News Kannada
Tuesday, September 27 2022

ಕರಾವಳಿ

ತುಂಬೆ ಸ್ಥಾವರದಲ್ಲಿ ನೀರು ಶುದ್ದೀಕರಣ: ಭಾರೀ ಪ್ರಮಾಣದ ನೀರು ಪೋಲು - 1 min read

Photo Credit :

ತುಂಬೆ ಸ್ಥಾವರದಲ್ಲಿ ನೀರು ಶುದ್ದೀಕರಣ: ಭಾರೀ ಪ್ರಮಾಣದ ನೀರು ಪೋಲು

ಬಂಟ್ವಾಳ: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ನೀರಿನ ಮೂಲಗಳು ಬತ್ತತೊಡಗಿದ್ದು ಈಗಾಗಲೇ ಗ್ರಾಮಾಂತರ ಪ್ರದೇಶಗಳ ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರತೊಡಗಿದೆ. ಇನ್ನೇನು ಒಂದೆರಡು ವಾರದಲ್ಲಿ ಮಳೆ ಬಾರದಿದ್ದಲ್ಲಿ ಎಪ್ರಿಲ್ ತಿಂಗಳಾಂತ್ಯದಲ್ಲಿ ಹಾಗೂ ಮೇ ತಿಂಗಳಲ್ಲಿ ಬಹುತೇಕ ಕಡೆಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲೂ ತುಂಬೆ ನೀರಿನ ಸ್ಥಾವರದಲ್ಲಿ ನೀರು ಶುದ್ದೀಕರಣದ ವೇಳೆ ಭಾರೀ ಪ್ರಮಾಣದ ನೀರು ಹೊರ ಸೂಸಿ ನದಿ ಸೇರುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಬಳಿ ನೇತ್ರಾವತಿ ನದಿಗೆ ಕಟ್ಟಿರುವ ಅಣೆಕಟ್ಟಿನ ನೀರನ್ನು ಅಲ್ಲೇ ಇರುವ ಪಂಪ್ ಹೌಸಿನಿಂದ ತುಂಬೆ ಗ್ರಾಮ ಪಂಚಾಯತ್ ಹತ್ತಿರದ ನೀರಿನ ಸ್ಥಾವರಕ್ಕೆ ಪಂಪ್ ಮಾಡಲಾಗುತ್ತದೆ. ಬಳಿಕ ಅಲ್ಲಿ ನೀರನ್ನು ಶುದ್ದೀಕರಿಸಿ ಮಂಗಳೂರು ಮಹಾ ನಗರ ಪಾಲಿಕೆ, ಉಳ್ಳಾಲ, ಮುಲ್ಕಿ ಪುರಸಭೆ ವ್ಯಾಪ್ತಿಗೆ ಪೂರೈಸಲಾಗುತ್ತಿದೆ. ಸ್ಥಾವರದಲ್ಲಿ ನೀರು ಶುದ್ದೀಕರಿಸುವ ವೇಳೆ ಹೊರಸೂಸುವ ನೀರನ್ನು ಬಳಕೆ ಮಾಡುವ ವ್ಯವಸ್ಥೆ ಇಲ್ಲಿ ಇಲ್ಲದಿರುವುದರಿಂದ ಭಾರೀ ಪ್ರಮಾಣದ ನೀರು ತೋಡುಗಳ ಮೂಲಕ ಮತ್ತೆ ನದಿ ಸೇರುತ್ತಿದೆ.

ಶುದ್ದೀಕರಣದ ವೇಳೆ ಸ್ಥಾವರದ ಒಂದೆಡೆ ಶುದ್ದೀಕರಣವಾಗದ ಮಡ್ಡಿ ನೀರು ಹೊರ ಹರಿದರೆ, ಇನ್ನೊಂದೆಡೆ ಮನಪಾದ ಎತ್ತರ ಪ್ರದೇಶಗಳಿಗೆ ನೀರು ಪೂರೈಸಲು ಗಾಳಿಯ ಒತ್ತಡ ಹೆಚ್ಚಿಸಿದಾಗ ಶುದ್ದ ನೀರು ಹೊರ ಹರಿಯುತ್ತದೆ. ಹೀಗೆ ಹರಿಯುವ ನೀರು ಎರಡು ತೋಡುಗಳ ಮೂಲಕ ನದಿ ಸೇರುತ್ತಿದೆ. ಈ ರೀತಿ ಹೊರ ಹರಿಯುವ ನೀರನ್ನು ಒಂದೆಡೆ ಶೇಖರಿಸಿ ಮತ್ತೆ ಶುದ್ದೀಕರಿಸಿ ಕುಡಿಯಲು ಅಥವಾ ಇತರ ಬಳಕೆಗೆ ಉಪಯೋಗಿಸುವ ಕ್ರಮ ರಾಜ್ಯದ ಬಹುತೇಕ ಮಹಾ ನಗರ ಪಾಲಿಕೆಗಳಿಗೆ ಸೇರಿದ ನೀರು ಶುದ್ದೀಕರಣ ಸ್ಥಾವರಗಳಲ್ಲಿ ಇದೆ. ಆದರೆ, ಮಂಗಳೂರು ಮಹಾ ನಗರ ಪಾಲಿಕೆಗೆ ಸೇರಿದ ತುಂಬೆ ನೀರಿನ ಸ್ಥಾವರದಲ್ಲಿ ಈ ವ್ಯವಸ್ಥೆ ಇಲ್ಲದಿರುವುದರಿಂದ ದಿನನಿತ್ಯ ಇಲ್ಲಿ ನೀರು ನದಿ ಪಾಲಾಗುತ್ತಿದೆ ಎಂದು ಸ್ಥಳೀಯ ಜನ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಹಾಹಾಕಾರ ಕೇಳಿ ಬರುತ್ತಿದೆ. ಬೇಸಿಗೆಯ ಬರೇ 3, 4 ತಿಂಗಳ ನೀರಿಗಾಗಿ ಅಧಿಕಾರಿಗಳು ಅಲ್ಲಲ್ಲಿ ನೂರಾರು ಬೋರ್ವೆಲ್ ಗಳನ್ನು ಕೊರೆಸಿ ಹಣ ವ್ಯರ್ಥ ಮಾಡುವುದು ಸಾಮಾನ್ಯವಾಗಿದೆ. ಅದರ ಬದಲು ಸ್ಥಾವರದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಪುನರ್ ಬಳಕೆಗೆ ಕೈಗೊಂಡಲ್ಲಿ ಕೆಲವು ಭಾಗದ ನೀರಿನ ಸಮಸ್ಯೆಯನ್ನು ಶಾಸ್ವತವಾಗಿ ಪರಿಹರಿಸಬಹುದಾಗಿದೆ. ಪಂಪ್ ಹೌಸ್ ನಿಂದ ನೀರನ್ನು ಮೇಲೆತ್ತಿ ಸ್ಥಾವರದಲ್ಲಿ ಶುದ್ದೀಕರಿಸಲು ವಿದ್ಯುತ್, ಮಾನವ ಶ್ರಮ ಎಂದು ಲಕ್ಷಾಂತರ ರೂ. ಖರ್ಚಿದೆ. ಹೀಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ ನೀರನ್ನು ಮತ್ತೆ ನದಿ ಸೇರದಂತೆ ತಡೆದು ಅದರ ಪುನರ್ ಬಳಕೆಗೆ ಬೇಕಾದ ಯೋಜನೆಗಳನ್ನು ರೂಪಿಸಲು ಅಧಿಕಾರಿಗಳು ಮುಂದಾಗಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

See also  ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾದ ಆಳ್ವಾಸ್ ಗಣರಾಜ್ಯೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು