News Kannada
Friday, October 07 2022

ಕರಾವಳಿ

ಮಣ್ಣಿನ ಮನೆಯೊಳಗೆ ಬದುಕು ಕಟ್ಟಿಕೊಂಡಿರುವ 47 ಕುಟುಂಬ: ಹಕ್ಕುಪತ್ರದ ಕಥೆ ಆ ಬ್ರಹ್ಮನೇ ಬಲ್ಲ..! - 1 min read

Photo Credit :

ಮಣ್ಣಿನ ಮನೆಯೊಳಗೆ ಬದುಕು ಕಟ್ಟಿಕೊಂಡಿರುವ 47 ಕುಟುಂಬ: ಹಕ್ಕುಪತ್ರದ ಕಥೆ ಆ ಬ್ರಹ್ಮನೇ ಬಲ್ಲ..!

ಪುತ್ತೂರು:  ಈ ಪರಿಶಿಷ್ಟ ಜಾತಿ ಕಾಲನಿ ಇರುವುದು ನಗರದ ಹೃದಯ ಭಾಗದಲ್ಲಿ. ಕೆಎಸ್ಆರ್ಟಿಸಿ ಹೈಟೆಕ್ ಬಸ್ ನಿಲ್ದಾಣ ಪಕ್ಕವೇ ಅಂದರೆ ಬಹುತೇಕರಿಗೆ ಗೊತ್ತಾದಿತು.ಬಸ್ ನಿಲ್ದಾಣದ ಆಸುಪಾಸಿನ ಆಧುನಿಕ ಲೋಕದ ಭ್ರಮೆಯೊಂದಿಗೆ, ಕಾಲನಿಯ ಒಳಹೊಕ್ಕರೆ ಅಲ್ಲಿರುವುದು ತದ್ವಿರುದ್ದದ ಸ್ಥಿತಿ. ನಗರಸಭೆಯ ವ್ಯಾಪ್ತಿಯೊಳಗೆ ಸುಮಾರು 100 ವರ್ಷಗಳಿಂದ ಮಣ್ಣಿನ ಮನೆಯೊಳಗೆ ಬದುಕು ಕಟ್ಟಿಕೊಂಡಿರುವ 47 ಕುಟುಂಬಗಳಿಗೆ ಹಕ್ಕುಪತ್ರವೇ ಇಲ್ಲ..!

ಈ ಕಾಲನಿಯ ಹಳೆಯ ಹೆಸರು ಬೊಟ್ಟತ್ತಾರು. ಹಿರಿಯರು ಈಗಲೂ ಅದೇ ಹೆಸರಿನಿಂದ ಗುರುತಿಸುತ್ತಾರೆ. ಇತ್ತೀಚೆಗೆ ಐದು ವರ್ಷಗಳಿಂದ ಬ್ರಹ್ಮನಗರ ಎನ್ನಲಾಗುತ್ತಿದೆ. ಎಪಿಎಂಸಿ ರಸ್ತೆ, ಬಸ್ ನಿಲ್ದಾಣ ಬಳಿ, ಹೂ ಮಾರುಕಟ್ಟೆಯ ಬಳಿಯಿಂದ ಈ ಕಾಲನಿಗೆ ಸಂಪರ್ಕ ಇದೆ. ಸುಮಾರು 47 ಕುಟುಂಬಗಳಿವೆ. 350 ಕ್ಕೂ ಅಧಿಕ ಜನರಿದ್ದಾರೆ. 100 ವರ್ಷದ ಹಿಂದೆ ಶಾಲಾ ಮಾದರಿಯಲ್ಲಿ ಮೂರು ಸಾಲಿನಲ್ಲಿ ಕಟ್ಟಿದ 30 ಮನೆಗಳಿವೆ. ಕೆಲ ಮನೆಗಳಲ್ಲಿ ಎರಡು ಮೂರು ಕುಟುಂಬಗಳ ವಾಸಿಸುತ್ತಿವೆ. ಕೆಲ ವರ್ಷಗಳಿಂದ ಸಾಕ್ಷರತಾ ಪ್ರಮಾಣದಲ್ಲಿ ಪ್ರಗತಿ ಕಂಡಿದೆ. ಬಹುತೇಕ ಕುಟುಂಬದ ಜೀವನ ನಿರ್ವಹಣೆ ಇರುವುದು ಕೂಲಿ ಕೆಲಸದಿಂದಲೇ.

ಹಳೆಯ ಮಣ್ಣಿನ ಮನೆಯೊಳಗೆ ಪುಟ್ಟ ಮಕ್ಕಳು ಜೀವ ಕೈಯಲ್ಲಿ ಇಟ್ಟು ಕೂರಬೇಕಾದ ಸ್ಥಿತಿ. ಮಳೆಗಾಲದಲ್ಲಿ ಬೀಸುವ ಜೋರಾದ ಗಾಳಿ ಮನೆಯನ್ನು ಅಲ್ಲಾಡಿಸುವ ಬಿಡುತ್ತದೆ ಎನ್ನುವ ಭಯ ಇಲ್ಲಿನದು. ಹೊಸ ಮನೆ ಕಟ್ಟೋಣ ಎಂದು ನಗರಸಭೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅದಕ್ಕೆ ಕಾರಣ 47 ಕುಟುಂಬ ವಾಸವಿರುವ ಬಗ್ಗೆ ಆಧಾರ ಇಲ್ಲ. ಹಕ್ಕುಪತ್ರ ಇಲ್ಲ. ಪ್ರಭಾಕರ್ ರಾವ್ ಅವರಿಗೆ ಸೇರಿದ ಸ್ಥಳ ಎಂದು ಕೆಲ ಹಿರಿಯರು ಅಲ್ಲಿ ನೆನೆಪಿಸುತ್ತಾರೆ. ಅವರು ಈಗಿಲ್ಲ. ಆ ಕುಟುಂಬದವರು ಎಲ್ಲಿದ್ದಾರೆ ಎನ್ನುವ ಮಾಹಿತಿ ದೊರೆಯದ ಕಾರಣ, ಅತ್ತ ಹಕ್ಕುಪತ್ರ ಕನಸು ಗಗನಕುಸುಮವಾಗಿದೆ.

ಇಕ್ಕಟ್ಟಾದ ಮನೆ. ಚರಂಡಿ ನೀರು ಹರಿಯಲು ಸಮಸ್ಯೆ. ಕಾಲನಿಯ ತ್ಯಾಜ್ಯ ಸಂಪರ್ಕ ರಸ್ತೆಯ ಬದಿಯೇ ರಾಶಿ ಬಿದ್ದು, ಸಾಂಕ್ರಾಮಿಕ ಕೇಂದ್ರವಾಗುವ ಭೀತಿ ಇಲ್ಲಿನದು. ಕೆಲ ಮನೆಗಳ ಮುಂಭಾಗದಲ್ಲಿ ತ್ಯಾಜ್ಯ ಹರಿಯದೆ ರಾಶಿ ಬಿದ್ದಿದೆ. ಟಾಯ್ಲೆಟ್ ಹೊಂಡ ಮನೆಗಳ ಮುಂಭಾಗದ ವಠಾರದಲ್ಲಿ ಇದ್ದು, ಅದು ಓವರ್ ಪುಲ್ ಆದಾಗ ಕಾಲನಿಯಲ್ಲಿ ದುರ್ನಾತ ಬೀರುತ್ತದೆ ಎನ್ನುತ್ತಾರೆ ಕಾಲನಿಯ ನಿವಾಸಿಗಳು.

ಕಾಲನಿಯ 47 ಕುಟುಂಬಕ್ಕೆ ಇರುವುದು ಕೇವಲ 12 ಶೌಚಾಲಯಗಳು. ಅದು 10 ಮನೆಗಳಿಗೆ 4 ರಂತೆ. ಪುರಸಭೆಯ ಅವಯಲ್ಲಿ ನಿರ್ಮಿಸಲಾಗಿದೆ. 350 ಜನರಿಗೆ ಅದು ಸಾಲುತ್ತಿಲ್ಲ. ಎರಡು ಮನೆಗೊಂದರಂತೆ ಆದರೂ ಶೌಚಾಲಯದ ವ್ಯವಸ್ಥೆ ಬೇಕು ಎನ್ನುತ್ತಾರೆ ಕಾಲನಿ ನಿವಾಸಿಗಳು. ದೂರದ ಊರಿನಿಂದ ನೆಂಟರು ಬಂದರೆ ಇಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟ. ಮೂಲಭೂತ ವ್ಯವಸ್ಥೆ ಇಲ್ಲದ ಪರಿಣಾಮ, ನೆಂಟರು ಬರುತ್ತಾರೆ ಅಂದರೆ ನಮಗೆ ಮುಜುಗರವಾಗುತ್ತದೆ ಎಂದು ಅಳಲು ತೋಡಿಕೊಂಡರು ಕಾಲನಿಯ ಗೃಹಿಣಿಯೋರ್ವರು.

See also  ಮುಲ್ಕಿ ಉದ್ಯಮಿ ಮನೆಗೆ ಗುಂಡಿನ ದಾಳಿ

ಕೆಲ ಮನೆಗಳ ಮುಂಭಾಗದಲ್ಲಿನ ಸ್ನಾನಗೃಹಗಳು ಬೀಳುವ ಹಂತದಲ್ಲಿದೆ. ಟರ್ಪಾಲು, ಗೋಣಿ ಚೀಲ ಹಾಕಿ ಅದನ್ನೆ ಸ್ನಾನ ಗೃಹವನ್ನಾಗಿ ಮಾಡಿದವರು ಇದ್ದಾರೆ. ಮಳೆಗಾಲದಲ್ಲಿ ಅದರ ಕಥೆ ಹೇಳಿ ಸುಖವಿಲ್ಲ ಎನ್ನುತ್ತಾರೆ ಕಾಲನಿ ನಿವಾಸಿಗಳು. ಪುಟ್ಟ-ಪುಟ್ಟ ಮಕ್ಕಳು ಕಾಲನಿಯಲ್ಲಿದ್ದು, ಈ ಹಿಂದೆ ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗ ಉಂಟಾಗಿತ್ತು. ಹಾಗಾಗಿ ಅವ್ಯವಸ್ಥೆಯ ಸ್ನಾನಗೃಹಗಳಿಂದ ಭೀತಿ ಎದುರಾಗಿದೆ.
ಕಾಲನಿಯಲ್ಲಿ ಚರಂಡಿ ವ್ಯವಸ್ಥೆ ಇದೆ. ಆದರೆ ಅದರಲ್ಲಿ ಮಳೆ ನೀರು, ತ್ಯಾಜ್ಯ ಸಮಪರ್ಕವಾಗಿ ಸಾಗುತ್ತಿಲ್ಲ. ಪಡಿತರ ವ್ಯವಸ್ಥೆ ಹೆಚ್ಚಿನ ಮನೆಗಳಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ ಸದ್ಯಕ್ಕಿಲ್ಲ. ನೇರವಾಗಿ ಮನೆಗಳಿಗೆ ಸಂಪರ್ಕ ರಸ್ತೆಗಳು ಇಲ್ಲ.

ನನ್ನ ನೆನೆಪಿನ ಪ್ರಕಾರ ಈ ಮನೆಗಳಿಗೆ 80 ವರ್ಷ ಕಳೆದಿದೆ. ತಂದೆ ತಾಯಿ ಕಾಲದಿಂದಲೂ ಇಲ್ಲಿ ವಾಸವಿದ್ದೇವೆ. ಪ್ರಭಾಕರ್ ಅವರು ನಮಗೆ ಇಲ್ಲಿರಲು ಅವಕಾಶ ಕಲ್ಪಿಸಿದ್ದರು. ಅವರೆ ಕ್ವಾಟ್ರಸ್ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಿಂತ ಮೊದಲು ಇಲ್ಲಿ ಮುಳಿ ಮಾಡಿನ ಮನೆ ಇತ್ತು. ಹಕ್ಕುಪತ್ರ ಬೇಕು ಎಂಬ ಬೇಡಿಕೆ ಹಲವು ವರ್ಷದ್ದು. ಇದಕ್ಕೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಕಾಲನಿಯ ಹಿರಿಯ ವ್ಯಕ್ತಿ ಹುಕ್ರ.

ಹಕ್ಕುಪತ್ರ ಬೇಕು
ಈ ಹಿಂದೆ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾವನೆ ಇತ್ತು. ಬಳಿಕವದು ಮುಂದುವರಿಯಲಿಲ್ಲ. ಈ ಸ್ಥಳದ ವಾರಿಸುದಾರರ ಪೈಕಿಯೊಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ನಮಗೆ ಹಕ್ಕುಪತ್ರ ಒದಗಿಸಿಕೊಟ್ಟರೆ ಬಹುತೇಕ ಸಮಸ್ಯೆ ನೀಗುತ್ತದೆ.
ಅಶೋಕ್, ಕಾಲನಿ ನಿವಾಸಿ

ಸರಕಾರಕ್ಕೆ ಪ್ರಸ್ತಾಪ
ಇಲ್ಲಿನ ಸಮಸ್ಯೆ ಪರಿಹಾರಕ್ಕೆ ನಗರಸಭೆಯ ವತಿಯಿಂದ ಸರಕಾರಕ್ಕೆ ಬರೆಯಬೇಕಿದೆ. ಸುಮಾರು 100 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ವಾರಿಸುದಾರರು ಮೃತಪಟ್ಟ ಕಾರಣ, ಅದರ ಮುಂದಿನ ಪ್ರಕ್ರಿಯೆ ಬಗ್ಗೆ ಸಮಸ್ಯೆ ಆಗಿದೆ. ಅದಕ್ಕಾಗಿ ಸರಕಾರ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.
ರೇಖಾ ಜೆ ಶೆಟ್ಟಿ
ಪೌರಯುಕ್ತೆ, ನಗರಸಭೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು