲಿ ಮಾತ್ರ ನೀರು ಶೇಖರಣೆಯಾಗಿದೆ. ಕಾಂತಮಂಗಲ ಸೇತುವೆಯ ಅಡಿಯಲ್ಲಿ  ಕೋಳಿ ತ್ಯಾಜ್ಯದಿಂದ ಸಂಪೂರ್ಣ ನೀರು ಮಲಿನಗೊಂಡು ಹೆಪ್ಪು ಕಟ್ಟಿದ ರೀತಿಯಲ್ಲಿದೆ. ಸುಳ್ಯದಿಂದ ಕಾಸರಗೋಡಿನವರೆಗೆ ಎರಡೂ ರಾಜ್ಯಗಳ ಸಾವಿರಾರು ಮಂದಿ ಕುಡಿಯಲು ಮತ್ತು ಇತರ ದೈನಂದಿನ ಅಗತ್ಯಕ್ಕಾಗಿ ಪಯಸ್ವಿನಿ ನೀರನ್ನೇ ಬಳಸುಸುತ್ತಾರೆ. ಹಲವು ದಿನಗಳಿಂದ ಈ ರೀತಿ ತ್ಯಾಜ್ಯಗಳನ್ನು ನದಿಯ ನೀರಿಗೆ ಎಸೆಯಲಾಗಿದ್ದು ನದಿಯ ಹರಿವು ಕಡಿಮೆಯಾದ ಕಾರಣ ಎಸದೆ ತ್ಯಾಜ್ಯಗಳು ನದಿಯಲ್ಲಿಯೇ ಅಲ್ಲಲ್ಲಿ ತೇಲುತ್ತಿದ್ದು ಕರಗಿ ದುರ್ವಾವಾಸನೆ ಬೀರುತ್ತಿದೆ.

ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ರಾತ್ರಿಯ ಸಮಯದಲ್ಲಿ ವಾಹನಗಳಲ್ಲಿ ತಂದು ಕಾಂತಮಂಗಲ ಸೇತುವೆಯ ಮೇಲಿನಿಂದ ನದಿಗೆ ಎಸೆಯಲಾಗುತಿದೆ. ನೀರಿನಲ್ಲಿ ಮಾತ್ರವಲ್ಲದೆ ನದಿಯ ಬದಿಯಲ್ಲಿಯೂ ಅಲ್ಲಲ್ಲಿ ಕೋಳಿ ತ್ಯಾಜ್ಯ ತುಂಬಿ ತುಳುಕುತಿದೆ. ಅಲ್ಲಲ್ಲಿ ತ್ಯಾಜ್ಯಗಳು ಕರಗಿ ದುರ್ವಾಸನೆಯಿಂದ ಪರಿಸರದ ಸ್ವಾಸ್ಥ್ಯ ಕೆಟ್ಟು ಹೋಗಿದೆ. ಪರಿಸರವಿಡೀ ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮೀಪದಲ್ಲಿರುವ ಮನೆಗಳಲ್ಲಿಯೂ ದುರ್ವಾಸನೆಯಿಂದ ಸಮಸ್ಯೆ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ನಗರದಲ್ಲಿ ಮತ್ತು ಇತರ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ಅಂಗಡಿಗಳಿಂದ ತ್ಯಾಜ್ಯವನ್ನು ತಂದು ನದಿಗೆ ಎಸೆಯುವ ಶಂಕೆ ವ್ಯಕ್ತವಾಗಿದೆ. ಪಯಸ್ವಿನಿ ನದಿಯುದ್ದಕ್ಕೂ ಹತ್ತಾರು ಕಡೆಗಳಲ್ಲಿ ಕೋಳಿ ತ್ಯಾಜ್ಯಗಳು ತೇಲುತ್ತಿದ್ದು ನೀರು ಮಲಿನವಾಗುತಿದೆ. ಸುಳ್ಯ ತಾಲೂಕಿನ ವಿವಿಧ ರಸ್ತೆ ಬದಿಗಳಲ್ಲಿಯೂ ಕೋಳಿ ತ್ಯಾಜ್ಯವನ್ನು ವ್ಯಾಪಕವಾಗಿ ಎಸೆಯಲಾಗುತಿದೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಬದಿ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲಿ ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತಂದು ಎಸೆಯಲಾಗುತಿದ್ದು ದುರ್ನಾತ ಬೀರುತ್ತಿದೆ.ಆನೆಗುಂಡಿ, ಬೇಂಗಮಲೆ ಮತ್ತಿತರ ಕಡೆಗಳ ಸುಂದರ ಪರಿಸರ ಕೋಳಿ ತ್ಯಾಜ್ಯದ ದುರ್ವಾಸನೆಯಿಂದ ಹಾಳಾಗುತ್ತಿದೆ.

ಪಯಸ್ವಿನಿ ನದಿಯಲ್ಲಿ ಕೋಳಿ ತ್ಯಾಜ್ಯವನ್ನು ಎಸೆದಿರುವ ವಿಷಯ ತಿಳಿದು ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯ ಕಿರಣ್ ಕುರುಂಜಿ ಪಯಸ್ವಿನಿ ನದಿಗೆ ದಂಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಯ ಬದಿ ಸಂಪೂರ್ಣ ಕೋಳಿ ತ್ಯಾಜ್ಯಗಳೇ ತುಂಬಿರುವ ಮತ್ತು ನೀರು ಮಲಿನಗೊಂಡಿರುವುದು ಕಂಡು ಬಂತು. ಅಲ್ಲದೆ ವಿಷಯ ತಿಳಿದು ಸ್ಥಳೀಯರು ಜಮಾಯಿಸಿ  ಕೋಳಿ ತ್ಯಾಜ್ಯವನ್ನು ನದಿಗೆ ಎಸೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ನಗರ ಪಂಚಾಯಿತಿ ವತಿಯಿಂದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಯಿತು. ನೀರಿನಲ್ಲಿ ತೇಲುತ್ತಿದ್ದ ತ್ಯಾಜ್ಯವನ್ನು ತೆಗೆದು ಅದನ್ನು ವಿಲೇವಾರಿ ಮಾಡಲಾಯಿತು.

See also  ಪ್ರಧಾನಿ ಮೋದಿ ಭವಿಷ್ಯದ ಶಕ್ತಿ: ಶಾಸಕ ಸುನಿಲ್ ಕುಮಾರ್

ಬಳಿಕ ಜನಪ್ರತಿನಿಧಿಗಳು ಮತ್ತು ನ.ಪಂ. ಅಧಿಕಾರಿಗಳು ಸುಳ್ಯ ನಗರದ ಕೋಳಿ ಅಂಗಡಿಗಳಲ್ಲಿ ಪರಿಶಿಲನೆ ನಡೆಸಿದರು. ನಗರದ ಎಲ್ಲಾ ಅಂಗಡಿಗಳಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಮಾಡುವ ವಿಧಾನವನ್ನು ಪರಿಶೀಲಿಸಿದರು. ಕೊಳಿ ತ್ಯಾಜ್ಯ ನದಿಗೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಎಸೆಯದಂತೆ ಎಚ್ಚರಿಕೆ ನೀಡಲಾಯಿತು.

ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಶ್ರೀದೇವಿ ಭೇಟಿ ನೀಡಿದರು. ಪಯಸ್ವಿನಿ ನದಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ನಗರ ಪಂಚಾಯಿತಿ ವತಿಯಿಂದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಪತ್ರಕರ್ತರಿಗೆ ತಿಳಿಸಿದ್ದಾರೆ. ಕೋಳಿ ತ್ಯಾಜ್ಯ ಎಸೆದು ನದಿ ನೀರು ಕಲುಷಿತಗೊಳಿಸುವುದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಅಲ್ಲದೆ ಕೋಳಿ ತ್ಯಾಜ್ಯ ಎಸೆದು, ವಾಹನ ತೊಳೆದು ನದಿಯ ನೀರು ಕಲುಷಿತಗೊಳಿಸುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು