News Kannada
Wednesday, October 05 2022

ಕರಾವಳಿ

ಬಿರುಕು ಬಿಟ್ಟ ಶಾಲಾ ಗೋಡೆ: ಸೋರುತ್ತಿರುವ ಛಾವಣಿ - 1 min read

Photo Credit :

ಬಿರುಕು ಬಿಟ್ಟ ಶಾಲಾ ಗೋಡೆ: ಸೋರುತ್ತಿರುವ ಛಾವಣಿ

ಬೆಳ್ತಂಗಡಿ: ಹಳೆ ಹೆಂಚಿನ ಕಟ್ಟಡ ಬಿರುಕು ಬಿಟ್ಟಿದೆ. ಸಿಮೆಂಟಿನ ಛಾವಣಿಯ ಕಟ್ಟಡದಲ್ಲಿ ಪ್ಲಾಸ್ಟಿಕ್ ಭಾಗ್ಯ ನೀಡಲಾಗಿದೆ. ಹೊಸತಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಸೋರುತ್ತಿದೆ. ಇದು ಗ್ರಾಮೀಣ ಭಾಗದ ಐದು ಬಾರಿ ಶೇ. 100 ಫಲಿತಾಂಶ ಪಡೆದ ಸರ್ಕಾರಿ ಪ್ರೌಢ ಶಾಲೆಯ ದುಸ್ಥಿತಿ. ಇಲ್ಲಿನ ಮಕ್ಕಳಿಗೆ ಮಳೆಗಾಲದಲ್ಲಿ ಭಯದಿಂದ ಪಾಠ ಕೇಳುವ ಪರಿಸ್ಥಿತಿ.

ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆ ಗೋಡೆ ಬಿರುಕು ಬಿಟ್ಟಿದ್ದು ಸೋರುವ ತರಗತಿಗಳ ನಡುವೆ ಪಾಠ ಪ್ರವಚನ ನಡೆಯುತ್ತಿದೆ. ಸತತ ಎರಡು ವರ್ಷಗಳಿಂದ ಶೇ. 100 ಫಲಿತಾಂಶ ಪಡೆದಿರುವ ಶಾಲೆಯ ಕಟ್ಟಡ ದುರಸ್ತಿ ಕಾಣದೆ ಮಕ್ಕಳ ಓದಿಗೆ ತೊಡಕಾಗಿದೆ.

ಬಿರುಕು ಗೋಡೆ-ಸೋರುವ ತರಗತಿ: ಕಳೆದ 20 ವರ್ಷಗಳ ಹಿಂದೆ ಆರಂಭವಾದ ಪ್ರೌಢ ಶಾಲೆ ಇಲ್ಲಿನ ಭಾಗದ ಮಕ್ಕಳಿಗೆ ಅಕ್ಷರ ದೇಗುಲ. ಮೂಲಭೂತ ಸೌಕರ್ಯ ಕಡಿಮೆ. ಆದರೂ ಫಲಿತಾಂಶದಲ್ಲಿ ನಗರ ಭಾಗದ ಮಕ್ಕಳಿಗೆ ಪೈಪೋಟಿ ನೀಡುತ್ತಿದೆ. ಹಳೆಯ ಹೆಂಚಿನ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಲಾರಂಭಿಸಿದೆ.  ಅದಕ್ಕೆ ತಾಗಿಕೊಂಡಿರುವ ತಾರಸಿ ಕಟ್ಟಡದ ಸೋರುತ್ತಿದ್ದು ಗೋಡೆಗಳಲ್ಲಿ ನೀರಿನ ಪಸೆ ಆವರಿಸಿದೆ. ಶಾಲೆಯ ಗೋಡೆಯಲ್ಲಿ ಬಿರುಕು ಹಾಗೂ ಸೋರುವಿಕೆ ಆಪಾಯಕಾರಿಯಾಗುವ ಸೂಚನೆ ಇದೆ.

ತಾರಸಿ ಕಟ್ಟಡದ 8 ಮತ್ತು 9ನೇ ತರಗತಿ ಕೊಠಡಿ ಸೋರುತ್ತಿದ್ದು ಪ್ಲಾಸ್ಟಿಕ್ ಟರ್ಪಾಲ್ ಹಾಕಿ ಪಾಠ ಮಾಡುವ ಸನ್ನಿವೇಶ ಇದೆ. ನೀರು ತರಗತಿ ಇಡೀ ಬಾರದಂತೆ ಟರ್ಪಾಲ್ ನಿಂದ ಬೀಳುವ ನೀರು ನೇರ ಬಕೆಟ್ ಗೆ ಬೀಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆಯಾದರೂ ರಭಸದ ಮಳೆಗೆ ವಿದ್ಯಾರ್ಥಿಗಳಿಗೆ ನೀರು ಸಿಂಚನ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಗೋಡೆಗಳು ಒದ್ದೆಯಾದ ಕಾರಣ ವಿದ್ಯುತ್ತಿನ ಸಂಪರ್ಕದಲ್ಲಿ ವ್ಯತ್ಯಯದ ಭಯವೂ ಇದೆ.

1997ರಲ್ಲಿ ಶಾಲೆ ಆರಂಭವಾಗಿದ್ದು 8-9-10ನೇ ತರಗತಿಯಲ್ಲಿ ಒಟ್ಟು 97 ವಿದ್ಯಾರ್ಥಿಗಳಿದ್ದಾರೆ. 3 ಕ್ಲಾಸ್ ರೂಂ, 1 ಕಂಪ್ಯೂಟರ್ ರೂಂ ಹಾಗೂ 1 ಸ್ಟಾಫ್ ರೂಂ ಇದೆ. ಇದರಲ್ಲೇ ಪಾಠ-ಪ್ರವಚನಗಳು ನಡೆಯಬೇಕು. ಮುಖ್ಯ ಶಿಕ್ಷಕ, ಡಿ’ ಗ್ರೂಫ್ ನೌಕರ, ಕ್ಲಾರ್ಕ್ ಹುದ್ದೆಗಳು ಖಾಲಿ ಇದೆ. 8 ಶಿಕ್ಷಕರು ಇದ್ದಾರೆ.

ಸೋರುವ ನೂತನ ಕಟ್ಟಡ: ಹಳೆ ಕಟ್ಟಡಗಳ ಸ್ಥಿತಿ ಈ ರೀತಿಯಾದರೆ ಊರವರ ಭರವಸೆಯ ಹೊಸತಾಗಿ ನಿರ್ಮಾಣ ಆಗುತ್ತಿರುವ ಕಟ್ಟಡ ನಿರ್ಮಾಣ ಅಧೋಗತಿ. ಆರ್.ಎಂ.ಎಸ್.ಎ ಯೋಜನೆಯ ಅಡಿ ಶಾಲೆಗೆ ನೂತನ ಕಟ್ಟಡದ ನಿರ್ಮಾಣವಾಗುತ್ತಿದೆ. ಆದರೆ ನಿರ್ಮಾಣ ಹಂತದಲ್ಲಿರುವ ಕಟ್ಟಡ ಸೋರಲಾರಂಭಿಸಿದೆ. ಹೊಸ ಕಟ್ಟಡದ ಸ್ಲ್ಯಾಬ್ ಆಗಿದ್ದು ಅದು ಸೋರುತ್ತಿದೆ. ನೂತನ ನಿರ್ಮಾಣ ಕಟ್ಟಡ ಸೋರುತ್ತಿರುವುದರಿಂದ ಕಳಪೆ ಗುಣಮಟ್ಟದ ಕಾಮಗಾರಿಗೆ ನಿದರ್ಶನವಾಗಿದೆ. ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾವಿಸಲ್ಪಟ್ಟಿದ್ದು ನಿರ್ಣಯ ಕೈಗೊಳ್ಳಲಾಗಿದೆ. ದುರಸ್ತಿಗಾಗಿ ಸಮಬಂಧಪಟ್ಟ ಇಲಾಖೆಗೆ ಬರೆಯಲಾಗಿದೆ.

ಪೀಠೋಪಕರಣಗಳ ಕೊರತೆ: ಶಾಲೆಯಲ್ಲಿ ಪೀಠೋಪಕರಣಗಳ ಕೊರತೆ ಇದೆ. ಬೆಂಚ್ ಡೆಸ್ಕ್ ಗಳು ಬೇಕಿದ್ದು, ಇದ್ದ ವ್ಯವಸ್ಥೆಯಲ್ಲೇ ಹೊಂದಿಕೊಂಡು ಹೋಗಲಾಗುತ್ತಿದೆ. ಸೋರುವುದರಿಂದ ಇರುವ ಮರದ ಪೀಠೋಪಕರಣಗಳು ಹಾಳಾಗುತ್ತಿದೆ. ಅದನ್ನು ಸುಸ್ಥಿತಿಯಲ್ಲಿ ಇಡಲು ಹೆಣಗಾಡಬೇಕಾಗಿದೆ. ಶಿಕ್ಷಕರೇ ಎಲ್ಲಾ ಕರ್ತವ್ಯ ನಿರ್ವಹಿಸಬೇಕಾಗಿದೆ. ಪಠ್ಯೇತರ ಚಟುವಟಿಕೆ ಆಟೋಟಕ್ಕೆ ಮೈದಾನದ ವ್ಯವಸ್ಥೆ ಇಲ್ಲ. ಇಲ್ಲಿನ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ.

See also  ಮಂಗಳೂರು: ಎರಡು ಕೋಮುಗಳ ಮಧ್ಯೆ ಕ್ಷುಲಕ್ಕೆ ಕಾರಣಕ್ಕೆ ಹಲ್ಲೆ

ದುರಸ್ತಿಯಲ್ಲಿರುವ ಕಂಪ್ಯೂಟರ್: ಶಾಲೆಗೆ ಕಂಪ್ಯೂಟರ್ ಕೊಠಡಿ ಇದೆ. ಆದರೆ ಐ.ಸಿ.ಟಿ. ಫೇಸ್ ಎರಡು ಯೋಜನೆಯಡಿ ತಂದಿದ್ದ 11 ಕಂಪ್ಯೂಟರ್ಗಳು ದುರಸ್ತಿಯಲ್ಲಿವೆ. ಮುಖೋಪಾಧ್ಯಾಯ ಹಾಗೂ ಶಿಕ್ಷಕರ ಕಾಳಜಿಯಿಂದ ಇನ್ಫೋಸಿಸ್ ಗೆ ಮನವಿ ನೀಡಿದ ಕಾರಣ ಇತ್ತೀಚೆಗೆ ಇನ್ಫೋಸಿಸ್ 6 ಕಂಪ್ಯೂಟರ್ ಗಳನ್ನು ವಿದ್ಯಾರ್ಥಿಗಳ ಕಲಿಕೆಗಾಗಿ ಕೊಡುಗೆಯಾಗಿ ನೀಡಿದೆ.

ಹಲವಾರು ಬೇಡಿಕೆಗಳು ಈ ಶಾಲೆಯದ್ದು. ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಮಡಲಾಗಿದೆ. ಕಳೆದ 5-6 ವರ್ಷಗಳಿಂದ ಶಾಲೆಯ ದುಸ್ಥಿತಿಯ ಬಗ್ಗೆ ಎಲ್ಲರ ಗಮನಕ್ಕೆ ತರಲಾಗಿದೆ. ಶಿಕ್ಷಣ ಇಲಾಖೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಅಪವಾದವೂ ಕೇಳಿ ಬರುತ್ತಿದೆ. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ತಾತ್ಕಾಲಿಕ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಹಳೆಯ ಹೆಂಚಿನ ಕಟ್ಟಡ ಬಿರುಕು ಬಿಟ್ಟಿದೆ. ಹೊಸ ತಾರಸಿ ಕಟ್ಟಡ ಸೋರುತ್ತಿದೆ. ಇದೀಗ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ಕೂಡ ಈಗಲೇ ಸೋರಲಾರಂಭಿಸಿದೆ. ಇದರ ಬಗ್ಗೆ ಗ್ರಾಪಂನಲ್ಲಿ ನಿರ್ಣಯ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಗೆಗಳಿಗೆ ಮನವಿ ಸಲ್ಲಿಸಲಾಗಿದೆ. ಮಕ್ಕಳಿಗೆ ಅಪಾಯ ಆಗುವ ಮೊದಲು ಎಚ್ಚೆತ್ತುಕೊಳ್ಳಬೇಕು.– ಉದಯ ಕುಮಾರ್ ಬಿ.ಕೆ. ಬಂದಾರು ಗ್ರಾಪಂ ಅಧ್ಯಕ್ಷ.

ಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ. 1996ರಲ್ಲಿ ಪ್ರಾರಂಭಗೊಂಡು ಇದುವರೆಗೆ ಒಟ್ಟು 5 ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಬಂದಿದೆ. 2014-15ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಗುಣಮಟ್ಟದಲ್ಲಿ 3ನೇ ಸ್ಥಾನ ಪಡೆದ ಶಾಲೆ ಇದು. ಆದರೆ ಶಾಲೆಯ ಕಟ್ಟಡದ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ತುರ್ತಾಗಿ ಉತ್ತಮ ಸೌಕರ್ಯಗಳನ್ನು ಒದಗಿಸಬೇಕಿದೆ- ಉಮೇಶ್ ಎಸ್. ಕೆ. ಪ್ರಭಾರ ಮುಖ್ಯ ಶಿಕ್ಷಕರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು