News Kannada
Sunday, September 25 2022

ಕರಾವಳಿ

ಭೀಕರ ಅಪಘಾತದಲ್ಲಿ ಐವರ ಸಾವು: ಮುಗಿಲು ಮುಟ್ಟಿದ ಸ್ನೇಹಿತನ ರೋಧನೆ - 1 min read

Photo Credit :

ಭೀಕರ ಅಪಘಾತದಲ್ಲಿ ಐವರ ಸಾವು: ಮುಗಿಲು ಮುಟ್ಟಿದ ಸ್ನೇಹಿತನ ರೋಧನೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಫರಂಗಿಪೇಟೆ ಸಮೀಪದ ಅರ್ಕಳ ವಳಚ್ಛಿಲ್ ಎಂಬಲ್ಲಿ  ಶುಕ್ರವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

Five killed on spot in serial accident involving container-1

ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ರಿಕ್ಷಾ ಹಾಗೂ ಮಾರುತಿ ಕಾರಿಗೆ ಡಿಕ್ಕಿ ಹೊಡೆದು  ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಮೃತಪಟ್ಟವರನ್ನು ಆಟೊರಿಕ್ಷಾ ಚಾಲಕ ಬಂಟ್ವಾಳದ ಸಜಿಪ ನಿವಾಸಿ ಯೂಸುಫ್ ಎಂಬವರ ಪುತ್ರ ಮುಹಮ್ಮದ್ ನಝೀರ್(29), ನಂದಾವರದ ಸಿದ್ದೀಕ್ ಎಂಬವರ ಪುತ್ರ ಮುಹಮ್ಮದ್ ಸಲಾಂ (20), ಹಮೀದ್ ಎಂಬವರ ಪುತ್ರ ಸಿನಾನ್(16), ಮಾರುತಿ 800 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಟ್ಲದ ಅಬ್ಬಾಸ್(40) ಹಾಗೂ ಪಾದಚಾರಿ ಅಡ್ಯಾರ್  ಬೀರ್ಪುಗುಡ್ಡೆಯ ಇಬ್ರಾಹೀಂ ಎಂಬವರ ಪುತ್ರ ಹುನೈಸ್(20) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರ ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಹಾಗೂ ಇನ್ನಿಬ್ಬರ ಮೃತದೇಹಗಳನ್ನು ಎ.ಜೆ. ಆಸ್ಪತ್ರೆ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಉಳಿದಂತೆ ಗಾಯಗೊಂಡಿರುವ ಮೂವರೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
ಬಿ.ಸಿ.ರೋಡು ಕಡೆಯಿಂದ ಅತಿವೇಗದಿಂದ ಬಂದ ಕಂಟೈನರ್ ಲಾರಿ ವಳಚ್ಛಿಲ್ ಸಮೀಪದ ಯಶಸ್ವಿ ಹಾಲ್ ಸಮೀಪಿಸುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಚಲಿಸಿ ಡಿವೈಡರ್ ನ  ಮೇಲೇರಿದೆ, ಮಾತ್ರವಲ್ಲದೆ ವಿರುದ್ದ ಬದಿಯ ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾ ಹಾಗೂ ಮಾರುತಿ ಕಾರಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ತುಸು ದೂರಕ್ಕೆ ಎಸೆಯಲ್ಪಟ್ಟಿದೆ. ಇದರಿಂದ ಕಾರಿನಲ್ಲಿದ್ದ ಅಬ್ಬಾಸ್ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಟೈನರ್ ಇನ್ನೂ ಮುಂದಕ್ಕೆ ಚಲಿಸಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಕಂಟೈನರ್ ನಡಿ ಸಿಲುಕಿಕೊಂಡ ಆಟೊವನ್ನು ತುಸು ದೂರದವರೆಗೆ ಎಳೆದೊಯ್ದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟಕ್ಕೆ ನಿಲ್ಲದ ಕಂಟೈನರ್ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಅಡ್ಯಾರ್ ನಿವಾಸಿ ಹುನೈಸ್(20) ಎಂಬವರಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಕಂಟೈನರ್ನಡಿಗೆ ಸಿಲುಕಿದ ಹುನೈಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ  ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರಿಕ್ಷಾ ಲಾರಿಯ ಅಡಿಭಾಗಕ್ಕೆ ಸಿಲುಕಿ ಅಪ್ಪಚ್ಚಿಯಾಗಿದೆ.

ಕಂಟೈನರ್ ಲಾರಿ ವಿರುದ್ದ ಆಕ್ರೋಶ:
ಘಟನೆಗೆ ಲಾರಿ ಚಾಲಕನ ಅತಿವೇಗದ ಚಾಲನೆಯೇ ಕಾರಣ ಎಂದು ಆರೋಪಿಸಲಾಗಿದ್ದು, ಆಕ್ರೋಶಿತರ ಗುಂಪೊಂದು ಲಾರಿಯ ಡೀಸೆಲ್ ಟ್ಯಾಂಕಿಗೆ ಬೆಂಕಿ ಹಚ್ಚಲು ಮುಂದಾದ ಘಟನೆಯೂ ಈ ಸಂದರ್ಭ ನಡೆಯಿತು. ಸ್ಥಳದಲ್ಲಿದ್ದ ಮಂಗಳೂರು ಗ್ರಾಮಾಂತರ ಪೊಲೀಸರು ಗುಂಪನ್ನು ಸಮಾಧಾನಗೊಳಿಸಿದರು. ಈ ನಡುವೆ ಲಾರಿಯ ಮುಂಭಾಗದ ಟಯರ್ ಸ್ಪೋಟಗೊಂಡ ಪರಿಣಾಮ ಲಾರಿ ಚಾಲಕನಿಗೆ ನಿಯಂತ್ರಣ ತಪ್ಪಿರಬಹುದು ಎನ್ನಲಾಗಿದೆಯಾದರೂ, ಅತಿವೇಗದ ಚಾಲನೆಯೇ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

See also  ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ವೀರೇಂದ್ರ ಹೆಗ್ಗಡೆ

ಘಟನಾ ಸ್ಥಳಕ್ಕೆ  ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ತಡವಾಗಿ ಬಂದ 108 ಅಂಬ್ಯುಲೆನ್ಸ್
ಅಪಘಾತ ನಡೆದಾಕ್ಷಣ ಸ್ಥಳೀಯರೇ ಗಾಯಾಳುಗಳನ್ನು  ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಗಾಯಾಳುಗಳನ್ನು ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದು,  ಅಂಬ್ಯುಲೆನ್ಸ್ ಸ್ಥಳಕ್ಕೆ ಬಂದಿಲ್ಲ, ಬಳಿಕ ಖಾಸಗಿ ವಾಹನಗಳಲ್ಲಿ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಮಾರು 45 ನಿಮಿಷಗಳ ಬಳಿಕ ಎರಡು ಅಂಬ್ಯುಲೆನ್ಸ್ ಗಳು ಒಟ್ಟಿಗೆ ಸ್ಥಳಕ್ಕೆ ಬಂದಿದ್ದು, ಈ ವೇಳೆ ಸಾರ್ವಜನಿಕರು ಅದರ ಚಾಲಕನನ್ನು ತೀವ್ರ ತರಾಟೆಗೆ ತೆಗೆದರಲ್ಲದೆ, ಅಂಬ್ಯುಲೆನ್ಸ್ ನ ಬಾಗಿಲು ಎಳೆದು ಸಿಬ್ಬಂದಿಗೆ ಹಲ್ಲೆ ನಡೆಸಲು ಮುಂದಾದರು. ಆದರೆ ಸ್ಥಳದಲ್ಲಿದ್ದ ಪೊಲೀಸರು  ಮಧ್ಯಪ್ರವೇಶಿಸಿ, ಪರಿಸ್ಥಿತಿ  ನಿಯಂತ್ರಿಸಿ ಎರಡೂ ವಾಹನಗಳನ್ನೂ ವಾಪಾಸು ಕಳುಹಿಸಿಕೊಟ್ಟರು.

ಯಮನಂತೆ ಬಂದೆರಗಿತು..
ಬಿ.ಸಿ.ರೋಡು ಕಡೆಯಿಂದ ಯಮನಂತೆ ಬಂದ ಕಂಟೈನರ್ ಲಾರಿ ಐವರನ್ನು ಬಲಿತೆಗೆದುಕೊಂಡೇ ಬಿಟ್ಟಿದೆ. ಲಾರಿ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಕಗರೂಕತೆಯಿಂದ ಚಲಾಯಿಸಿಕೊಂಡು ಬಂದುದನ್ನು ಕಲ್ಲಡ್ಕದಲ್ಲಿಯೇ ಕಂಡವರಿದ್ದಾರೆ. ಆದರೆ ವಳಚ್ಚಿಲ್ ಗೆ ಬಂದ ಲಾರಿ ರಸ್ತೆಯ ಮತ್ತೊಂದು ಭಾಗಕ್ಕೆ ಹಾರಿ ಐವರ ಸಾವಿಗೆ ಕಾರಣವಾಗಿದೆ. ಲಾರಿ ಚಾಲಕ ಮಾತ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿಯ ಮೇಲಿದ್ದ ಖಾಲಿ ಕಂಟೈನರ್  ರಸ್ತೆ ಪಕ್ಕದಲ್ಲಿ ಬಿದ್ದಿದೆ.

ಟ್ರಾಫಿಕ್ ಜಾಮ್
ಅಪಘಾತದ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಜನ ಸ್ಥಳದಲ್ಲಿ ಜಮಾಯಿಸಿದ್ದು, ಆಕ್ರೋಶಿತರ ಗುಂಪೊಂದು ಲಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಡೀಸೆಲ್ ಟ್ಯಾಂಕ್ ನ ಮುಚ್ಚಳವನ್ನು ಒಡೆದು ಹಾಕುತ್ತಿದ್ದಂತೆಯೇ ಜಾಗೃತರಾದ ಮಂಗಳೂರು ಪೊಲೀಸರು ಗುಂಪನ್ನು ಸಮಾಧಾನಗೊಳಿಸಿದ್ದಾರೆ. ಈ ನಡುವೆ ಅಪಘಾತವನ್ನು ನೋಡಲು. ಫೋಟೋ ಕ್ಲಿಕ್ಕಿಸಲೆಂದು ರಸ್ತೆ ಬದಿ ವಾಹನ ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ಮೂರು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಜೆಯ ವೇಳೆಗೆ ಜನ ಜಮಾಯಿಸುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೆಎಸ್ಆರ್ ಪಿ ಪೊಲೀಸರನ್ನು ಕರೆಸಿ, ಜನರನ್ನು ಚದುರಿಸಲಾಯಿತು.

ಒಟ್ಟಿಗೆ ಆಡಿದವರು ನಾವು.. ನಮಗವರು ಬೇಕು..
ರಿಕ್ಷಾದಲ್ಲಿದ್ದ ನಂದಾವರದ ಮೂವರು ಪರಸ್ಪರ ಸ್ನೇಹಿತರಾಗಿದ್ದವರು. ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಸ್ಥಳಕ್ಕೆ ಬಂದ  ಮೃತರ ಸ್ನೇಹಿತನೋರ್ವನ ಆಕ್ರೋಶ ಹಾಗೂ ಅಳು ಮುಗಿಲುಮುಟ್ಟಿತು.  ಲಾರಿಯೆಡೆಗೆ ಅಪ್ಪಚ್ಚಿಯಾಗಿದ್ದ ರಿಕ್ಷಾವನ್ನೊಮ್ಮೆ ನೋಡಿ ಕಣ್ಣೀರು ಹರಿಸಿದ ಆತ, ಅಲ್ಲಿದ್ದ ಪೊಲೀಸರನ್ನು ಉದ್ದೇಶಿಸಿ, ನೋಡಿ ಸ್ವಾಮಿ, ನಾವೆಲ್ಲಾ ಒಟ್ಟಿಗೆ ಆಡಿದವರು, ಎಲ್ಲಿದ್ದಾರವರು,, ನಮಗವರು ಬೇಕು ಎಂದು ಜೋರಾಗಿಯೇ ರೋಧಿಸಿದ್ದು, ಇತರರ ಕಣ್ಣಲ್ಲೂ ಕಣ್ಣೀರು ಹರಿಸಿತು.. ಉಳಿದವರು ಆತನನ್ನು ಸಮಾಧಾನ ಪಡಿಸಿದರಾದರೂ, ಆತನ ಅಳು ಜೋರಾಯಿತು.

ಸಚಿವ ಖಾದರ್ ಸಂತಾಪ: ಫರಂಗಿಪೇಟೆಯ ಅಡ್ಯಾರ್ ಸಮೀಪದ ಐವರನ್ನು ಬಲಿ ಪಡೆದ ಭೀಕರ ಅಪಘಾತಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಸಂತಾಪ ಸೂಚಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿರುವ ಮೃತದೇಹಗಳನ್ನು ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ವಿಲೇವಾರಿ ಮಾಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸೂಚಿಸಿರುವುದಾಗಿ ತಿಳಿಸಿದ್ದಾರೆ.

See also  ಬಸ್ ಢಿಕ್ಕಿ; ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು