News Kannada
Saturday, September 24 2022

ಕರಾವಳಿ

ಮುಂದಿನ ವರ್ಷದಿಂದ ನಾರಾಯಣ ಗುರುಗಳ ಜನ್ಮ ದಿನಾಚರಣೆ: ಸಿಎಂ - 1 min read

Photo Credit :

ಮುಂದಿನ ವರ್ಷದಿಂದ ನಾರಾಯಣ ಗುರುಗಳ ಜನ್ಮ ದಿನಾಚರಣೆ: ಸಿಎಂ

ಬಂಟ್ವಾಳ : ಮುಂದಿನ ವರ್ಷದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗುರುವಾರ ಬಂಟ್ವಾಳ ತಾಲೂಕಿನ ಸಜಿಪ ಮೂಡಾ ಗ್ರಾಮದ ಸುಭಾಷ್ ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಲೋಕಾರ್ಪಣೆಗೈದು ಬಳಿಕ ನಡೆದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾನು ನಾರಾಯಣ ಗುರು ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದೇನೆ. ನಾರಾಯಣ ಗುರು ಜನರಲ್ಲಿ ಧಾರ್ಮಿಕ ಜಾಗೃತಿಯನ್ನುಂಟುಮಾಡುವ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದವರಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಪ್ರಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಜ್ಞಾನ ಮಂದಿರದ ನಿರ್ಮಾಣ ಸಾರ್ಥಕವೆನಿಸುವುದು ಎಂದು ಅವರು ಹೇಳಿದರು.
 
ಜಾತಿವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯ ಅಗತ್ಯವಿದೆ. ಇದನ್ನೇ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಜಾತಿ ಜಾತಿಯ ನಡುವೆ ಆರ್ಥಿಕ, ಸಾಮಾಜಿಕ ಸಮಾನತೆ ಬಂದಾಗ ಮಾತ್ರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ ಎಂದ ಅವರು, ಎಲ್ಲ ಜಾತಿಯ ಬಡವರಿಗೆ ವಿಶೇಷವಾದ ಸವಲತ್ತು ಮತ್ತು ಸೌಲಭ್ಯಗಳನ್ನು ಒದಗಿಸಿದಾಗ ಅವರು ಕೂಡಾ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಇದಕ್ಕೆ ಕಾಂಗ್ರೆಸ್ ಸರಕಾರವು ಬದ್ಧವಾಗಿದೆ. ಮುಂದಿನ ತಿಂಗಳು ಈಗಾಗಲೇ ಸರಕಾರ ನಡೆಸಿರುವ ಜಾತಿ ಸಮೀಕ್ಷೆಯ ವರದಿಯು ಬಹಿರಂಗಗೊಳ್ಳಲಿದೆ ಎಂದು ಹೇಳಿದರು.

ಇಂದು ಕೇರಳದಲ್ಲಿ ಸುಶಿಕ್ಷಿತರ ಸಂಖ್ಯೆ ಜಾಸ್ತಿಯಾಗಿದ್ದರೆ ಅದಕ್ಕೆ ನಾರಾಯಣ ಗುರುಗಳ ಅಂದಿನ ಹೋರಾಟವೇ ಕಾರಣ. ಬುದ್ದ, ಬಸವಣ್ಣ, ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್, ಗಾಂಧೀಜಿ ಮೊದಲಾದವರು ನಮ್ಮ ಅಧರ್ಮೀಯ ಆಚರಣೆಗಳ ವಿರುದ್ಧ ಹೋರಾಟ ಮಾಡದೇ ಇರುತ್ತಿದ್ದರೆ ಸಮಾಜದಲ್ಲಿ ಇನ್ನೂ ಬದಲಾವಣೆ ಸಾಧ್ಯವಾಗುತ್ತಿರಲಿಲ್ಲ. ಅಂದು ಕೇರಳದಲ್ಲಿ ಶೋಷಿತ ವರ್ಗಕ್ಕೆ ದೇವಳದಲ್ಲಿ ಪ್ರವೇಶವಿರಲಿಲ್ಲ. ಈ ಅನುಭವವನ್ನು ಸ್ವತಃ ನಾರಾಯಣ ಗುರುಗಳೇ ಅನುಭವಿಸಿದ್ದಾರೆ ಎಂದ ಅವರು, ಅದಕ್ಕೆ ನೀವೇ ಮಂದಿರ ಕಟ್ಟಿ ನೀವೇ ಪೂಜೆ ಮಾಡಿ. ಪುರೋಹಿತರ ಅವಮಾನಕ್ಕೆ ಒಳಗಾಗಬೇಡಿ ಪ್ರವೇಶವಿಲ್ಲದ ಮಂದಿರಕ್ಕೆ ಹೋಗಬೇಡಿ ಎಂದು ಅವರು ಸಾರಿದ್ದರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವೇ ಮಂದಿರ ಕಟ್ಟಬೇಕು, ನಾವೇ ಪೂಜಾರಿಗಳಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ವಹಿಸಿದ್ದರು. ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಚಿವರುಗಳಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಶಾಸಕರುಗಳಾದ ಶಕುಂತಳ ಶೆಟ್ಟಿ, ಮೊಯಿದಿನ್ ಭಾವ, ಪ್ರಮೋದ್ ಮಧ್ವರಾಜ್, ಐವನ್ ಡಿಸೋಜ, ಮಂಗಳೂರು ವಿವಿ ಉಪ ಕುಲಪತಿ ಭೈರಪ್ಪ, ಸಜಿಪಮೂಡ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಳದ ಅಧ್ಯಕ್ಷ ಜಯ ಸಿ. ಸುವರ್ಣ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಸೈದಪ್ಪ ಗುತ್ತೇದಾರ್, ಬಿಲ್ಲವ ಏಕೀಕರಣ ಸಮಿತಿಯ ಅಧ್ಯಕ್ಷ ರವಿ ಪೂಜಾರಿ, ಯುವ ವಾಹಿನಿ ಅಧ್ಯಕ್ಷ ಸಂತೋಷ್ ಕುಮಾರ್, ಬಿಲ್ಲವ ಸಮಾಜದ ಸಂಘಟಕ ಡಿ.ಡಿ.ಕಟ್ಟೆಮಾರ್, ಚಲನ ಚಿತ್ರ ನಿರ್ದೇಶಕ ರಾಜಶೇಕರ್ ಕೋಟ್ಯಾನ್, ಮುಂಬೈ ಬಿಲ್ಲವ ಅಸೋಸಿಯೇಶನ್ನ ಯುವ ವಿಭಾಗದ ಕಾರ್ಯ ಅಧ್ಯಕ್ಷ ನಿಲೇಶ್ ಪೂಜಾರಿ, ಯುವ ವೇದಿಕೆಯ ಅಧ್ಯಕ್ಷ ಲೋಹಿತ್ ಕುಮಾರ್, ಬಿರ್ವ ಸೆಂಟರ್ ಮಾಲಕ ಚಂದ್ರಹಾಸ ಪೂಜಾರಿ, ಬಿಲ್ಲವಾಸ್ ದುಬೈ ಅಧ್ಯಕ್ಷ ಸತೀಶ್ ಪೂಜಾರಿ, ಯಾದವ ಕೋಟ್ಯಾನ್ ಪೆರ್ಮುದೆ, ಜಿಪಂ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಮೂಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ದಿವ್ಯಪ್ರಭ ಸುಳ್ಯ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಐಜಿ ಅಮೃತ್ ಪಾಲ್, ಜಿಲ್ಲಾ ಎಸ್ಪಿ ಡಾ.ಶರಣಪ್ಪ, ಪೊಲೀಸ್ ಆಯುಕ್ತ ಚಂದ್ರಶೇಖರ್ ಮೊದಲಾದವರು ವೇದಿಕೆಯಲ್ಲಿದ್ದರು.
 
ಇದಕ್ಕೂ ಮೊದಲು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವರ್ಯರ ಪಂಚಲೋಹದ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿದ್ದು, ಬ್ರಹ್ಮಕಲಶಾಭಿಷೇಕವು ಜರಗಿತು. ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಸ್ವಾಗತಿಸಿದರು. ಬಿಲ್ಲವ ಮಹಾ ಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ್ ಪ್ರಸ್ತಾವಿಸಿದರು. ಸಮಿತಿಯ ಉಪಾಧ್ಯಕ್ಷ ಯಶವಂತ ದೇರಾಜೆ ವಂದಿಸಿದರು. ಶಿಕ್ಷಕ ರಾಮಚಂದ್ರ ರಾವ್, ಪತ್ರಕರ್ತ ಗೋಪಾಲ್ ಅಂಚನ್ ನಿರೂಪಿಸಿದರು. ಇದೇ ವೇಳೆ ಸಂಜೀವ ಪೂಜಾರಿಯನ್ನು ಮುಖ್ಯಮಂತ್ರಿಯವರು ಸನ್ಮಾನಿಸಿದರು.

See also  ಸುಳ್ಯದಲ್ಲಿ ನಕ್ಸಲರ ಶೋಧದ ವೇಳೆ ಎಎಸ್ ಎಫ್ ಸಿಬ್ಬಂದಿಗೆ ಹೃದಯಾಘಾತ: ಸಾವು

ಬೆಳಿಗ್ಗೆ 8.33ರ ವೃಷಭ ಲಗ್ನದಲ್ಲಿ  ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಅಪರಾಹ್ನ ಅನ್ನಸಂತರ್ಪಣೆ, ಭಜನೆ, ಸಂಜೆ ನೃತ್ಯ ಸಿಂಚನ, ಪೌರಾಣಿಕ ನಾಟಕ ನಡೆಯಿತು.

ಕ್ರಾಂತಿಕಾರಿ ಪೂಜಾರಿ: ಸಿಎಂ
ಕುದ್ರೋಳಿ ದೇವಸ್ಥಾನದಲ್ಲಿ ದಲಿತ ಮಹಿಳೆಯರನ್ನು ಅರ್ಚಕರನ್ನಾಗಿಸುವ ಮೂಲಕ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು.
ನಾಡುಕಂಡ ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಪೇರಿಯಾರ್, ಅಂಬೇಡ್ಕರ್ ಮೊದಲಾದವರಂತೆ ನಾರಾಯಣಗುರು ಕೂಡಾ ಅಧರ್ಮಿಯ ಆಚರಣೆಯ ವಿರುದ್ಧ ಹೋರಾಟವನ್ನು ಮಾಡಿದ್ದರು. ಜನಾರ್ದನ ಪೂಜಾರಿಯ ಈ ಕ್ರಾಂತಿಕಾರಿ ಕೆಲಸಕ್ಕೆ ನಾರಾಯಣ ಗುರು ನಾಂದಿ ಹಾಡಿದ್ದರು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರು ಬ್ಯಾಂಕ್ ಮೆಟ್ಟಿಲು ಹತ್ತಲೂ ಸಾಧ್ಯವಾಗದ ಕಾಲದಲ್ಲಿ ಜನಾರ್ದನ ಪೂಜಾರಿ ಕೇಂದ್ರ ವಿತ್ತ ಸಚಿವರಾಗಿ ಮಾಡಿದ ಮಹಾ ಕಾರ್ಯದಿಂದಾಗಿ ಇಂದು ಬಡವರು ಬ್ಯಾಂಕ್ ಮೆಟ್ಟಿಲು ಹತ್ತುವಂತಾಗಿದೆ ಎಂದು ವೇದಿಯಲ್ಲಿ ಅವರ ಮುಖವನ್ನು ನೋಡುತ್ತಲೇ ಶ್ಲಾಘಿಸಿದರು. ಈ ವೇಳೆ ಸಭಿಕರು ಕರತಾಡನ ಮೂಲಕ ಹರ್ಷ ವ್ಯಕ್ತಪಡಿಸಿದರು.
 
24 ಶೇಕಡ ಗುತ್ತಿಗೆ
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣದಂತೆ 50 ಲಕ್ಷ ರೂ. ವರೆಗೆ ನೇರವಾಗಿ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳಲಾಗಿದೆ. ಇಂತಹವೊಂದು ನಿರ್ಧಾರವನ್ನು ಸರಕಾರ ಜಾರಿಗೊಳಿಸಲಿರುವುದನ್ನು ಮನುವಾದಿಗಳು ತಮ್ಮ ಕನಸಿನಲ್ಲಿಯೂ ನಿರೀಕ್ಷಿಸಲಿಕ್ಕಿರಲಿಕಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಪಂಗಡಕ್ಕೆ 19,450 ಕೋಟಿ ರೂ.ವನ್ನು ಸರಕಾರ ಮೀಸಲಿಟ್ಟಿದ್ದು, ಇದು ದೇಶದಲ್ಲೇ ಹೊಸ ಇತಿಹಾಸವಾಗಿದೆ ಎಂದರು.

ಸಜೀಪಮೂಡದಲ್ಲಿ ಕಾರ್ಯಕ್ರಮ ಮುಗಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಪಸ್ಸು ಮಂಗಳೂರಿಗೆ ತೆರಳುವ ದಾರಿಮಧ್ಯೆ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಮಾಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮುಖ್ಯಮಂತ್ರಿಯ ಕಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿ ಸಂತಸ ಪಟ್ಟರು. ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಪಂಚಾಯಿತಿ ಉಪಾದ್ಯಕ್ಷ ಹಾಸೀರ್ ಮತ್ತಿತರ ಪ್ರಮುಖರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು