News Kannada
Friday, September 30 2022

ಕರಾವಳಿ

ರಸ್ತೆಯಲ್ಲಿಯೇ ಹರಿದ ಒಳಚರಂಡಿ ತ್ಯಾಜ್ಯ: ಸುಳ್ಯ ನಗರದಲ್ಲೆಲ್ಲ ಹರಡಿದ ದುರ್ವಾಸನೆ - 1 min read

Photo Credit :

ರಸ್ತೆಯಲ್ಲಿಯೇ ಹರಿದ ಒಳಚರಂಡಿ ತ್ಯಾಜ್ಯ: ಸುಳ್ಯ ನಗರದಲ್ಲೆಲ್ಲ ಹರಡಿದ ದುರ್ವಾಸನೆ

ಸುಳ್ಯ: ಸುಳ್ಯ ನಗರದಲ್ಲಿ ಅಳವಡಿಸಲಾದ ಒಳಚರಂಡಿಯ ತ್ಯಾಜ್ಯ ರಸ್ತೆಯಲ್ಲಿಯೇ ಹರಿದು ನಗರವಿಡೀ ದುರ್ವಾಸನೆ ಹರಡಿ ಜನ ಜೀವನ ಅಸ್ತವ್ಯಸ್ತ ಗೊಂಡ  ಘಟನೆ ನಡೆದಿದೆ. ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ಒಳಚರಂಡಿಯ ಮ್ಯಾನ್ ಹೋಲ್ ಗಳಲ್ಲಿ ತ್ಯಾಜ್ಯ ತುಂಬಿ ತುಳುಕಿ  ರಸ್ತೆಯಲ್ಲೆಲ್ಲ ಹರಿದು ನಗರದಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಶುಕ್ರವಾರ ಬೆಳಿಗ್ಗೆ  ಸುಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆ ಮಧ್ಯೆ ಇರುವ ಮ್ಯಾನ್ ಹೋಲ್ ನಲ್ಲಿ ತ್ಯಾಜ್ಯ ಓವರ್ ಪ್ಲೋ ಆಗಿ ತ್ಯಾಜ್ಯ ಹೊರ ಚೆಲ್ಲಿ ರಸ್ತೆಯಲ್ಲೆಲ್ಲ ಹರಿಯಿತು. ಇದರಿಂದ ಪರಿಸರವೆಲ್ಲ  ದುರ್ನಾತ ಬೀರಿದೆ. ರಸ್ತೆಯಲ್ಲಿ ತ್ಯಾಜ್ಯ ಹರಿದ ಕಾರಣ ರಸ್ತೆಯಲ್ಲಾಗಿ ಬಂದ ಕೆಲವು ವಾಹನ ಸವಾರರ ಮೇಲೆ, ಪಾದಚಾರಿಗಳ ಮೇಲೆ ತ್ಯಾಜ್ಯ ನೀರಿನ ಅಭಿಷೇಕ ನಡೆದಿದೆ. ವಿಷಯ ತಿಳಿದು ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಶ್ರೀದೇವಿ ಮತ್ತು ಅಧಿಕಾರಿಗಳು ಆಗಮಿಸಿ ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿಯನ್ನು ಬಂದ್ ಮಾಡಿ  ಮ್ಯಾನ್ ಹೋಲ್ನ ಮುಚ್ಚಳವನ್ನು ತೆಗೆದು ಸಕ್ಕಿಂಗ್ ಯಂತ್ರದ ಸಹಾಯದಿಂದ ತ್ಯಾಜ್ಯವನ್ನು ಹೊರ ತೆಗೆಯಲಾಯಿತು. ಹಾಗಿದ್ದರೂ ಇಡೀ ಪರಿಸರವೆಲ್ಲ ತ್ಯಾಜ್ಯ ಹರಡಿ ದುರ್ವಾಸನೆ ಬೀರಿ ಸಾರ್ವಜನಿಕರು ಮೂಗು ಮುಚ್ಚಿ ಕೊಂಡೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಕರಿಕೆ ಬರುವ ವಾಸನೆಯಿಂದ ನೀರು, ಆಹಾರ  ಸೇವಿಸಲು ಆಗುತ್ತಿರಲಿಲ್ಲ ಎಂದು ಸಾವಜನಿಕರು ಹೇಳುತ್ತಾರೆ. ದುರ್ನಾತ ಹರಡಿ ಕೆಲವರಿಗೆ ತಲೆ ನೋವು, ವಾಂತಿ ಉಂಟಾಗಿದೆ. ಬಳಿಕ ಮಂಗಳೂರಿನಿಂದ  ಯಂತ್ರಗಳನ್ನು ತರಿಸಿ ಒಳಚರಂಡಿಯ ಪೈಪ್ಗಳಲ್ಲಿ ಉಂಟಾಗಿರುವ ಬ್ಲಾಕ್ಗಳನ್ನು ತೆಗೆಯುವ ಕೆಲಸ ನಡೆಸಲಾಯಿತು.

ಆರಂಭದಿಂದಲ್ಲೇ ಆವಾಂತರ:
ಬಾರೀ ವಿವಾದಕ್ಕೆ ಕಾಣವಾಗಿದ್ದ ಒಳಚರಂಡಿಗೆ ವಿರೋಧದ ನಡುವೆಯೂ ಸುಳ್ಯ ನಗರದಲ್ಲಿ 2015ರ ಜನವರಿಯಲ್ಲಿ ಸಂಪರ್ಕ ನೀಡಲಾಗಿತ್ತು.  ಗಾಂಧೀನಗರದಿಂದ ಆರಂಭಗೊಂಡು ಹೋಟೆಲ್, ಕ್ಯಾಂಟೀನ್, ಲಾಡ್ಜ್, ಕೋಳಿ ಅಂಗಡಿಗಳಿಗೆ  ಸಂಪರ್ಕವನ್ನು ನೀಡಲಾಗಿತ್ತು. ಸಂಪರ್ಕ ನೀಡಿ ಕೆಲವೇ ತಿಂಗಳಲ್ಲಿ ಮ್ಯಾನ್ ಹೋಲ್ ತುಂಬಿ ತುಳುಕಿ ನಗರದಲ್ಲಿ ವಾಸನೆ ಬೀರಲು ಆರಂಭಿಸಿತ್ತು. ಬಳಿಕ ಹಲವು ಬಾರಿ ಮ್ಯಾನ್ಹೋಲ್ಗಳ ಮೂಲಕ ತ್ಯಾಜ್ಯ ಹೊರ ಬಂದು ದುರ್ವಾಸನೆ ಬೀರಿದ ಘಟನೆ ಉಂಟಾಗಿತ್ತು.

ಮೇಲಿನಿಂದ ಹರಿಯ ಬಿಡುವ ನೀರು ಮತ್ತಿತರ ತ್ಯಾಜ್ಯಗಳು  ಹರಿದು ಬಂದು ಮ್ಯಾನ್ಹೋಲ್ ಮತ್ತು ಪೈಪ್ ಗಳಲ್ಲಿ ಶೇಖರಣೆಯಾಗುತ್ತದೆ. ಪೈಪ್ಗಳಲ್ಲಿ ತ್ಯಾಜ್ಯ ತುಂಬುವುದರಿಂದ ಮ್ಯಾನ್ ಹೋಲ್ ಗಳ ಮೂಲಕ ತ್ಯಾಜ್ಯ ಹೊರ ಬರುತ್ತದೆ. ಹಲವು ಬಾರಿ ಈ ರೀತಿಯ ಪ್ರಸಂಗದಿಂದ ಸುಳ್ಯ ನಗರದ ಜನಜೀವನವೇ ನರಕಸದೃಶ್ಯವಾಗುವ ಪ್ರಸಂಗ ಪದೇ ಪದೇ ಉಂಟಾಗುತಿದೆ.  

ನಿರ್ವಹಣೆ ಕೊರತೆ: ಸಾರ್ವಜನಿಕರ ಆಕ್ರೋಶ
ಒಳಚರಂಡಿ ಸಂಪರ್ಕ ನೀಡಲು ಆರಂಭಿಸಿದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ರೀತಿ ರಾದ್ದಾಂತ ಉಂಟಾಗಿದೆ ಎಂದು ಸಾವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್ ಗಲ್ಲಿ ಹರಿಯ ಬಿಡುವ ತ್ಯಾಜ್ಯ ಸರಿಯಾಗಿ ಹರಿದು ಶುದ್ದೀಕರಣ ಘಟಕದವರೆಗೆ ತಲುಪುತಿದೆಯೇ ಎಂದು ಪರೀಕ್ಷೆಗೆ ಒಳಪಡಿಸಿದಂತೆ ಕಾಣುತ್ತಿಲ್ಲ. ಕೋಲಿ ತ್ಯಾಜ್ಯ ಸೇರಿದಂತೆ ದ್ರವ ಮತ್ತು ಘನ ತ್ಯಾಜ್ಯಗಳೂ ಒಳಚರಂಡಿಯಲ್ಲಿ ಹರಿಯ ಬಿಟ್ಟ ಕಾರಣ ತ್ಯಾಜ್ಯ ಪೈಪ್ನಲ್ಲಿ ಸಿಲುಕಿದೆ. ಇದು ತ್ಯಾಜ್ಯ ಶುದ್ದೀಕರಣ ಘಟಕಕ್ಕೆ ಹರಿಯದೆ ತಿಂಗಳಿನಿಂದ ಪೈಪ್ ಮತ್ತು ಮ್ಯಾನ್ಹೋಲ್ಗಳಲ್ಲಿಯೇ ತುಂಬಿ  ಹೊರ ಚೆಲ್ಲಿ ನಗರ ಪೂತರ್ಿ ವಾಸನೆ ಬೀರಿ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

See also  ಅಳಿಯೂರು: ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ

ಬಂದ್ ಮಾಡಲು ರಿಕ್ಷಾ ಚಾಲಕರ ಒತ್ತಾಯ:
ನಗರಕ್ಕೆ ಒಳಚರಂಡಿ ವ್ಯವಸ್ಥೆ ಅಗತ್ಯವಿಲ್ಲ. ಪದೇ ಪದೇ ಈ ರೀತಿ ದುರ್ವಾಸನೆ ಬೀರಿ ಜನರಿಗೆ ತೊಂದರೆ ನೀಡುವುದಾದರೆ, ಒಳಚರಂಡಿ ಯೋಜನೆಯನ್ನೇ ಬಂದ್ ಮಾಡುವುದು ಒಳ್ಳೆಯದು ಎಂದು ಬಿಎಂಎಸ್ ರಿಕ್ಷಾ ಚಾಲಕರ ಸಂಘಟನೆ ಹೇಳೀದೆ. ಒಳಚರಂಡಿಯನ್ನು ಬಂದ್ ಮಾಡಬೇಕು ಇಲ್ಲದಿದ್ದರೆ ತಿಂಗಳಿಗೊಮ್ಮೆಯಾದರೂ ಒಳಚರಂಡಿಯ ತ್ಯಾಜ್ಯಗಳನ್ನು ತೆಗೆಸುವ ಕೆಲಸ ಮಾಡಬೇಕು ಎಂದು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತ್ತಡ್ಕ ಹೇಳಿದ್ದಾರೆ.

ದಶಕದ ಯೋಜನೆ:
ಲಾಡ್ಜ್, ಮನೆ, ಹೋಟೆಲ್ ಮತ್ತಿತರ ಕಡೆಗಳ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಿ ಅದನ್ನು ಶುದ್ಧೀಕರಣ ಘಟಕಕ್ಕೆ ಹರಿಸಿ  ಅಲ್ಲಿ ತ್ಯಾಜ್ಯ ನೀರನ್ನು  ಶುದ್ದೀಕರಿಸುವುದು ಯೋಜನೆಯ ಉದ್ದೇಶ. ಅದಕ್ಕಾಗಿ ಮ್ಯಾನ್ ಹೋಲ್, ವೆಟ್ವೆಲ್, ಶುದ್ದೀಕರಣ ಘಟಕಗಳ ಕಾಮಗಾರಿ ಒಂದು ದಶಕದಿಂದ ಹೆಚ್ಚು ಕಾಲ ನಡೆಯುತ್ತಾ ಬಂದು ಹಲವು ವಿವಾದಗಳಿಗೆ ಕಾರಣವಾಗಿತ್ತು. ಹಲವು ವಿವಾದಗಳ ಮಧ್ಯೆ  ಒಳಚರಂಡಿಯ ಕಾಮಗಾರಿ ಪೂರ್ತಿಯಾಗಿದೆ ಎಂದು ಕಳೆದ ವರ್ಷ ಸಂಪರ್ಕ ನೀಡಲಾಗಿತ್ತು. ಆದರೆ ಅಂದಿನಿಂದ ಇಲ್ಲಿಯವರೆಗೆ ಸುಳ್ಯದ ಜನತೆಗೆ ಸಮಸ್ಯೆ ತಪ್ಪಿಲ್ಲ.

ನಿರ್ವಹಣೆಗೆ ಆಧುನಿಕ ಮೆಷಿನ್
ಸುಳ್ಯ ನಗರದಲ್ಲಿ ಒಳಚರಂಡಿ ಯೋಜನೆ ಅಸಮರ್ಪಕವಾಗಿ ಮತ್ತು ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದ ಪದೇ ಪದೇ  ಸಮಸ್ಯೆ ಉಂಟಾಗುತಿದೆ. ಇನ್ನು ಮುಂದೆ ಒಳಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿಯ ಪೈಪ್ ಗಳಲ್ಲಿ ಸಿಲುಕುವ ತ್ಯಾಜ್ಯಗಳನ್ನು ತೆಗೆಯಲು ಆಧುನಿಕ ಯಂತ್ರವನ್ನು ಖರೀದಿಸಲಾಗುವುದು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆಗಿದೆ”
-ಪ್ರಕಾಶ್ ಹೆಗ್ಡೆ
ಅಧ್ಯಕ್ಷ. ನಗರ ಪಂಚಾಯಿತಿ ಸುಳ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು