News Kannada
Tuesday, October 04 2022

ಕರಾವಳಿ

ಆನೆ ದಾಳಿ ತಡೆಯಲು ಅರಣ್ಯದಂಚಿನಲ್ಲಿ ಆನೆ ಕಂದಕ ನಿರ್ಮಾಣ - 1 min read

Photo Credit :

 ಆನೆ ದಾಳಿ ತಡೆಯಲು ಅರಣ್ಯದಂಚಿನಲ್ಲಿ ಆನೆ ಕಂದಕ ನಿರ್ಮಾಣ

ಸುಳ್ಯ: ಕಾಡಾನೆಗಳ ಹಿಂಡು ಊರಿಗೆ ದಾಳಿಯಿಟ್ಟು ಕೃಷಿ ನಾಶ ಮಾಡುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ ಅರಣ್ಯದ ಅಂಚಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗುತಿದೆ. ಅತೀ ಹೆಚ್ಚು ಆನೆ ದಾಳಿಗೊಳಗಾಗಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಮತ್ತು ಆಲೆಟ್ಟಿ ಪಶ್ಚಿಮ ಅರಣ್ಯ ಭಾಗದಲ್ಲಿ ಆನೆ ಕಂದಕಗಳ ನಿರ್ಮಾಣ ಭರದಿಂದ ಸಾಗಿದೆ.

ಸುಮಾರು 60 ಲಕ್ಷ ರೂ ವೆಚ್ಚದಲ್ಲಿ 18.695 ಕಿ.ಮಿ. ಆನೆ ಕಂದಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಇದರ ನಿರ್ಮಾಣ ಅಂತಿಮ ಹಂತದಲ್ಲಿದೆ. ಕಳೆದ ಎರಡು ವರ್ಷಗಳಿಂದ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಮತ್ತಿತರ ಗ್ರಾಮಗಳಲ್ಲಿ ಆನೆ ದಾಳಿಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿತ್ತು. ಅಲ್ಲದೆ ನಾಡಿನಲ್ಲಿ ಗಜ ಪಡೆಗಳ ಉಪಟಳದಿಂದ ಜನರು ರೋಸಿ ಹೋಗಿದ್ದರು. ಆನೆಗಳ ಹಿಂಡು ತಿಂಗಳು ಗಟ್ಟಲೆ ಗ್ರಾಮದಲ್ಲಿಯೇ ಬೀಡು ಬಿಟ್ಟು ಕೃಷಿ ನಾಶ ಉಂಟು ಮಾಡಿ ಭಯದ ವಾತವರಣವನ್ನು ಸೃಷ್ಠಿಸಿತ್ತು. ಆನೆ ದಾಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಹಲವು ಸಮಯದಿಂದ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಆನೆ ಕಂದಕ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಳೆದ ಫೆಬ್ರವರಿಯಲ್ಲಿ ಆನೆ ಕಂದಕ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅರಣ್ಯದ ಮತ್ತು ಗ್ರಾಮದ ಗಡಿಯಲ್ಲಿ ಕಂದಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಮೇಲ್ಭಾಗದಲ್ಲಿ ಮೂರು ಮೀಟರ್ ಅಗಲ, ತಳ ಭಾಗದಲ್ಲಿ 1.5 ಅಗಲ ಮತ್ತು ಎರಡು ಮೀಟರ್ ಆಳಕ್ಕೆ ಕಂದಕವನ್ನು ಕೊರೆಯಲಾಗಿದೆ. ಕಾಡಿನಿಂದ ನಾಡಿಗೆ ಇಳಿಯಲು ಪ್ರಯತ್ನಿಸಿದರೆ ಕಂದಕವು ಆನೆಗಳಿಗೆ ತಡೆಯನ್ನೊಡ್ಡುತ್ತದೆ. ಕಂದಕಗಳನ್ನು ನೋಡಿದರೆ ಆನೆಗಳು ಹಿಂದಕ್ಕೆ ಹೋಗಬಹುದು ಎಂಬುದು ಅರಣ್ಯ ಇಲಾಖೆಯ ಲೆಕ್ಕಾಚಾರ. ಇದರಿಂದ ಆನೆ ಹಾವಳಿನ್ನು ನಿಯಂತ್ರಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಅರಣ್ಯ ಮತ್ತು ಗ್ರಾಮದ ಮಧ್ಯೆ ಶಾಶ್ವತ ಗಡಿ ಗುರುತಾಗಿಯೂ ಕಂದಕಗಳು ಕಾರ್ಯಾಚರಿಸುತ್ತದೆ.

ಮಂಡೆಕೋಲು ಗ್ರಾಮದ ಮಾವಂಜಿಯಿಂದ ಮೈಲಾಟಿಪಾರೆ, ಮೈಲಾಟಿಪಾರೆಯಿಂದ ಅಡ್ಪಂಗಾಯ, ಕನ್ಯಾನ-ವಡಂಬಳೆ, ಎರಕ್ಕಲಪಾಡಿ, ಕಲ್ಲಡ್ಕ, ಪೆರಾಜೆ, ಅಕ್ಕಪ್ಪಾಡಿ, ಕಣೆಮರಡ್ಕ, ಬೇಂಗತ್ತಮಲೆ, ಕುಂಟಪಾರೆ, ಬೊಳುಗಲ್ಲು, ಪಾತಿಕಲ್ಲು, ಮೋದಲಾದ ಕಡೆಗಳಲ್ಲಿ ಈ ಬಾರಿ ಕಂದಕಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಮಂಡೆಕೋಲಿನಲ್ಲಿ ಎಂಟು ಕಿ.ಮಿ.ಕಂದಕ ನಿರ್ಮಾಣ ಮಾಡಲಾಗಿತ್ತು. ಮುಂದಿನ ವರ್ಷ 20 ಕಿ.ಮಿ. ಕಂದಕ ನಿರ್ಮಿಸುವ ಯೋಜನೆ ರೂಪಿಸಲಾಗುವುದು. ಇದೀಗ ಆನೆ ಕಂದಕ ನಿರ್ಮಾಣ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. ಈ ಪ್ರದೇಶಗಳಲ್ಲಿ  ಆನೆ ದಾಳಿಯನ್ನು ತಡೆಯಲು 60 ಕಿ.ಮಿ.ಆನೆ ಕಂದಕವನ್ನು ನಿರ್ಮಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಲಯ ವ್ಯಾಪ್ತಿಯಲ್ಲಿಯೂ ಹಲವು ಗ್ರಾಮಗಳಲ್ಲಿ ಆನೆ ದಾಳಿ ಅಧಿಕವಾಗಿದೆ. ಆನೆ ದಾಳಿ ತಡೆಯಲು ಸುಬ್ರಹ್ಮಣ್ಯ ವಲಯ ವ್ಯಾಪ್ತಿಯಲ್ಲಿ ಒಟ್ಟು 42 ಲಕ್ಷ ರೂ ವೆಚ್ಚದಲ್ಲಿ 13.25 ಕಿ.ಮಿ.ಆನೆ ಕಂದಕವನ್ನೂ ನಿರ್ಮಿಸಲಾಗಿದೆ.

See also  ಕಾಸರಗೋಡು: ಗಾಂಜಾ ಸಹಿತ ಓರ್ವನ ಬಂಧನ

ನಿರಂತರ ಆನೆ ದಾಳಿ:
ಸುಳ್ಯ ತಾಲೂಕಿನ ಹಲವು ಗ್ರಾಮಗಳು ಕಾಡಾನೆಗಳ ದಾಳಿಯಿಂದ ನಲುಗಿ ಹೋಗಿವೆ. ಹಿಂಡು ಹಿಂಡಾಗಿ ನಾಡಿಗೆ ನುಗ್ಗುವ ಗಜ ಪಡೆಗಳು ಕೃಷಿಯನ್ನು ನಾಶ ಪಡಿಸುತ್ತದೆ. ಹಲವು ದಶಕಗಳಿಂದ ಕಾಡಾನೆಗಳ ದಾಳಿ ಇಲ್ಲಿ ಸಾಮಾನ್ಯವಾದರೂಂ, ಕಳೆದ ಎರಡು ವರ್ಷಗಳಿಂದ ಹಲವು ಗ್ರಾಮಗಳಲ್ಲಿ ಕಾಡಾನೆ ದಾಳಿ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆನೆ ದಾಳಿಯನ್ನು ತಡೆಯಲು ಸೋಲಾರ್ ಬೇಲಿ ನಿರ್ಮಾಣ, ಆನೆ ಕಂದಕ, ರೈಲ್ವೇ ಹಳಿಯ ಪಟ್ಟಿಯನ್ನು ಬಳಸಿ ಬೇಲಿ ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಸರ್ಕಾರ ಘೋಷಿಸಲಾಗಿತ್ತು. ಇದೀಗ ಹಲವು ಸಮಯದ ಬೇಡಿಕೆಗಳ ಬಳಿಕ ಆನೆ ಕಂದಕದ ನಿರ್ಮಾಣ ಮಾಡಲಾಗಿದ್ದು ಮುಂದೆ ಈ ಭಾಗದಲ್ಲಿ ಆನೆ ದಾಳಿ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗುತಿದೆ.

ಸೋಲಾರ್ ಬೇಲಿ ನಿರ್ಮಾಣಕ್ಕೆ ಆರ್ಥಿಕ ನೆರವು:
ಆನೆ ದಾಳಿ ತಡೆಯಲು ಅರಣ್ಯದಂಚಿನಲ್ಲಿ ಭೂಮಿಯನ್ನು ಹೊಂದಿರುವ ಕೃಷಿಕರು ಸೋಲಾರ್ ಬೇಲಿಯನ್ನು ನಿರ್ಮಿಸುವುದಾದರೆ ಆರ್ಥಿಕ ನೆರವನ್ನು ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ತಗುಲುವ ಖರ್ಚಿನ ಶೇ.50 ರಷ್ಟನ್ನು ಸರ್ಕಾರ  ಭರಿಸಲಿದೆ. ಸೋಲಾರ್ ಬೇಲಿಯನ್ನು ನಿರ್ಮಿಸಲು ಆಸಕ್ತಿ ವಹಿಸಿ ಕೃಷಿಕರು ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ಪರಿಶೀಲಿಸಿ ಸರ್ಕಾರ ಅನುದಾನ ನೀಡಲಿದೆ. ಹಲವು ಮಂದಿ ಕೃಷಿಕರು ಸೋಲಾರ್ ಬೇಲಿ ನಿರ್ಮಾಣದ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ.

ಆನೆ ಕಂದಕ ನಿರ್ಮಾಣ ಆಗದ ಪ್ರದೇಶದಲ್ಲಿ ಕೃಷಿಕರಿಗೆ ಆರ್ಥಿಕ ನೆರವನ್ನು ನೀಡಿ ಸೋಲಾರ್ ಬೇಲಿಯನ್ನು ನಿರ್ಮಿಸಿ ಆನೆ ದಾಳಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು