News Kannada
Tuesday, October 04 2022

ಕರಾವಳಿ

ಯಕ್ಷಗ್ರಾಮಕ್ಕೆ ಮುಕುಟ ಮಣಿಯಾಗಿ ಯಕ್ಷಗಾನ ಅಧ್ಯಯನ ಕೇಂದ್ರ - 1 min read

Photo Credit :

ಯಕ್ಷಗ್ರಾಮಕ್ಕೆ ಮುಕುಟ ಮಣಿಯಾಗಿ ಯಕ್ಷಗಾನ ಅಧ್ಯಯನ ಕೇಂದ್ರ

ಸುಳ್ಯ: ಅದೊಂದು ಕಾಲವಿತ್ತು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿಪ್ರದೇಶವಾದ ದೇಲಂಪಾಡಿಯಲ್ಲಿ ಯಕ್ಷಗಾನ ಕಲೆಯನ್ನು ಕಲಿಯದವರು, ಅದರ ಬಗ್ಗೆ ಆಸಕ್ತಿ ಇಲ್ಲದವರು ಯಾರೂ ಇಲ್ಲ ಎಂಬ ಸ್ಥಿತಿಯಿದ್ದ ದಿನಗಳು. ಯಕ್ಷಗಾನದ ಬಗ್ಗೆ ಆಸಕ್ತಿ, ಅರಿವು ಇರುವವರೇ ಎಲ್ಲರೂ, ಪ್ರತಿ ಮನೆಯಲ್ಲೂ ಯಕ್ಷಗಾನವನ್ನು ಬಲ್ಲವರು, ಕಲಾವಿದರು ತುಂಬಿದ್ದರು. ಆಧುನಿಕ ಕಲೆಗಳ ಮತ್ತು ಮಾಧ್ಯಮಗಳ ಭರಾಟೆಯಲ್ಲೂ ದೇಲಂಪಾಡಿಯ ಯಕ್ಷಗಾನ ಪ್ರೀತಿಗೇನೂ ಕಮ್ಮಿಯಾಗಿಲ್ಲ. ಯಕ್ಷಗಾನ ಗ್ರಾಮವೆಂದೇ ಪ್ರಸಿದ್ಧವಾದ ದೇಲಂಪಾಡಿಗೆ ಮುಕುಟಮಣಿಯಾಗಿ ಇದೀಗ  ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ತಲೆಯೆತ್ತಿದೆ.


ಭೂರಮೆಯ ಸ್ವರ್ಗದಂತಿರುವ ಉಭಯ ರಾಜ್ಯಗಳ ಸಾಂಸ್ಕೃತಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಈ ಚಿಕ್ಕ ಮತ್ತು ಚೊಕ್ಕ ಗ್ರಾಮದಲ್ಲಿ ಯಕ್ಷಗಾನದ ಕಂಪನ್ನು ಅರಳಿಸಿದ ಮತ್ತು ಗ್ರಾಮದ ಪ್ರತಿಯೊಬ್ಬರಲ್ಲೂ ಪ್ರಾಣ ವಾಯುವಿನಂತೆ ಯಕ್ಷಪ್ರೇಮವನ್ನು ಬಿತ್ತಿದ ಬನಾರಿ  ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಕರ್ನಾಟಕ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ಮಾರ್ಪಾಡಾಗಿದೆ.

ಏಳು ದಶಕಗಳ ಕಾಲ ಯಕ್ಷಗಾನ ಸೇವೆ ಮಾಡಿದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ಯಕ್ಷ ಕಲೆಯ ಸಂಶೋಧನಾ ಕೇಂದ್ರವಾಗಬೇಕು ಎಂಬ ಆಶಯವನ್ನು ಬನಾರಿಗೆ ಅತೀ ಸಮೀಪದ ದೇವರಗುಂಡದವರಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಬಹಳ ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾದಾಗ ತಾನು ಮಂಡಿಸಿದ ಮೊದಲ ಬಜೆಟ್ ನಲ್ಲಿಯೇ ಬನಾರಿಯ ಯಕ್ಷಗಾನ ಸಂಘವನ್ನು ಅಧ್ಯಯನ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅನುದಾನವನ್ನು ಘೋಷಣೆ ಮಾಡಿದ್ದರು. ಸರ್ಕಾರದ ಆರ್ಥಿಕ ನೆರವಿನೊಂದಿಗೆ ಇದೀಗ ಯಕ್ಷಗಾನ ಕಲಾ ಸಂಘದ ವತಿಯಿಂದ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದ್ದು ಇತ್ತೀಚೆಗೆ ಉದ್ಘಾಟನೆಯಾಗಿದೆ.

ಇದಕ್ಕಾಗಿ ಸುಂದರವಾದ ಕಟ್ಟಡ ತಲೆಯೆತ್ತಿದ್ದು ಮುಂದೆ ಇಲ್ಲಿ ಯಕ್ಷಗಾನದ ಮುಮ್ಮೇಳ ಮತ್ತು ಹಿಮ್ಮೇಳದ ಅಧ್ಯಯನಕ್ಕೆ, ಸಂಬಂಧಪಟ್ಟಂತೆ ಯಕ್ಷಗಾನ ನಾಟ್ಯ, ಅರ್ಥಗಾರಿಕೆ, ಬಣ್ಣಗಾರಿಕೆ, ಭಾಗವತಿಕೆ, ಚೆಂಡೆ, ಮದ್ದಳೆ, ಪ್ರಸಂಗ ಪುರಾಣ ಆದಿಯಾಗಿ ಸಮಗ್ರ ಸಾಂಸ್ಕೃತಿಕ ಹಾಗು ಯಕ್ಷಗಾನದ ಎಲ್ಲಾ ರಂಗಗಳ ಪರಿಪೂರ್ಣ ಅಧ್ಯಯನಕ್ಕೆ, ತರಬೇತಿಗೆ ಮತ್ತು ಯಕ್ಷಗಾನ ಸಂಶೋಧನೆಗೆ ಅವಕಾಶ  ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಯಕ್ಷಗಾನ ಕುರಿತ ಪುಸ್ತಕಗಳ ಗ್ರಂಥಾಲಯ, ಯಕ್ಷಗಾನ ಉಪಕರಣಗಳ ಸಂಗ್ರಹ, ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾವಚಿತ್ರ ಸಂಗ್ರಹ ಕಾರ್ಯಗಳನ್ನು ನಡೆಸಲಾಗುವುದು. ಕಟ್ಟಡದಲ್ಲಿ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ವಾಸ್ತವ್ಯಕ್ಕೆ, ತರಬೇತಿಗೆ, ಅಧ್ಯಯನಕ್ಕೆ ಬೇಕಾದ ಸ್ಥಳಾವಕಾಶವನ್ನು ಮಾಡಲಾಗುವುದು. ಯಕ್ಷಗಾನ ಪ್ರದರ್ಶನಕ್ಕೆ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ಯಕ್ಷಗಾನ ಕುರಿತ ವಿಶೇಷ ಶಿಬಿರಗಳನ್ನೂ ಏರ್ಪಡಿಸಲಾದೆ.

ಯಕ್ಷಗಾನ ಶಾಲೆ:
ಯಕ್ಷಗಾನವನ್ನು ಕಲಿಸಲೆಂದು ಏಳು ದಶಕಗಳ ಹಿಂದೆ ಸ್ಥಾಪಿತವಾದ ಶಾಲೆ ಬನಾರಿ ಯಕ್ಷಗಾನ ಕಲಾ ಸಂಘ. ಯಕ್ಷಗಾನ ಕಲೆಯ ಅನನ್ಯ ಆರಾಧಕರೂ, ಕಲಾವಿದರೂ, ಪ್ರಸಂಗ ಸಾಹಿತಿಗಳೂ, ಯಕ್ಷಗಾನ ಗುರುಗಳೂ ಆಗಿದ್ದ ದಿ.ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ 1943 ರಲ್ಲಿ ಈ ಯಕ್ಷ ಕಲಾಶಾಲೆಯನ್ನು ಸ್ಥಾಪಿಸಿ ದೇಲಂಪಾಡಿಯನ್ನು ಕಲಾಗ್ರಾಮವನ್ನಾಗಿಸಿದರು. ಉಚಿತವಾಗಿ ತರಬೇತಿ ನೀಡಿ ಸ್ವಂತ ಕಲಾ ತಂಡವನ್ನು ಕಟ್ಟಿ ಅತಿಥಿ ಕಲಾವಿದರನ್ನೂ ಸೇರಿಸಿ ತಾಳಮದ್ದಳೆಗಳನ್ನೂ, ಯಕ್ಷಗಾನ ಬಯಲಾಟವನ್ನೂ ನಡೆಸಲು ಪ್ರಾರಂಭಿಸಿದರು. ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾದ ಯಕ್ಷ ಪರಂಪರೆ ನಿರಂತರವಾಗಿ ಇಂದಿಗೂ ಮುಂದುವರಿದಿದೆ. ಕಳೆದ ಏಳು ದಶಕಗಳಲ್ಲಿ ಅಸಂಖ್ಯ ಮಂದಿ ಕಲಾವಿದರು ಗೆಜ್ಜೆ ಕಟ್ಟಿ ಈ ಮಣ್ಣನ್ನು ಪಾವನಗೊಳಿಸಿದ್ದಾರೆ. ವಿಷ್ಣುಭಟ್ಟರು ತನ್ನ ಮನೆಯ ಚಾವಡಿಯಲ್ಲಿ ತರಬೇತಿ ಆರಂಭಿಸಿದ ಕಲಾ ಸಂಘವು ನಿರಂತರ ಏಳು ದಶಕಗಳ ಕಾಲ ತನ್ನ ಕಲಾ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಯಕ್ಷಗಾನ ಕಲಾ ಶಾಲೆಯು ಇದೀಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಯಕ್ಷಗಾನದ ಬೆಳವಣಿಗೆಗೆ ಇನ್ನಷ್ಟು ಸಹಾಯಕವಾಗಬಹುದು ಎಂದು ನಿರೀಕ್ಷಿಸಲಾಗಿದೆ.

See also  ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಮದ್ರಸ ವಿದ್ಯಾರ್ಥಿಗಳು ಸಾವು

ಹಿಂದೆಲ್ಲ ನೂರಕ್ಕೂ ಹೆಚ್ಚು ಮಂದಿ ಬನಾರಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಅಭ್ಯಾಸಕ್ಕೆ ಬರುತ್ತಿದ್ದರು. ಈಗಲೂ ಕೇಂದ್ರದಲ್ಲಿ ಹಲವು ಮಂದಿ ಆಸಕ್ತರು ಯಕ್ಷ ಅಭ್ಯಾಸಕ್ಕೆ ಬರುತ್ತಾರೆ. ಭಾಗವತಿಕೆ, ಚೆಂಡೆ, ಮದ್ದಳೆ, ಅರ್ಥಗಾರಿಕೆಗಳ ಅಭ್ಯಾಸ, ಇಲ್ಲಿಯ ನಿರಂತರ ಪ್ರಕ್ರಿಯೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರೂ ಇಲ್ಲಿ ಯಕ್ಷಗಾನ ಕಲಿತಿದ್ದಾರೆ.  ಶ್ರೀ ಕೃಷ್ಣನ ಸಾನ್ನಿಧ್ಯವಿರುವ ಕೇಂದ್ರವಾಗಿರುವ ಬನಾರಿ ಯಕ್ಷಗಾನ ಸಂಘದಲ್ಲಿ ಅಭ್ಯಾಸದ ಜೊತೆಗೆ ತಾಳಮದ್ದಳೆ, ಯಕ್ಷಗಾನ ಬಯಲಾಟಗಳು ನಡೆಯುತ್ತವೆ.

ಪ್ರತಿ ವರ್ಷ ಅದ್ದೂರಿ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ, ಕಲಾವಿದರ ಸನ್ಮಾನ ನಡೆಸಲಾಗುತಿದೆ. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಅವರ ಜನ್ಮಶತಮಾನೋತ್ಸವವನ್ನೂ ಆಚರಿಸಲಾಗಿದ್ದು ವರ್ಷಪೂರ್ತಿ ಹಲವು ಕಾರ್ಯಕ್ರಮಗಳು ಮೆರುಗು ನೀಡಿದೆ. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಅವರ ಮಕ್ಕಳೂ ಯಕ್ಷಗಾನದ ಮೇರು ಕಲಾವಿದರೂ ಆದ ವನಮಾಲಾ ಕೇಶವ ಭಟ್, ಡಾ.ರಮಾನಂದ ಬನಾರಿ, ವಿಶ್ವವಿನೋದ ಬನಾರಿ ಮತ್ತು ತಂಡ ಕೇಂದ್ರದ ಚಟುವಟಿಕೆಗಳನ್ನು ನಡೆಸುತ್ತಿದ್ದು ಮಾಸ್ತರ್ ವಿಷ್ಣುಭಟ್ ಅವರ ಯಕ್ಷಗಾನ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು